ಬೆಂಗಳೂರು: ಬಿಜೆಪಿ ಜೆಡಿಎಸ್ ಮೈತ್ರಿಯಿಂದಾಗಿ ಅಲ್ಪಸಂಖ್ಯಾತರು ಜೆಡಿಎಸ್ ತೊರೆಯುತ್ತಿದ್ದಾರೆ ಎಂಬ ವರದಿಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಳ್ಳಿ ಹಾಕಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿಗೆ ಸಂಬಂಧಿಸಿದ ಯಾವುದೇ ವಿವರವನ್ನು ಜೆಡಿಎಸ್ ಅಧ್ಯಕ್ಷ ಸಿ.ಎ.ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಇಬ್ರಾಹಿಂ ಗಮನಕ್ಕೆ ತರಲಾಗಿದೆ. ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ ಸಮಸ್ತ ಕರ್ನಾಟಕದ ರಕ್ಷಣೆ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಎಲ್ಲ ಸಮುದಾಯದ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು.
2004ರಿಂದಲೂ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನ ಮಾಡಿದೆ. ಕಳೆದ 60 ವರ್ಷದಿಂದ ದೇವೇಗೌಡರು ಜಾತ್ಯತೀತ ಶಕ್ತಿಯನ್ನು ಉಳಿಸಲು ಹೋರಾಟ ಮಾಡುತ್ತಾ ಬಂದರು. ಆದರೆ ಕಾಂಗ್ರೆಸ್ನವರು ಮಾಡಿದ್ದೇನು? ಅಲ್ಪಸಂಖ್ಯಾತರ ಬಗ್ಗೆ ಯಾವತ್ತೂ ಅಗೌರವಯುತವಾಗಿ ನಡೆದುಕೊಂಡಿಲ್ಲ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡುವ ಮುನ್ನ ನಡೆದ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ನವರೇ ಸಿಎಂ ಆಗಲಿ ಎಂದು ಬಲವಂತ ಮಾಡಿದ್ದರು. ಅಂದೇ ಕೇಂದ್ರ ಗೃಹಸಚಿವ ಅಮಿತ್ ಷಾ ದೂರವಾಣಿ ಮಾಡಿ ಬಿಜೆಪಿ ಜೊತೆ ಸರ್ಕಾರ ಮಾಡುವಂತೆ ಆಹ್ವಾನ ನೀಡಿದ್ದರು. ಆಗ ಹೋಗಿದ್ದರೆ 5 ವರ್ಷ ಸರ್ಕಾರ ಇರುತ್ತಿತ್ತು. ಮೈತ್ರಿ ಹೆಸರಿನಲ್ಲಿ ದೇವೇಗೌಡರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದೆ ಎಂದು ದೂರಿದರು.
ಮೈತ್ರಿ ಸರ್ಕಾರ ಪತನವಾಗುವ ಮುನ್ನ ಬಿಜೆಪಿಯ 5 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಒಂದು ವೇಳೆ ಆ 5 ಶಾಸಕರು ರಾಜೀನಾಮೆ ಕೊಟ್ಟರೆ, ನಮ್ಮ ಪಕ್ಷದ ಮತ್ತೈದು ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಹೀಗೆ ಕಾಂಗ್ರೆಸ್ ಜಾತ್ಯತೀತ ಶಕ್ತಿಯನ್ನು ಉಳಿಸುವ ಬದಲು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.




