9,153ಕ್ಕೂ ಹೆಚ್ಚು ಜನರನ್ನು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ: ರಮೇಶ್ ಎನ್.ಆರ್.

3 years ago

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಗುರಪ್ಪನಪಾಳ್ಯ (171), ಜಯನಗರ ಪೂರ್ವ (170) ಮತ್ತು ಭೈರಸಂದ್ರ (169) ವಾರ್ಡ್ ಗಳ ವ್ಯಾಪ್ತಿಯಲ್ಲಿ ದಿನಾಂಕ 01/04/2022 ರಿಂದ 31/01/2023 ರವರೆಗಿನ ಕೇವಲ 09 ತಿಂಗಳ ಅವಧಿಯಲ್ಲಿ ಸುಮಾರು 9,153 ಕ್ಕೂ ಹೆಚ್ಚು ಜನರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು, ಈ ಪೈಕಿ ಶೇ. 50% ಕ್ಕೂ ಹೆಚ್ಚು ಮಂದಿ ತಮಿಳುನಾಡಿನ ಹೊಸೂರು, ಧರ್ಮಪುರಿ ಮತ್ತು ಕೃಷ್ಣಗಿರಿ ಭಾಗಗಳ ಹಾಗೂ ಬೆಂಗಳೂರಿನ ಹೊರಭಾಗದ ನಿವಾಸಿಗಳಾಗಿರುತ್ತಾರೆಂಬುದು ದಾಖಲೆಗಳಿಂದ ಸ್ಪಷ್ಟವಾಗಿರುತ್ತದೆ ಎಂದು
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್. ಆರೋಪಿಸಿದ್ದಾರೆ.

 

ಈ ಪ್ರಜಾಪ್ರಭುತ್ವ ವಿರೋಧಿ ಕಾನೂನು ಬಾಹಿರ ಕಾರ್ಯದಲ್ಲಿ ಜಯನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಮೇಲೆ ತಿಳಿಸಿರುವ ಎಲ್ಲಾ 03 ವಾರ್ಡ್ ಗಳ ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರು, ಗಣಕಯಂತ್ರ ನಿಯಂತ್ರಕರು ಭಾಗಿಗಳಾಗಿದ್ದು, ಸ್ಥಳೀಯ ರಾಷ್ಟ್ರೀಯ ರಾಜಕೀಯ ಪಕ್ಷವೊಂದರ ನಾಯಕರುಗಳಿಂದ ಪ್ರತೀ ನಕಲಿ ಮತದಾರರ ಸೇರ್ಪಡೆಗೆ ಇಂತಿಷ್ಟು ಹಣವೆಂದು ಪಡೆದುಕೊಂಡು ಇಂತಹ ಕಾನೂನು ಬಾಹಿರ ಕಾರ್ಯಗಳನ್ನು ಎಸಗಿರುತ್ತಾರೆ ಎಂದಿದ್ದಾರೆ.

ಆದುದರಿಂದ, ಇವರುಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಬೆಂಗಳೂರಿನ ಸ್ಥಳೀಯ ನಿವಾಸಿಗಳಲ್ಲದ ಎಲ್ಲರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಮತದಾರರ ಪಟ್ಟಿಯಿಂದ ಕೈಬಿಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಪ್ರಾಮಾಣಿಕ ಅಧಿಕಾರಿಗಳಿಂದ ಈ ಬಗ್ಗೆ ಪರಿಶೀಲನೆ ಕಾರ್ಯ ನಡೆಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.

ಅಲ್ಲದೇ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ‌ಅವರಿಗೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರುಗಳನ್ನು ಸಲ್ಲಿಸಿದ್ದಾರೆ.

Leave a Reply