3 years ago

ಬೆಂಗಳೂರು: ಹೆಣ್ಣೂರಿನ ಎಚ್‍ಬಿಆರ್ ಲೇಔಟ್ ಬಳಿ ನಿನ್ನೆ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ-ಮಗು ಮೃತಪಟ್ಟ ಪ್ರಕರಣದ ಸಂಬಂಧಿಸಿದಂತೆ 8 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಸಮನ್ಸ್ ಕೊಟ್ಟು 8 ಮಂದಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೃತ ತೇಜಸ್ವಿನಿ ಪತಿ ಲೋಹಿತ್ ಕೊಟ್ಟ ದೂರಿನ ಮೇಲೆ ಐವರ ಮೇಲೆ ಗೋವಿಂದಪುರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಮೊದಲ ಆರೋಪಿ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ(ಎನ್ ಸಿಸಿ), ಎರಡನೇ ‌ಆರೋಪಿ ಎನ್ ಸಿಸಿ ಜೆಇ ಪ್ರಭಾಕರ್, ಎನ್ ಸಿಸಿ ನಿರ್ದೇಶಕ ಚೈತನ್ಯ, ಎನ್ ಸಿಸಿಯ ಮಾಲತಿ, ವಿಕಾಸ್ ಸಿಂಗ್, ಲಕ್ಷ್ಮಿಪತಿ,
ವೆಂಕಟೇಶ್ ಸಿಂಗ್, ಮಹೇಶ್ ಭಂಡಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಜೊತೆ  ಮೆಟ್ರೋ ಗುತ್ತಿಗೆದಾರರು, ಆರೋಪಿ ಸೈಟ್ ಇನ್‍ಚಾರ್ಜ್ ಅಧಿಕಾರಿ, ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇತರರ ಮೇಲೆ ಐಪಿಸಿ ಸೆಕ್ಷನ್ 336, 337, 304ಎ, 427, 34 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಎಲ್ಲಾ ಆರೋಪಿಗಳಿಗೂ ನೋಟೀಸ್ ಕೊಟ್ಟು ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಬಿಎಂಆರ್‌ಸಿಎಲ್‌ ಹಾಗೂ ಗುತ್ತಿಗೆದಾರರಿಂದ ನಡೆದಿರುವ ಕೊಲೆ ಎಂದು ಮೃತರ ಕುಟುಂಬ ಆಕ್ರೋಶ ಹೊರಹಾಕಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಸಸ್ಪೆಂಡ್ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸೂಚನೆ ನೀಡಿದ್ದಾರೆ.

ಐಐಎಸ್‌ಸಿಗೆ ಮನವಿ: ಈ‌ ನಡುವೆ ಪಿಲ್ಲರ್ 218ರಲ್ಲಿ ಸ್ಟೇಜಿಂಗ್ ಮತ್ತು ಗೈವೈರ್ ಬೆಂಬಲದೊಂದಿಗೆ ಪಿಲ್ಲರ್ ನಿರ್ಮಾಣ ಹಾಗೂ ಬಲವರ್ಧನೆ ಕಾರ್ಯ ನಡೆಯುತ್ತಿತ್ತು. ಆದರೆ, 18 ಮೀಟರ್ ಎತ್ತರದ ಪಿಲ್ಲರ್ನ ಗೈವೈರ್‌ಗಳ ಪೈಕಿ ಒಂದು ತಂತಿ ಸಡಿಲಗೊಂಡು ತುಂಡಾಗಿದೆ. ಇದರಿಂದಾಗಿ ಪಿಲ್ಲರ್‌ ಕೆ.ಆರ್.ಪುರಂ ಹೆಬ್ಬಾಳ ಮುಖ್ಯರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಾವುನೋವು ಸಂಭವಿಸಿದೆ.

ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಗೆ ಮನವಿ ಮಾಡಲಾಗುವುದು. ಆಂತರಿಕ ತಾಂತ್ರಿಕ ತಂಡವೂ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.

ಕಳಪೆ ಕಾಮಗಾರಿ: ನಾಗವಾರ ಬಳಿ ಮೆಟ್ರೋ ಪಿಲ್ಲರ್ ದುರಂತ ಸಂಭವಿಸಿದ್ದು, ನಾಗಾರ್ಜುನ ಕನ್ಸ್ಸ್ಟ್ರಕ್ಷನ್ನಿಂದ ಕಳಪೆ ಕಾಮಗಾರಿ ಮಾಡಲಾಗಿದೆ.
ಪಿಲ್ಲರ್ ನಿರ್ಮಾಣಕ್ಕೂ ಮುನ್ನ ಪೈಲ್  ಫೌಂಡೇಷನ್ ಹಾಕಬೇಕು, ಭೂಮಿಯ ಒಳಗೆ 30-40 ಮೀಟರ್ ಪೈಲ್ ಫೌಂಡೇಷನ್ ಹಾಕಬೇಕು, ನಂತರ ಪಿಯರ್, ಡಯಾಡಕ್ಟ್ ನಿರ್ಮಾಣ ಮಾಡಿ ಬೀಮ್ ಜೋಡಿಸಬೇಕು. ಏರ್ ಪೋರ್ಟ್ ಮಾರ್ಗದಲ್ಲಿ ಫ್ಲೈ ಓವರ್ ಹೆಚ್ಚಿರುವ ಕಾರಣ ಪಿಲ್ಲರ್ ಎತ್ತರ ಹೆಚ್ಚಳವಾಗಿದೆ. 18 ಮೀಟರ್ ಎತ್ತರದ ಪಿಲ್ಲರ್ಗೆ 4 ಟನ್ ಕಬ್ಬಿಣ ಬಳಕೆ ಮಾಡಲಾಗ್ತಿತ್ತು. ಒಂದು ಪಿಲ್ಲರ್ನಿಂದ ಮತ್ತೊಂದು ಪಿಲ್ಲರ್ಗೆ 5-10 ಮೀಟರ್ ಅಂತರ ಇರಬೇಕು.

ಸ್ಟೇಷನ್ ಸಮೀಪಿಸುತ್ತಿದ್ದಂತೆ ಪಿಲ್ಲರ್ ಅಂತರ ಕಡಿಮೆ ಮಾಡ್ಬೇಕು, ಪಿಲ್ಲರ್ನಲ್ಲಿ ಸಮಸ್ಯೆಯಾದ್ರೆ ನಾನ್ ಡಿಸ್ಟ್ರಕ್ಟಿವ್ ಟೆಸ್ಟ್ ಮಾಡಿಸಬೇಕಾಗಿತ್ತು. ಜತೆಗೆ ಎಲೆಕ್ಟ್ರಿಕ್ ಲೇಸರ್ ಟೆಸ್ಟ್ ಕೂಡಾ ಮಾಡಿಸಬೇಕು. ಇಬ್ಬರ ಬಲಿ ಪಡೆದ ಪ್ರಕರಣದಲ್ಲಿ ಗುತ್ತಿಗೆದಾರರರ ನಿರ್ಲಕ್ಷ್ಯ ಇದೆ ಎಂದು ಮೆಟ್ರೋ ಟೆಕ್ನಿಕಲ್ ಎಕ್ಸ್ ಫರ್ಟ್ ಶ್ರೀಹರಿ ಮಾಹಿತಿ ತಿಳಿಸಿದ್ದಾರೆ.

ಕೈಗೊಳ್ಳದ ಸುರಕ್ಷತೆ: ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಮೆಟ್ರೋ ಕಾಮಗಾರಿ ನಡೆಸಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಮೆಟ್ರೋ ಪಿಲ್ಲರ್ ಕುಸಿದ ದುರಂತದಲ್ಲಿ ಮೃತಪಟ್ಟ ತೇಜಸ್ವಿನಿಯವರ ಮಾವ ವಿಜಯ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್‌ಬಿಆರ್ ಲೇಔಟ್‌ನ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಬಿದ್ದ ಪರಿಣಾಮ ವಿಜಯ್ ಕುಮಾರ್ ಅವರು ತಮ್ಮ ಸೊಸೆ ಮತ್ತು 2.6 ವರ್ಷದ ಮೊಮ್ಮಗನನ್ನು ಕಳೆದುಕೊಂಡಿದ್ದಾರೆ.

ಟ್ರಾಫಿಕ್ ಜಾಮ್: ಮೆಟ್ರೋ ಪಿಲ್ಲರ್ ಕುಸಿತ ದುರಂತದಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿತ್ತು ಎಂಬುದು ನನಗೆ ತಿಳಿದಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಕುಟುಂಬದ ಜೀವಗಳು ಹೋಗಿವೆ. ನಮ್ಮ ಕುಟುಂಬ ಅನುಭವಿಸಿದ ನೋವು ಇನ್ನಾವುದೇ ಕುಟುಂಬಕ್ಕೂ ಎದುರಾಗಬಾರದು, ಸರ್ಕಾರ ಕೂಡಲೇ ಬಿಎಂಆರ್’ಸಿಎಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಮೆಟ್ರೋ ಕಾಮಗಾರಿ ನಡೆಸಿದ್ದರಿಂದಲೇ ಈ ದುರಂತ ಸಂಭವಿಸಿದೆ. ಬೇರೆಯವರ ನಿರ್ಲಕ್ಷ್ಯಕ್ಕೆ ನಮ್ಮ ಕುಟುಂಬದ ಸದಸ್ಯರು ಬಲಿಯಾಗಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ: ನಮ್ಮ ಸೊಸೆ ಹಾಗೂ ಮೊಮ್ಮಗನ ಸಾವಿಗೆ ಬಿಎಂಆರ್’ಸಿಎಸ್ ನಿರ್ಲಕ್ಷ್ಯವೇ ಕಾರಣ. ಈಗ ನಮಗೆ ಸರ್ಕಾರ ರೂ.20 ಲಕ್ಷ ಪರಿಹಾರ ಕೊಟ್ಟರೆ ಹೋದ ಜೀವಗಳು ಮತ್ತೆ ಸಿಗುತ್ತವೆಯೇ? ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವಿಸ್ಮಿತಾಳಂತೆಯೇ ವಿಹಾನ್ ನನ್ನನ್ನು ಬಹಳ ಹಚ್ಚಿಕೊಂಡಿದ್ದ. ನಮ್ಮನ್ನು ನೋವನ್ನು ಯಾರಿಗೆ ಹೇಳುವುದು ಎಂದು ಪ್ರಶ್ನಿಸಿದ್ದಾರೆ.

ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದಲ್ಲಿ ಎಂಟು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Leave a Reply