ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತ್ಯಾಗ, ಬಲಿದಾನ ನೀಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕಾಂಗ್ರೆಸ್ ಪಕ್ಷದ ವತಿಯಿಂದ ಕಮಲಾ ನಗರದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಪ್ರಯುಕ್ತ 500 ಅಡಿ ಉದ್ದದ ತ್ರಿರ್ವಣ ಧ್ವಜದ ಜೊತೆಯಲ್ಲಿ ಜಾಥಾದಲ್ಲಿ ಮಾತಾಡಿದ ಅವರು, ಇಂದು ಕೋಮುವಾದ, ಜಾತಿವಾದದಿಂದ ದೇಶ ನರಳುತ್ತಿದೆ. ಜಾತ್ಯತೀತ ಸಿದ್ದಾಂತ, ಸ್ನೇಹ, ಸಹಬಾಳ್ಮೆಯಿಂದ ಬದುಕಲು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಯಬೇಕು. ಸಹೋದರತ್ವ, ಸಹಬಾಳ್ಮೆಯಿಂದ ಎಲ್ಲರು ಜೀವನ ಸಾಗಿಸಿದಾಗ ದೇಶ ಅಭಿವೃದ್ದಿ ಸಾಧ್ಯ ಎಂದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಸ್ವಾತಂತ್ರ್ಯ ಅರ್ಥ ಇಂದಿನ ಯುವಕರು ಅರ್ಥ ಮಾಡಿಕೊಳ್ಳಬೇಕು. ನಾಡು, ನುಡಿ, ದೇಶಭಿಮಾನವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜು ಮಾತನಾಡಿ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪ್ರತಿ ವಾರ್ಡ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಉಚಿತವಾಗಿ ತ್ರಿರ್ವಣ ಧ್ವಜ ವಿತರಣೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹನೀಯರುಗಳ ಸಂದೇಶವನ್ನು ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗಂಗಾಧರೇಶ್ವರ ಶಾಲೆಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ, 500 ಅಡಿ ಉದ್ದದ ತ್ರಿರ್ವಣ ಧ್ವಜದ ಜೊತೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ನಾಡಿನ ಸೇವೆ ಮಾಡಿದ ಗಣ್ಯ ಮಹನೀಯರುಗಳ ವೇಷತೊಟ್ಟ ಮಕ್ಕಳು ನಡಿಗೆ ಜಾಥಾದಲ್ಲಿ ಪಾಲ್ಗೊಂಡರು.
ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎ.ಆನಂದ್, ವಿ.ಎಸ್.ಆರಾಧ್ಯ, ನರಸಿಂಹಮೂರ್ತಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.




