ನಮ್ಮ ಹೆಮ್ಮೆಯ ನ್ಯೂಸ್ ಚಾನೆಲ್ಲುಗಳು!
ಈಗ ಒಂದು ವಾರದಿಂದ ಪಾಪಾ, ನಮ್ಮ ನ್ಯೂಸ್ ಚಾನೆಲ್ಲುಗಳ ಯಾತನೆ ನೋಡಕ್ಕಾಗ್ತಾ ಇರಲಿಲ್ಲ ಕಣ್ರಿ.. ಎಲೆಕ್ಟೋರಲ್ ಬಾಂಡ್ ಹಗರಣ, ಸುಪ್ರೀಂ ಕೋರ್‍ಟ್ ತಪರಾಕಿ, ಬಿಜೆಪಿ ಟಿಕೆಟ್ ಭಿನ್ನಮತ, ಬಿಜೆಪಿ-ಜೆಡಿಎಸ್ ಮೈತ್ರಿ ನಡುವಿನ ಟಿಕೆಟ್ ಕಗ್ಗಂಟು…. ಹೀಗೆ ಅವರಿಗೆ ಕಸಿವಿಸಿಯಾಗುವಂತಹ ಸುದ್ದಿಗಳದ್ದೇ ಕಾರುಬಾರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಮೋದಿಗಾಗಲಿ, ಬಿಜೆಪಿಗಾಗಲಿ ಕುಂದುಬರದಂತೆ ಈ ಸುದ್ದಿಗಳನ್ನು ಹೇಗೆ ಮ್ಯಾನೇಜ್ ಮಾಡೋದು ಅಂತ ಗೊತ್ತಾಗದೆ ವಿಪರೀತ ಒದ್ದಾಡಿದರು. ಆದರೆ ಈಗ ಮತ್ತೆ ಅವರಿಗೆ ಅಚ್ಚೇ ದಿನಗಳು ಶುರುವಾಗಿವೆ. ನಗರ್ತ ಪೇಟೆಯಲ್ಲಿ ಅದ್ಯಾವುದೋ ಕ್ಷುಲ್ಲಕ ಜಗಳಕ್ಕೆ ಕೋಮುಬಣ್ಣ ಬಳಿದು ತಮ್ಮ ಇಷ್ಟೂ ದಿನಗಳ ಕಸಿವಿಸಿಯನ್ನು ಒಂದೇ ಏಟಿಗೆ ಕಳೆದುಕೊಳ್ಳುತ್ತಿವೆ… ಅಬ್ಬಬ್ಬಾ ಅದೇನು ಟೈಟಲ್ಲುಗಳು, ಅದೆಂತ ಟೆಂಪ್ಲೇಟುಗಳು, ಆಂಕರುಗಳ ಧ್ವನಿಗೆ ಅದೆಂಥಾ ಧೀಶಕ್ತಿ….
ಎಲೆಕ್ಟೋರಲ್ ಬಾಂಡ್ ಹಗರಣ ಬಯಲಿಗೆ ಬಂದಾಗಿನಿಂದ ಹೆಚ್ಚೂಕಮ್ಮಿ ಸತ್ತಂತಾಗಿದ್ದ ನಮ್ಮ ಮೀಡಿಯಾಗಳಿಗೆ ಈಗ ಹೊಸ ಶಕ್ತಿಸಂಚಾರವಾಗಿದೆ.
ಅಂದಹಾಗೆ, ಕಳೆದ ಒಂದು ದಶಕದಿಂದೀಚೆಗೆ ಮಾಧ್ಯಮಗಳು ಬಿಜೆಪಿ ಪಕ್ಷದ ರಾಜಕೀಯ ಮತ್ತು ಕೋಮುವಾದಿ ಸಿದ್ದಾಂತಗಳ ವಕ್ತಾರಿಕೆಗೆ ತಮ್ಮನ್ನು ಕುಗ್ಗಿಸಿಕೊಂಡಿರುವುದು ಹಲವು ಸಮೀಕ್ಷೆಗಳಿಂದಲೇ ಬಯಲಾಗಿದೆ. ಕಳೆದ ವರ್ಷ ಸಿ.ಎಸ್.ಡಿ.ಎಸ್-ಲೋಕನೀತಿ ಸಂಸ್ಥೆ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಶೇ. 82ರಷ್ಟು ಹಿರಿಯ ಪತ್ರಕರ್ತರು “ಇವತ್ತಿನ ಮೀಡಿಯಾಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿವೆ” ಎಂದಿದ್ದರು. ಅಲ್ಲದೇ, ಶೇ.61ರಷ್ಟು ಹಿರಿಯ ಪತ್ರಕರ್ತರು “ಮೀಡಿಯಾಗಳು (ರಾಷ್ಟ್ರೀಯ) ವಿರೋಧ ಪಕ್ಷಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ” ಎಂದಿದ್ದರು.
ಇನ್ನು ಅಂತಾರಾಷ್ಟ್ರೀಯ ರಾಯಿಟರ್‍ಸ್ ಸಂಸ್ಥೆ ಬಿಡುಗಡೆ ಮಾಡಿದ ಡಿಜಿಟಲ್ ನ್ಯೂಸ್ ರಿಪೋರ್ಟ್ ‘ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಮೀಡಿಯಾಗಳು 12 ಪಾಯಿಂಟ್ ಪರ್ಸೆಂಟೇಜ್ ನಷ್ಟು ವೀಕ್ಷಣೆಯನ್ನು ಕಳೆದುಕೊಂಡಿವೆ ಎಂದು’ ಹೇಳಿದೆ.
ಅಷ್ಟಕ್ಕೂ ಪತ್ರಿಕೋದ್ಯಮ ಮಾಡುವವರಿಗೆ ಜನರ ವಿಶ್ವಾಸಾರ್ಹತೆ, ವ್ಯೂವರ್‍ಸ್ ರ್‍ಯಾಂಕ್ ಮುಖ್ಯವಾಗುತ್ತವೆ. ಆದರೆ ಯಾವುದೋ ಒಂದು ಪಕ್ಷಕ್ಕೆ ಚಮಚಾಗಿರಿ ಮಾಡೋರಿಗೆ, ಯಾವುದೋ ಒಂದು ಸಿದ್ಧಾಂತಕ್ಕೆ ಬಲಿಯಾಗಿ ಸಮಾಜಕ್ಕೆ ಬೆಂಕಿ ಹಚ್ಚೋರಿಗೆ ಇವೆಲ್ಲ ಯಾಕೆ ಬೇಕು ಅಲ್ವಾ?
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




