ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ಜಾರಿಗೆ ಹೊಸ ಕಾನೂನು

7 hours ago

ಬೆಂಗಳೂರು: ಕರ್ನಾಟಕದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಬಹುದಿನದ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಕುರಿತಂತೆ ಕನ್ನಡಪರ ಸಂಘಟನೆಗಳು, ಚಿಂತಕರು ಮತ್ತು ಸಾಹಿತಿಗಳ ಅಭಿಪ್ರಾಯ ಆಲಿಸಿರುವ ರಾಜ್ಯ ಸರ್ಕಾರ ಇದೀಗ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಿ ಹೊಸ ಕಾನೂನು ಜಾರಿಗೊಳಿಸಲು ತೀರ್ಮಾನಿಸಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕ‌ ಸಿದ್ಧಪಡಿಸಿದ್ದು ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

ವಿಧಾನ ಮಂಡಲದ ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಅನುಮೋದನೆಗಾಗಿ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಹೊಸದಾಗಿ ರೂಪಿಸಲಾಗುತ್ತಿರುವ ಕಾನೂನಿನ ಪ್ರಕಾರ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಕಾರ್ಯ ಆರಂಭ ಮಾಡಲಿರುವ ಖಾಸಗಿ ಸಂಸ್ಥೆಗಳಲ್ಲಿ ವ್ಯವಸ್ಥಾಪಕ ಹುದ್ದೆಗಳಿಗೆ ಶೇ. 50, ವ್ಯವಸ್ಥಾಪಕೇತರ ಹುದ್ದೆಗಳಿಗೆ ಶೇ. 70 ಮತ್ತು ಗ್ರೂಪ್ ‘ಸಿ’ ಹಾಗೂ ‘ಡಿ’ ದರ್ಜೆಯ ಹುದ್ದೆಗಳಿಗೆ ಶೇ. 100 ರಷ್ಟು ಕರ್ನಾಟಕದವರಿಗೆ ಉದ್ಯೋಗ ನೀಡಬೇಕು.

ನೂತನ ಕಾನೂನಿನ ಅನ್ವಯ  ಕರ್ನಾಟಕದಲ್ಲಿ ಜನಿಸಿದವರು, ಅಥವಾ ಕನಿಷ್ಠ 15 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವವರು ಅಥವಾ ಕನ್ನಡ ಭಾಷೆಯಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿರುವವರನ್ನು ಮಾತ್ರ ‘ಸ್ಥಳೀಯರು’ ಎಂದು ಪರಿಗಣಿಸಲಾಗುತ್ತದೆ. ಈ ವಿಧೇಯಕವನ್ನು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸನ ರೂಪಿಸಲು ಸರ್ಕಾರ ಸಜ್ಜಾಗಿದ್ದು, ಇದು ಸ್ಥಳೀಯರ ಉದ್ಯೋಗ ಹಿತಾಸಕ್ತಿ ಕಾಪಾಡುವ ಗುರಿ ಹೊಂದಿದೆ.

Leave a Reply