ಶಸ್ತ್ರಾಸ್ತ್ರಗಳನ್ನು ಪಕ್ಕಕ್ಕಿಟ್ಟು ನಕ್ಸಲೀಯರು ಶರಣಾಗಿ ಮುಖ್ಯವಾಹಿನಿ ಪ್ರವೇಶಿಸಿ: ಡಾ.ಜಿ.ಪರಮೇಶ್ವರ್

1 year ago

ಬೆಂಗಳೂರು: ಶಸ್ತ್ರಾಸ್ತ್ರಗಳನ್ನು ಪಕ್ಕಕ್ಕಿಟ್ಟು ನಕ್ಸಲೀಯರು ಶರಣಾಗುವ ಮೂಲಕ ಸಮಾಜದ ಮುಖ್ಯವಾಹಿನಿ ಪ್ರವೇಶಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲೀಯ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮನವೊಲಿಸಿ ಶರಣಾಗತಿ ಮಾಡಿಸಲು ಪ್ರಗತಿಪರ ಚಿಂತಕರು ಮುಂದಾಗಬೇಕು ಎಂದು ಮನವಿ ಮಾಡಿದರು.

ಜೊತೆಗೆ ಉಡುಪಿಯ ಹೆಬ್ರಿ ಅರಣ್ಯ ಪ್ರದೇಶದಲ್ಲಿನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ನಕಲಿ ಅಲ್ಲ ಎಂದು ಸ್ಪಷ್ಟೀಕರಣವನ್ನೂ ನೀಡಿದರು.

ಈಗ ಎನ್ಕೌಂಟರ್ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವವರು ಹಿಂದೆ ವಿಕ್ರಂಗೌಡನನ್ನು ಶರಣಾಗಲು ಮನವಿ ಮಾಡಿದ್ದರು. ಅಲ್ಲಿಗೆ ನಕ್ಸಲೀಯ ಚಟುವಟಿಕೆ ಸರಿಯಿಲ್ಲ ಎಂದು ಅವರೇ ಒಪ್ಪಿಕೊಂಡಂತಾಯಿತು. ಹಲವು ಹಿರಿಯರ ಸಲಹೆಗಳನ್ನು ಧಿಕ್ಕರಿಸಿ ವಿಕ್ರಂಗೌಡ ಚಟುವಟಿಕೆಯಲ್ಲಿ ಮುಂದುವರೆದಿದ್ದರು ಎಂದರು.

ತಮ್ಮ ಜೊತೆ ಅಪಾಯಕಾರಿಯಾದ ಆಯುಧಗಳನ್ನು ಕೊಂಡೊಯ್ಯುತ್ತಿದ್ದರು. ಪೊಲೀಸರು ಶರಣಾಗಲು ಸೂಚಿಸಿದಾಗ ಅವರು ಅದನ್ನು ಧಿಕ್ಕರಿಸಿದ್ದರು. ಹೀಗಾಗಿ ಎನ್ಕೌಂಟರ್ ಮಾಡಲಾಗಿದೆ. ಇದು ನಕಲಿ ಎನ್ಕೌಂಟರ್ ಅಲ್ಲ. 20 ವರ್ಷದಿಂದಲೂ ಆತನ ಮೇಲೆ ನಿಗಾ ವಹಿಸಲಾಗಿತ್ತು. ಆತ ಯಾವ ರೀತಿ ಚಟುವಟಿಕೆ ಮಾಡುತ್ತಿದ್ದ? ಜನವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ? ಹೀಗಾಗಿ ಆತ ನಕ್ಸಲ್ ವರ್ಗೀಕರಣಕ್ಕೆ ಸೇರಿದ್ದ ಎಂದರು.

ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ಒಡಿಶಾ, ಕೇರಳ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಪಡೆಗಳನ್ನು ರಚಿಸಲಾಗಿತ್ತು. ನಕ್ಸಲೀಯ ಚಟುವಟಿಕೆಯಲ್ಲಿರುವವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಗಳು ಮುಂದುವರೆಯಬೇಕು. ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಎಂಬ ಗುಂಪು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಅನುಕೂಲಸ್ಥರ ಬಳಿ ಹಣ ಕೇಳುವುದು, ಅವರ ಜಮೀನಿಗೆ ಬೇಲಿ ಹಾಕುವುದು, ಅದರಿಂದ ಕಿತ್ತು ಬಡವರಿಗೆ ಕೊಡುವುದನ್ನು ಮಾಡುತ್ತಿದ್ದರು. ಇದು ಮಿತಿ ಮೀರಿದಾಗ ಪೊಲೀಸರಿಗೆ ತಲೆನೋವಾಗಿತ್ತು. ನಾವೆಲ್ಲಾ ಮನವಿ ಮಾಡಿಕೊಂಡಾಗ ನೂರಾರು ಜನ ಬಂದು ತಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತರಾದರು ಎಂದರು.

Leave a Reply