ಬಿಜೆಪಿಗೆ ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನ: ಯಡಿಯೂರಪ್ಪ

3 years ago

ಬೆಂಗಳೂರು: ದೇಶಾದ್ಯಂತ ಬಿಜೆಪಿ ಮತ್ತು ಪ್ರಧಾನಿ ಮೋದಿ ಅಲೆ ಬೀಸುತ್ತಿದ್ದು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದಂತೆ‌ ಕರ್ನಾಟಕದಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ವಿವಿಧ ಪ್ರಕೋಷ್ಟಗಳ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 140 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಹಲವರು ತಿರುಕನ ಕನಸು ಕಾಣುತ್ತಿದ್ದಾರೆ. ಮುಂದಿನ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಆಗುವುದರಲ್ಲಿ ಸಂಶಯ ಬೇಡ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು  ಮನೆ ಮನೆಗೆ ತಲುಪಿಸಬೇಕು ಎಂದು ಸಲಹೆ ಮಾಡಿದರು.

ಪಕ್ಷ ಕಟ್ಟಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಎಂ.ಆರ್.ತಂಗಾ, ಅನಂತಕುಮಾರ್, ಬಿ.ಬಿ.ಶಿವಪ್ಪ ಜೊತೆ ಪಕ್ಷ ಕಟ್ಟಲಾಗಿತ್ತು ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಅವರು ಮತ್ತೊಮ್ಮೆ ಅಧಿಕಾರ ಹಿಡಿಯುವ ಮೂಲಕ ಮಾದರಿ ರಾಜ್ಯ ಮಾಡೋಣ ಎಂದು ಅವರು ಹೇಳಿದ್ದಾರೆ.

ಡಬಲ್ ‌ಎಂಜಿನ್ ಬೇಕು: ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಈ ಬಾರಿಯೂ ಶೇಕಡಾ ನೂರಕ್ಕೆ ನೂರರಷ್ಟು ರಷ್ಟು ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ. ಮತ್ತೊಮ್ಮೆ ಡಬ್ಬಲ್ ಎಂಜಿನ್ ಸರ್ಕಾರ ದಿಂದ ಹಲವು ಯೋಜನೆಗಳು ರಾಜ್ಯದಲ್ಲಿ ಜಾರಿ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ರೈಲ್ವೇ, ಟೆಲಿಕಾಂ, ದೇಶ, ಆಸ್ಪತ್ರೆ ಎಲ್ಲವುದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಕಾಯಕಲ್ಪ ಮಾಡುತ್ತಿದ್ದಾರೆ. ಯಾವ್ಯಾವ ರಾಜ್ಯದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಇದೆಯೋ, ಅಲ್ಲೆಲ್ಲಾ ಅಭಿವೃದ್ಧಿ ಹೆಚ್ಚಾಗಿದೆ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ಗ್ರಾಮೀಣ ಭಾಗದ‌ ಜನರಿಗೆ ಮಿಂಚು ಹುಳ ಮರದ ಮೇಲೆ ಬಂದಾಗ ಮಳೆಗಾಲ ಬರುತ್ತೆ‌ ಅಂತ ಅರ್ಥವಾಗುತ್ತದೆ. ರಾಜ್ಯದಲ್ಲಿ ಕೆಲವರು ರಸ್ತೆಗೆ ಬಂದು ಭಾಷಣದಲ್ಲಿ ಕಣ್ಣೀರು ಹಾಕಿದಾಗ ಚುನಾವಣಾ ಕಾಲ ಬಂದಿದೆ ಎನ್ನುವುದು ಗೊತ್ತಾಗುತ್ತದೆ. ಕೆಲವರು ತಮ್ಮ ತಾತನನ್ನು ನೆನಪು ಮಾಡಿಕೊಳ್ಳದಿದ್ದರೂ ಟಿಪ್ಪು ತಾತನ ಬಗ್ಗೆ ಮಾತನಾಡುತ್ತಾರೆ ಎಂದರು.

ಕೆಲವರು ಈಗಾಗಲೇ ಪಂಚರತ್ನ ಯಾತ್ರೆ ಮಾಡೋಕೆ ಮುಂದಾಗಿದ್ದಾರೆ. ಅವರ ಭಾಷಣ ಆರಂಭವಾಗೋದೇ ಕಣ್ಣೀರಿನಿಂದ. ತಾತ ಮಗನಿಗೆ ತ್ಯಾಗ ಮಾಡುತ್ತಾರೆ. ಮಗ ಹೆಂಡತಿಗೆ ತ್ಯಾಗ ಮಾಡ್ತಾರೆ ಹಾಗೂ ಹೆಂಡತಿ‌ ಮಗನಿಗೆ ತ್ಯಾಗ ಮಾಡ್ತಾರೆ. ಭವಿಷ್ಯದಲ್ಲಿ ಆ‌ ಮಗ ತನ್ನ ಮಗನಿಗೆ ತ್ಯಾಗ ಮಾಡ್ತಾನೆ ಎಂದು ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply