ಮೋದಿ ಸರ್ಕಾರ ತೆರಿಗೆ ಹೆಚ್ಚಳದ ಅನಿವಾರ್ಯತೆ ಸೃಷ್ಟಿಸಿದೆ: ಸಿದ್ದರಾಮಯ್ಯ

2 years ago

ಬೆಂಗಳೂರು: ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ Bharatiya Janata Party (BJP) ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ Narendra Modi ಅವರ ಸರ್ಕಾರ ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಹೇಗೆ ಸೃಷ್ಟಿಸಿದೆ? ರಾಜ್ಯದ ಪಾಲಿನ ಹಣವನ್ನು ಕೊಡದೆ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ವಿವರಿಸಿದರು.

2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅದರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ. ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ. ಅದು ನಮ್ಮ ಜೇಬಿಗೆ ಹೋಗುವುದಿಲ್ಲ ಎಂದರು.

ಹಿಂದಿನ BJP Karnataka ಸರ್ಕಾರದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು. ಈ ರೀತಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳಷ್ಟು ರಾಜ್ಯದ ಜನರ ಬೆವರಗಳಿಕೆಯ ತೆರಿಗೆ ಹಣವನ್ನು ಈ ಬಿಜೆಪಿ ನಾಯಕರು ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದಾರೆ ಎಂದರು.

ಇಂತಹ ಲೂಟಿಕೋರ, ಭ್ರಷ್ಟ, ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಅರ್ಹತೆ ಎಲ್ಲಿದೆ? ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ. ಹೀಗಾಗಿ ವಿಪಕ್ಷ ನಾಯಕ R Ashoka ಅವರ ಮಾತುಗಳಿಗೆ ಅರ್ಥವಿಲ್ಲ. ಆರ್.ಅಶೋಕ್ ಗೆ ಇದೆಲ್ಲಾ ಅರ್ಥ ಆಗುವುದೂ ಇಲ್ಲ , ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇಲ್ಲ ಎಂದು ತಿರುಗೇಟು ನೀಡಿದರು.

ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಆದಾಯ ಮೂಲಗಳು ಉಳಿದಿಲ್ಲ ಎಂದು ವಿವರಿಸಿದರು.

ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಪೆಟ್ರೋಲ್‌ ಡೀಸೆಲ್‌ ಬೆಲೆಗೆ ಹೋಲಿಸಿದರೆ ರಾಜ್ಯದ ದರಗಳು ಕಡಿಮೆ ಇರುವುದು ಗಮನಿಸಿ, ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ ಎಂದರು.

ಅಬಕಾರಿ ಸುಂಕ ಏರಿಕೆ ಬಗ್ಗೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಎಲ್ಲಿದೆ? ಡಾ. ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 113 ಡಾಲರ್‌ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿ ಅವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು? ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಬಿಜೆಪಿಯವರು ದನಿ ಎತ್ತಿಲ್ಲ? ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ; ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿದ್ದರೂ ಕೇಂದ್ರ ಸರ್ಕಾರ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ Nirmala Sitharaman ಅವರು 5,000 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

ಬರಗಾಲದ ಬಗ್ಗೆ ಪರಿಹಾರ ತೆಗೆದುಕೊಳ್ಳಲು ಕೋರ್ಟಿಗೆ ಹೋಗಬೇಕಾಗಿ ಬಂತು. ಕೋರ್ಟು ಸೂಚನೆ ನೀಡಿದ ನಂತರ 18 ಸಾವಿರ ಕೋಟಿ ಕೇಳಿದರೆ 3,454 ಕೋಟಿ ರೂ. ಪರಿಹಾರ ನೀಡಿದ್ದಾರೆ ಎಂದರು.

ಬಿಜೆಪಿಯವರು ಬಡವರು, ದಲಿತರು, ಜನಸಾಮಾನ್ಯರ ಕಾರ್ಯಕ್ರಮಗಳ ಕಲ್ಯಾಣ ಕಾರ್ಯಕ್ರಮಗಳಿಗೆ ವಿರುದ್ಧವಿದ್ದಾರೆ. ಬಸ್‌ನಲ್ಲಿ ಉಚಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರ ನೀಡಿದರೆ ಅವರ ಆರ್ಥಿಕ ಶಕ್ತಿ ಹೆಚ್ಚಾಗುವುದಿಲ್ಲವೇ? ಉಚಿತ ವಿದ್ಯುತ್‌ ನೀಡಿದರೆ ಅವರಿಗೆ ಉಳಿತಾಯವಾಗುವುದಿಲ್ಲವೇ? ಹೆಚ್ಚುವರಿ ಅಕ್ಕಿ ಕೇಳಿದರೆ, ಕೊಟ್ಟಿಲ್ಲ. ಯಾರಾದರೂ ಮಾತಾಡಿದರೇ? ಎಂದು ಪ್ರಶ್ನಿಸಿದರು.

ಈ ಬೆಲೆ ಏರಿಕೆಯಿಂದ ಸುಮಾರು 3,000 ಕೋಟಿ ರೂ. ಸಂಪನ್ಮೂಲ ದೊರೆಯಲಿದೆ. ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂ. ಅಗತ್ಯವಿದೆ. ಸರ್ಕಾರ ಪಾಪರ್‌ ಆಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ? ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇ ನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಈ ಮಟ್ಟದ ಏರಿಕೆ ವಿರುದ್ಧ ಬಿಜೆಪಿಯವರಾಗಲೀ, ಆರ್.ಅಶೋಕ್ ಆಗಲಿ ಬಾಯಿ ಬಿಟ್ಟಿಲ್ಲ. ಅವರಿಗೆ ಇದು ಅರ್ಥ ಆಗಿದೆಯೋ? ಇಲ್ಲವೋ? ಎಂಬುದೇ ನನಗಿರುವ ಅನುಮಾನ ಎಂದರು.

Leave a Reply