ಹಿಂದುತ್ವ ಪರ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ರಸ್ತೆಯಲ್ಲೇ ಕೊಂದ ದುಷ್ಕರ್ಮಿಗಳು

12 months ago

ಮಂಗಳೂರು: ಕಡಲತೀರದ ಮಂಗಳೂರು ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಪಾಕಿಸ್ಥಾನದ ಪರ ಘೋಷಣೆ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಗುಂಪೊಂದು ಹಿಡಿದು ಥಳಿಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಹಿಂದುತ್ವ ಪರ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಎಂಬುವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

ಸುಹಾಸ್ ಶೆಟ್ಟಿ ಇನ್ನೊವಾ ಕಾರಿನಲ್ಲಿ ಸಹಚರರಾದ ಸಂಜಯ್‌, ಪ್ರಜ್ವಲ್‌, ಅನ್ವಿತ್‌, ಲತೀಶ್‌ ಹಾಗೂ ಶಶಾಂಕ್‌ ಜೊತೆ ತೆರಳುತ್ತಿದ್ದಾಗ ಐದಾರು ಮಂದಿ ದುಷ್ಕರ್ಮಿಗಳ ತಂಡ ಸ್ವಿಫ್ಟ್‌ ಕಾರು ಹಾಗೂ ಪಿಕಪ್ ವಾಹನದಲ್ಲಿ ಹಿಂಬಾಲಿಸಿ ಬಜಪೆಯ ಕಿನ್ನಿಪದವಿನಲ್ಲಿ ತಲವಾರಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲೆ ಸೆರೆಯಾಗಿದೆ.

ಬಜ್ಪೆ ಠಾಣೆ ವ್ಯಾಪ್ತಿಯ ಕಿನ್ನಿಪದವಿನಲ್ಲಿ ರಾತ್ರಿ 8.27ಕ್ಕೆ ಕಾರನ್ನು ಏಕಾಏಕಿ ಅಡ್ಡಗಟ್ಟಿ ಸುಹಾಸ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಎ.ಜೆ.ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಅಷ್ಟರಲ್ಲೇ ಆತ ಅಸುನೀಗಿದ್ದ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌  ಸುದ್ದಿಗಾರರಿಗೆ ತಿಳಿಸಿದರು.

ದಾಳಿ ವೇಳೆ ಸುಹಾಸ್‌ ಶೆಟ್ಟಿಯ ಸಹಚರನೊಬ್ಬ ಗಾಯಗೊಂಡಿದ್ದಾನೆ. ಆತ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಜ್ಪೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದರು.

ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಸುಹಾಸ್ ಶೆಟ್ಟಿ ಅವರ ಮೃತ ದೇಹವನ್ನು ಇರಿಸಲಾಗಿದ್ದ ಎ.ಜೆ. ಶೆಟ್ಟಿ ಆಸ್ಪತ್ರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹಿಂದೂತ್ವ ಮುಖಂಡ ಪುನೀತ್ ಕೆರೆಹಳ್ಳಿ, ಸೇರಿದಂತೆ ಬಜರಂಗದಳದ ಮುಖಂಡರು ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಆನಂತರ ಆಸ್ಪತ್ರೆಯಿಂದ 35 ಕಿ.ಮೀ ದೂರವಿರುವ ಸುಹಾಸ ಶೆಟ್ಟಿ ಅವರ ಗ್ರಾಮ ಕಾರಿಂಜಾ‌ಕ್ಕೆ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ದಾರಿಯುದ್ದಕ್ಕೂ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಘೋಷಣೆ ಮೊಳಗಿಸಿದರು.
ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆಗೆ ವ್ಯಾಪಕ ಪೊಲೀಸ್ ಬಂದೋಬಸ್ ಒದಗಿಸಲಾಗಿತ್ತು ಮಾರ್ಗ ಮಧ್ಯ ಇರುವ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು.

ಘಟನೆಯ ಬಳಿಕ ಮಂಗಳೂರಿನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಶಾಂತಿ ಕಾಪಾಡಲು ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಭದ್ರತೆಗಾಗಿ 22 ಕೆಎಸ್ಆರ್ಪಿ ಪ್ಲಾಟೂನ್‌ಗಳು, 1,000 ಪೊಲೀಸ್ ಸಿಬ್ಬಂದಿ ಮತ್ತು ಐವರು ಎಸ್‌ಪಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮಂಗಳೂರು ನಗರದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಜಾಸ್ತಿಯಾಗಿವೆ. ಹಾಗಾಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ಇದೇ 2ರ ಬೆಳಿಗ್ಗೆ 6 ರಿಂದ ಇದೇ 6 ರಂದು ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಆದೇಶದಲ್ಲಿ ತಿಳಿಸಿದ್ದಾರೆ.

ಈ ನಡುವೆ, ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಹೆಸರು ಸಹಿತ ಸುಳಿವು ದೊರೆತಿದೆ. ಆರೋಪಿಗಳನ್ನು ಬಂಧಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಮನವಿ ಮಾಡಿದ್ದಾರೆ

ತಪ್ಪು ಮಾಡಿದ್ದು ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಭದ್ರತೆಗಾಗಿ 22 ಕೆಎಸ್‌ಆರ್‌ಪಿ , ಐವರು ಎಸ್‌ಪಿ, 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪೊಲೀಸ್ ಇಲಾಖೆ ವಾಸ್ತವವನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತದೆ ಎಂದರು.

ಹತ್ಯೆಯನ್ನು ಖಂಡಿಸಿ ಹಿಂದೂತ್ವ ಪರ ಸಂಘಟನೆಗಳು ಕರೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಖಾಸಗಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಬೆಂಗಳೂರಿನಿಂದ ಮಂಗಳೂರು ಕಡೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ಸುಗಳಿಗೆ ಪಂಪ್ ವೆಲ್ ಬಳಿ ದುಷ್ಕರ್ಮಿಗಳು ಕಲ್ಲುತೂರಿ ಜಖಂಗೊಳಿಸಿದ್ದಾರೆ.
ಪಂಪ್‌ವೆಲ್‌ ಬಳಿ ನಾಲ್ಕು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗಿಲ್ಲ, ಬಸ್‌ಗಳ ಗಾಜು ಒಡೆದಿವೆ. ಹಾಗಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಇನ್ನು ಸುಹಾಸ್ ಶೆಟ್ಟಿ ಅವರ ಮೃತ ದೇಹ ಕಾರಿಂಜಾದಲ್ಲಿರುವ ಅವರ ಮನೆಗೆ ತಲುಪುತ್ತಿದ್ದಂತೆ ಅವರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು. ಅವಿವಾಹಿತರಾಗಿರುವ ಸುಹಾಸ ಶೆಟ್ಟಿ ಅವರ ತಂದೆ ತಾಯಿ ಮತ್ತು ಸೋದರರು ಮೃತ ದೇಹದ ಮೇಲೆ ಬಿದ್ದು ಗೋಳಾಡಿದರು.
ಇದೆ ವೇಳೆ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಕಾರಿಂಜದಲ್ಲಿರುವ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ, ಮೃತದೇಹದ ಅಂತಿಮ‌ ದರ್ಶನ ಪಡೆದರು.

ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಹಿಂದುತ್ವವಾದಿ ಮುಖಂಡ ಅರುಣ್ ಪುತ್ತಿಲ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿದರು.

ವಿಶ್ವಹಿಂದೂ ಪರಿಷತ್‌ ಮುಖಂಡ ಮಿಲಿಂದ್ ಪರಾಂಡೆ, ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಹಾಜರಿದ್ದರು.

Leave a Reply