ದೇಶವನ್ನು ದಿವಾಳಿ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ: ಸಿದ್ದರಾಮಯ್ಯ

3 years ago

#pm #NarendraModi #bankrupted #country #Siddaramaiah #grihajyothi

ಕಲಬುರಗಿ: ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರುಗಳಿಗೆ ಜನ ಸಾಮಾನ್ಯರ ಕಲ್ಯಾಣದ ಬಗ್ಗೆ ಬದ್ದತೆಯಿದ್ದರೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳನ್ನು ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನವನ್ನು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, 5 ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ. ವಿರೋಧ ಪಕ್ಷದವರು ಈ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ವಿರೋಧ ಪಕ್ಷದವರಲ್ಲದೇ ಈ ದೇಶದ ಪ್ರಧಾನಿಗಳು ಕೂಡ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ. ಈ ದೇಶವನ್ನು ದಿವಾಳಿ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಎಲ್ಲ ಭರವಸೆಗಳನ್ನು ಈಡೇರಿಸಿದಾಗ ಆರ್ಥಿಕವಾಗಿ ಸುಭದ್ರವಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ, ಬೆಲೆ ಏರಿಕೆ ಮಾಡಿ, ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚು ಮಾಡಿ, ರಾಜ್ಯದ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಯಿತು ಎಂದು ಆರೋಪಿಸಿದರು.

ಹೈದರಬಾದ್ ಕರ್ನಾಟದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದೇ ಬಿಜೆಪಿ ಕೊಡುಗೆ. ಅದನ್ನು ಬಿಟ್ಟರೆ ಈ ಪ್ರದೇಶದ ಅಭಿವೃದ್ಧಿಗೆ ಯಾವುದೇ ನೆರವು ನೀಡಲಿಲ್ಲ ಎಂದು ದೂರಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಕರ್ನಾಟಕದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಹಿಂದುಳಿಯುವಂತೆ ಮಾಡಿದರು. ಆದರೆ ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವುದರಿಂದ ಹೊಟ್ಟೆಉರಿಯಿಂದ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.

ವಿರೋಧ ಪಕ್ಷದವರು ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆಯೂ ಗುಲ್ಲೆಬ್ಬಿಸಿದರು. ಬಡವರ ವಿರೋಧಿ ಸರ್ಕಾರ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಮೊದಲು ಒಪ್ಪಿಗೆ ನೀಡಿ, ನಂತರ ಅಕ್ಕಿ ಕೊಡದೇ ರಾಜಕೀಯ ಮಾಡಿದರು. ರೂ. 34 ರಂತೆ ಹಣ ಕೊಡುತ್ತೇವೆ ಎಂದರೂ ಅವರು ಬಡವರಿಗೆ 5 ಕೆಜಿ ಅಕ್ಕಿಯನ್ನು ನೀಡಲಿಲ್ಲ. ಬಡತನ ಹಿಂಸೆಯ ಅತಿ ಕೆಟ್ಟ ರೂಪ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ದೇಶದಲ್ಲಿ ಅಸಮಾನತೆ ಇದೆ, ಬಡತನ ಹಾಗೂ ಶ್ರೀಮಂತಿಕೆ ಇದೆ. ಇದನ್ನು ಹೋಗಲಾಡಿಸುವ ಕೆಲಸ ನಾವು ಮಾಡಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾವು ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 4 ಕೆಜಿಗೆ ಇಳಿಸಿದ್ದರು ಎಂದರು.

ಬೆಲೆಏರಿಕೆಯ ಮೂಲಕ ಮೋದಿಯವರು ಜನರ ಬಳಿ ಇದ್ದ ದುಡ್ಡು ಕಿತ್ತುಕೊಳ್ಳತ್ತಾರೆ ಎಂದು ಮುಖ್ಯಮಂತ್ರಿಗಳು ವಿರೋಧಪಕ್ಷದವರ ಮಾತುಗಳಿಗೆ ಕಿವಿ ಕೊಡಬೇಕಾದ ಅಗತ್ಯವಿಲ್ಲ ಎಂದರು.

ಕಲಂ 371 ಜೆ ಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ಹೇಳಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿ ತೋರಿಸಿದೆ ಎಂದರು.

ಕರ್ನಾಟಕ ಸರ್ಕಾರ ಎಂದಿಗೂ ಮಾತಿಗೆ ತಪ್ಪುವುದಿಲ್ಲ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಹೇಳಿಸಿರುವ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಹಾಗೂ ಬಜೆಟ್ ನಲ್ಲಿ ಹೇಳಿರುವ ಯೋಜನೆಗಳನ್ನು ಜಾರಿ ಮಾಡದೇ ಇರುವುದಿಲ್ಲ ಎಂದು ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಶರಣಪ್ರಕಾಶ ಪಾಟೀಲ್ ದರ್ಶನಾಪುರ್, ಶಾಸಕರಾದ ಅಲ್ಲಂಪ್ರಭು, ಕನೀಜ್ ಫಾತಿಮಾ, ಬಿ.ಆರ್.ಪಾಟೀಲ್, ಎಂ.ವೈ ಪಾಟೀಲ್ ಉಪಸ್ಥಿತರಿದ್ದರು.

Leave a Reply