ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಆಕ್ರಮದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ, ಟಿ.ಜೆ. ಅಬ್ರಹಾಂ ಪರ ವಕೀಲ ರಂಗನಾಥ್ ಅವರ ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಸೆಪ್ಟೆಂಬರ್ 2ರ ಮಧ್ಯಾಹ್ನಕ್ಕೆ ಮುಂದೂಡಿದರು. ಅಲ್ಲಿಯವರೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ವಿರುದ್ಧ ಪ್ರಕರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿರುವ ತಡೆಯಾಜ್ಞೆ ಮುಂದುವರಿಸುವಂತೆ ಸೂಚಿಸಿದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಪರವಾಗಿ ವಾದ ಮಂಡಿಸಿದ ರವಿವರ್ಮ ಕುಮಾರ್, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳಡಿಯಲ್ಲಿ ತನಿಖೆಗೆ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರ. ಐಪಿಸಿ ಸೆಕ್ಷನ್‌ನಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ. ಸಿಎಂ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ ಎಂದು ಕೇಳಿದರು.
ರಾಜ್ಯಪಾಲರ ಪರವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದಲ್ಲಿ ರಾಜ್ಯಪಾಲರು ನೈಸರ್ಗಿಕ ನ್ಯಾಯ ವ್ಯವಸ್ಥೆಯನ್ನು ಎತ್ತಿ ಹಿಡಿದಿದ್ದಾರೆ. ಅಬ್ರಾಹಂ ಅವರು ತನಿಖೆಗೆ ಅನುಮತಿ ಕೋರಿ ಮನವಿ ಸಲ್ಲಿಸುತ್ತಿದ್ದಂತೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೀಡಿ ವಿವರ ಕೇಳಿದ್ದಾರೆ ಎಂದರು.
ಇದಕ್ಕೆ ಪ್ರತಿಯಾಗಿ ಸಂಪುಟ ಸಭೆ ಈ ಶೋಕಾಸ್ ನೀಡಿರುವ ಕ್ರಮ ಸರಿಯಲ್ಲ ಅದನ್ನು ವಾಪಸ್ ಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ಮಾಡಿದೆ. 91 ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇತಿಹಾಸದಲ್ಲಿಯೇ ಇಷ್ಟು ಪುಟಗಳ ಕ್ಯಾಬಿನೆಟ್ ನಿರ್ಧಾರವನ್ನು ಯಾರೂ ತೆಗೆದುಕೊಂಡಿಲ್ಲ. ಅಡ್ವೋಕೇಟ್ ಜನರಲ್ ಅಭಿಪ್ರಾಯದ ಕಾಮಾ, ಫುಲ್ ಸ್ಟಾಪ್ ಅನ್ನೂ ಬಿಟ್ಟಿಲ್ಲ. ಕ್ಯಾಬಿನೆಟ್ ಎಲ್ಲವನ್ನೂ ಹಾಗೆಯೇ ನಿರ್ಣಯವಾಗಿ ಅಂಗೀಕರಿಸಿದೆ. ಸಿಎಂ ಪ್ರತಿಕ್ರಿಯೆಯಲ್ಲಿಯೂ ವಿವೇಚನೆ ಬಳಸಿಲ್ಲ. ಸಿಎಂ ಸಹ ಎಜಿ ಅಭಿಪ್ರಾಯ, ಕ್ಯಾಬಿನೆಟ್ ನಿರ್ಣಯದ ಭಾಗಗಳನ್ನೇ ತಮ್ಮ ಪ್ರತಿಕ್ರಿಯೆ ಎಂದು ನೀಡಿದ್ದಾರೆ. ಬೆಂಗಳೂರು ಐಟಿಯ ಹೃದಯ, ಆದರೆ ಇವರು ಕಾಪಿಯನ್ನೂ ಸರಿಯಾಗಿ ಮಾಡಿಲ್ಲ. ಇದು ಕಲೆಕ್ಟೀವ್ ಸ್ಟುಪಿಡಿಟಿ ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ 17 ಎ ಅಡಿ ಅನುಮತಿ ತೀರ್ಪಿನಂತಿರಬೇಕಿಲ್ಲ. ಕ್ಯಾಬಿನೆಟ್ ಮತ್ತು ಸಿಎಂ ಅವರ ಪ್ರತಿ ಸ್ಪಷ್ಟನೆಗೂ ಉತ್ತರ ನೀಡಬೇಕಿಲ್ಲ ಎಂದು ನ್ಯಾಯಪೀಠದ ಗಮನ ಸೆಳೆದರು. ಈ ಕುರಿತು ರಾಜಭವನದ ನಡಾವಳಿಗಳ ಸಮಗ್ರ ಕಡತವನ್ನು ನ್ಯಾಯಪೀಠಕ್ಕೆ ಸಲ್ಲಿಕೆ ಮಾಡಿದರು.
ರಾಜ್ಯಪಾಲರ ಕಡತ ಗಮನಿಸಿದರೆ ವಿವೇಚನೆ ಬಳಸಿರುವುದು ತಿಳಿಯುತ್ತದೆ. ಆಗಸ್ಟ್ 14 ರಂದೇ ಎಲ್ಲಾ ಕಡತಗಳನ್ನು ಓದಿ ನೋಟ್ಸ್ ಮಾಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನೂ ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ. ದೂರಿನ ವಿವರ, ಕ್ಯಾಬಿನೆಟ್ ಸಲಹೆ, ತಮ್ಮ ಅಭಿಪ್ರಾಯ ಎಲ್ಲವನ್ನೂ ದಾಖಲಿಸಿದ್ದಾರೆ. ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸಿ ಆದೇಶಿಸಿದ್ದಾರೆ. ಇದು ತನಿಖೆಗೆ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಾದ ನಂತರ ಟಿ.ಜೆ. ಅಬ್ರಹಾಂ ಪರ ರಂಗನಾಥ ರೆಡ್ಡಿ ಸುದೀರ್ಘ ವಾದ ಮಂಡಿಸಿದರು. ಕೃಷ್ಣ ಪರವಾಗಿ ಮಣಿಂಧರ್ ಸಿಂಗ್ ವಾದ ಮಂಡಿಸುತ್ತಿದ್ದು ಪ್ರಕರಣದ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.




