ಬೆಂಗಳೂರು: ಮಾದಕವಸ್ತು ಸಾಗಾಣಿಕೆ ಮತ್ತು ಮಾರಾಟದ ವಿರುದ್ಧ ಸಮರ ಸಾರಿದ ಬೆಂಗಳೂರು ಪೊಲೀಸರು ದೇಶದಲ್ಲೇ ಪ್ರಥಮ ಬಾರಿಗೆ ಎನ್ ಡಿಪಿಎಸ್ ಕಾಯ್ದೆಯ 5(ಎ) ಕಲಂ. 68(ಇ) ಹಾಗೂ (ಎಫ್) ರಲ್ಲಿನ ಅಧಿಕಾರ ಚಲಾಯಿಸಿದ್ದಾರೆ. ಈ ಕಾಯಿದೆಯಡಿ ವಿದೇಶಿ ಡ್ರಗ್ ಪೆಡ್ಲರ್ ಒಬ್ಬ ಅಕ್ರಮವಾಗಿ ಗಳಿಸಿದ್ದ 12 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಕಳೆದ ನವೆಂಬರ್ ನಲ್ಲಿ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದ ನೈಜೀರಿಯಾದ ಡ್ರಗ್ ಪೆಡ್ಲರ್ ಪೀಟರ್ ರೂಢಿಗತ ಖದೀಮನಾಗಿದ್ದು, ಈತನ ಬಳಿ ನಗದು, ವಿವಿಧ 7 ಬ್ಯಾಂಕ್‍ಗಳ ಪಾಸ್‍ಬುಕ್, ಡೆಬಿಟ್ ಕಾರ್ಡ್‌ಗಳಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸಂಗ್ರಹಿಸಿ ತನಿಖೆ ನಡೆಸಿದ್ದರು.
ತನಿಖೆಯಲ್ಲಿ ಪೀಟರ್ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ 2,55,050/- ಹಾಗೂ ಇತರೆ ಹೆಸರಿನಲ್ಲಿದ್ದ 5 ಬ್ಯಾಂಕ್ ಖಾತೆಗಳಲ್ಲಿದ್ದ 4,90,232ರೂ ಹಣದ ವಿವರಗಳನ್ನು ತನಿಖೆಯಿಂದ ಧೃಡಪಡಿಸಿಕೊಂಡು ಎನ್.ಡಿ.ಪಿ.ಎಸ್ ಕಾಯ್ದೆ-1985 ರ ಅಧ್ಯಾಯ 5(ಎ)ರಲ್ಲಿರುವ ಕಲಂ-68(ಇ) & (ಎಫ್) ರೀತ್ಯಾ ತನಿಖಾಧಿಕಾರಿಗಳಿಗಿರುವ ಸಿಕ್ಕ ಅಧಿಕಾರವನ್ನು ಚಲಾಯಿಸಿ ನಗದು ಹಾಗೂ 7 ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದ ಒಟ್ಟು 12,60,282 ರೂ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಆದೇಶವನ್ನು ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.
ವಿದೇಶಿ ಡ್ರಗ್ ಪೆಡ್ಲರ್ ಪೀಟರ್ 2018ರಲ್ಲಿ ಭಾರತಕ್ಕೆ ವೈದ್ಯಕೀಯ ವೀಸಾದಲ್ಲಿ ಬಂದಿದ್ದು, 2022ರಲ್ಲಿ ಮಣಿಪುರದ ಮಹಿಳೆಯನ್ನು ಮದುವೆಯಾಗಿದ್ದ ಆಕೆಯ ಹೆಸರಿನಲ್ಲಿ ನಗರದಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಈ ಖಾತೆಗಳಿಂದ ಗೂಗಲ್ ಪೇ & ಪೋನ್ ಪೇ ಮೂಲಕ ಡ್ರಗ್ ಪೆಡ್ಲಿಂಗ್ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಅಂಶಗಳು ತನಿಖೆಯಿಂದ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.




