ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಮಗನ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರೇ ಇದನ್ನು ಸಮರ್ಥವಾಗಿ ತನಿಖೆ ನಡೆಸುತ್ತಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಸಿಐಡಿಗೆ ವಹಿಸುವುದಿಲ್ಲ ಎಂದರು.
ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ರೇಣುಕಾಚಾರ್ಯ ಮತ್ತು ಅವರ ಕುಟುಂಬದ ಸದಸ್ಯರು ನೀಡಿರುವ ಮಾಹಿತಿ ಹಾಗೂ ಸಹೋದರ ಕೊಟ್ಟಿರುವ ದೂರನ್ನು ಆಧರಿಸಿ ತನಿಖೆ ನಡೆಯಲಿದೆ. ಸತ್ಯಾಂಶ ಶೀಘ್ರದಲ್ಲೇ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೊಲೆಯ ಬಗ್ಗೆ ರೇಣುಕಾಚಾರ್ಯ ಮತ್ತು ಅವರ ಸಹೋದರರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಕೊಲೆಯೋ, ಅಪಘಾತವೋ ಎಂಬುದು ತನಿಖೆಯಿಂದ ಮಾತ್ರ ಗೊತ್ತಾಗಲಿದೆ. ಇಂತಹ ಸಂದರ್ಭದಲ್ಲಿ ಊಹಾಪೋಹಗಳಿಗೆ ಉತ್ತರ ಕೊಡುವುದು ಸಮಂಜಸವಲ್ಲ ಎಂದರು.



