ಅಧಿಕಾರಿಗಳು, ಗುತ್ತಿಗೆದಾರರು ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣ ಮಾಡಬೇಕು, ಇಲ್ಲವಾದಲ್ಲಿ ತಲೆದಂಡ ಖಚಿತ: ವಿ.ಸೋಮಣ್ಣ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್ ಕುಮಾರ್ ಕುಮಾರ್ ವಾರ್ಡ್, ದಾಸರಹಳ್ಳಿ ಮತ್ತು ಹೌಸಿಂಗ್ ಬೋರ್ಡ್ ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಮಾಗಡಿರೋಡ್ ಟೋಲ್ ಗೇಟ್ ನಿಂದ ಸುಮನಹಳ್ಳಿ ಜಂಕ್ಷನ್ ವರಗೆ ಹೈಟೆಕ್ ಮಾದರಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಲಾಯಿತು. ಸ್ಥಳೀಯ ಶಾಸಕ, ವಸತಿ ಸಚಿವದ ವಿ.ಸೋಮಣ್ಣರು ಮಾದರಿ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೇರವೆರಿಸಿ, ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತಾಡಿದ ವಿ.ಸೋಮಣ್ಣ, ನಮ್ಮ ಮೇಲೆ ನಂಬಿಕೆ ಇಟ್ಟು ಜನರು ಮತ ನೀಡಿರುತ್ತಾರೆ, ಅವರ ನಂಬಿಕೆ ವಿಶ್ವಾಸಕ್ಕೆ ಮತದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಸಾರ್ವಜನಿಕರಿಗೆ ಉತ್ತಮ ರಸ್ತೆ, ಆರೋಗ್ಯ, ನೀರು, ಬೀದಿ ದೀಪ ಮೊದಲಾದ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು. ಅವರು ಕಟ್ಟಿರುವ ತೆರಿಗೆ ಹಣ ಸಮರ್ಪಕವಾಗಿ ಉಪಯೋಗಬೇಕು. ಈ ನಿಟ್ಟಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾಗಡಿ ರೋಡ್ ಟೋಲ್ ಗೇಟ್ ನಿಂದ ಸುಮನಹಳ್ಳಿ ಜಂಕ್ಷನ್ ವರಗೆ (ಚರ್ಚ್ ಸ್ಟ್ರೀಟ್ ) ಮಾದರಿ ಹೈಟೆಕ್ ರಸ್ತೆ ನಿರ್ಮಾಣಕ್ಕೆ ಇಂದು ಗುದ್ದಲಿಪೂಜೆ ಮಾಡಲಾಗಿದೆ ಎಂದರು.
ಸುಗಮ ಸಂಚಾರ, ಮಾದರಿ ಫುಟ್ ಪಾತ್, ಹೈಟೆಕ್ ಚರ್ಚ್ ಸ್ಟ್ರೀಟ್ ಮಾದರಿ ರಸ್ತೆಯನ್ನ ಜನಸಾಮಾನ್ಯರ ಬಳಕೆಗೆ ಸಿಗಬೇಕು ಎಂಬುದು ನಮ್ಮ ಆಶಯ. ದಾಸರಹಳ್ಳಿಯಲ್ಲಿ 200 ಹಾಸಿಗೆ ಸಾಮ್ಯರ್ಥವುಳ್ಳ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕರ್ಪಣೆ ಮಾಡಲಿದ್ದಾರೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳು, ಗುತ್ತಿಗೆದಾರರು ಶೀಘ್ರಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಇಲ್ಲದೇ ಹೋದರೆ ತಲೆದಂಡ ಖಚಿತ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ರೂಪಲಿಂಗೇಶ್ವರ್, ಜಯರತ್ನ, ಮತ್ತು ಮುಖಂಡರುಗಳಾದ ಹೆಚ್.ರಮೇಶ್, ಡೊಡ್ಡವೀರಯ್ಯ, ಶ್ರೀಧರ್ ಮತ್ತು ವಿಶೇಷ ಆಯುಕ್ತ ದೀಪಕ್, ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಮೊದಲಾದವರು ಪಾಲ್ಗೊಂಡಿದ್ದರು.



