ಬೆಂಗಳೂರು: ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ಜ್ಞಾನಸೌಧ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಿತು.
ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಸೋಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಶೈಲಜಾ ಸೋಮಣ್ಣ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿ.ಎಸ್.ದಿವ್ಯ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಮಾಜಿ ಮಹಾನಗರ ಪಾಲಿಕೆ ಸದಸ್ಯ ದಾಸೇಗೌಡ, ರಂಗಕರ್ಮಿ ನಾಗರಾಜ್ ಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನೀಲಮ್ಮ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ 2022ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ತೇಜಸ್ವಿ ಸೂರ್ಯ ಮಾತನಾಡಿ, ಯುವಕರು ಎಂದರೆ ಮಾನಸಿಕತೆ ಸಂಕೇತ, ವಯಸ್ಸು ಆದರೂ ಯುವಕರಂತೆ ಕೆಲಸ ಮಾಡುತ್ತಿರುವ ಸಚಿವ ವಿ.ಸೋಮಣ್ಣ ಅವರು ಇಂದಿನ ಯುವಕರಿಗೆ ಆದರ್ಶವಾಗಿದ್ದಾರೆ. ಶಿಸ್ತು, ಸಂಯಮ ಯುವಕರಿಗೆ ಮುಖ್ಯ. ಪ್ರಧಾನಿ ನರೇಂದ್ರ ಮೋದಿರವರ ವಯಸ್ಸಿಗಿಂತ 25 ವರ್ಷ ಚಿಕ್ಕವರು. ರಾಹುಲ್ ಗಾಂಧಿ ಆದರೆ ಯುವಕರ ಐಕಾನ್ ಎಂದರೆ ಮೋದಿಜೀರವರು ಆಗಿದ್ದಾರೆ. ಶ್ರಮ ಜೀವಿಗಳು ಸದಾಕಾಲ ಯುವಕರಾಗಿರುತ್ತಾರೆ ಎಂದರು.
ಹಿಂದೂ ಪರಂಪರೆಯಲ್ಲಿ ಪುಸ್ತಕ ನೋಡಿ ಕಲಿಯಬೇಕಿಲ್ಲ. ಆಚರಣೆ, ವಿಚಾರಗಳು, ಸಂಪ್ರಾದಯಗಳು ನಮ್ಮ ಹಿರಿಯರನ್ನ ನೋಡಿ ಕಲಿತಿರುತ್ತೇವೆ. ಕರ್ನಾಟಕ ಇತಿಹಾಸ ಪರಂಪರೆ ಇದೆ. ಇಂಗ್ಲೀಷ್ ವ್ಯಾಮೋಹ ಬಿಡಿ, ಕನ್ನಡ ಬಳಸಿ. ನಾನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದೆ. ನನ್ನ ಇಂಗ್ಲೀಷ್ ಲೇಖನವನ್ನು ಪ್ರತಾಪ್ ಸಿಂಹ ಅವರಿಗೆ ಕಳುಹಿಸಿದೆ. ಅವರು ಕನ್ನಡ ಬರೆದು ಕಳುಹಿಸಿಕೊಡು ಎಂದು ಹೇಳಿದರು. ಅಂದಿನಿಂದ ಕನ್ನಡ ಭಾಷೆ ಕಲಿಯಲು ಆರಂಭಿಸಿದೆ. ನನ್ನ ತಂದೆ ಸಹ ಕನ್ನಡ ಭಾಷೆಯಲ್ಲಿ ಪಿ.ಹೆಚ್.ಡಿ. ಪಡೆದಿರುತ್ತಾರೆ. ಇಂಗ್ಲೀಷ್ ಮಾಧ್ಯಮ, ಕನ್ನಡ ಮಾಧ್ಯಮಗಳ ನಡುವೆ ಬಹಳ ವ್ಯತ್ಯಾಸವಿದೆ. ರಾಷ್ಟೀಯ ಶಿಕ್ಷಣ ನೀತಿಯಿಂದ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಶೈಲಜಾ ಸೋಮಣ್ಣ ಮಾತನಾಡಿ ಕನ್ನಡ ನಾಡಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ, ಪ್ರೋತ್ಸಾಹ ವಿ.ಸೋಮಣ್ಣ ಪ್ರತಿಷ್ಠಾನದ ಉದ್ದೇಶವಾಗಿದೆ. ನಮ್ಮ ಪ್ರತಿಷ್ಠಾನ ವತಿಯಿಂದ ವಿದ್ಯಾರ್ಥಿ ವೇತನ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ಹಿರಿಯ ಸಾಹಿತಿಗಳಾದ ಸಿದ್ದಲಿಂಗಯ್ಯ ಮತ್ತು ಚಂದ್ರಶೇಖರ್ ಕಂಬಾರರವರಿಗೆ ಜೆ.ಹೆಚ್.ಪಟೇಲ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾಡಿನ ಸಂಸ್ಕೃತಿ ಉಳಿಯಬೇಕಾದರೆ ಮಕ್ಕಳಿಗೆ ನಮ್ಮ ನಾಡಿನ ಸಾಹಿತಿಗಳು, ಸಾಧನೆ ಮಾಡಿದ ಮಹನೀಯರ ಜೀವನ ಚರಿತ್ರೆ ತಿಳಿಸಿಕೊಡಬೇಕು ಎಂದರು.
ವಿಡಿಯೊ ಗೇಮ್ಸ್ ಮತ್ತು ಮೊಬೈಲ್ ನೋಡುವುದನ್ನು ತಡೆಯಬೇಕು, ಅತಿ ಹೆಚ್ಚು ಯುವಕರ ಬಳಕೆ ಮಾಡದಂತೆ ಎಚ್ಚರವಹಿಸಿ. ಯುವಕರು ದೇಶದ ಶಕ್ತಿ, ಯುವ ಶಕ್ತಿ ಸರಿಯಾದ ರೀತಿಯಲ್ಲಿ ದೇಶ ಸೇವೆ ಬಳಸಿದರೆ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದರು.
ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಜನಪದ ಗೀತೆ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.



