ಮಾಧ್ಯಮಗಳು ಕಾರ್ಪೊರೇಟ್ ಕೈಗೊಂಬೆಯಲ್ಲ: ಸಿದ್ದರಾಮಯ್ಯ

6 days ago

ಬೀದರ್: ಪತ್ರಕರ್ತರು ಕೇವಲ ಮಾಹಿತಿ ನೀಡುವವರಾಗದೆ, ಸಮಾಜ ಸುಧಾರಣೆಯ ಹರಿಕಾರರಾಗಬೇಕು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ನಮ್ಮ ಪಾತ್ರವೇನು ಎಂದು ಪ್ರತಿಯೊಬ್ಬ ಪತ್ರಕರ್ತರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೀದರ್ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಮಾಧ್ಯಮ ಲೋಕದ ಓರೆಕೋರೆಗಳನ್ನು ಅತ್ಯಂತ ನೇರವಾಗಿ ವಿಮರ್ಶಿಸಿ, ಪತ್ರಿಕೋದ್ಯಮದ ಹಾದಿ ತಪ್ಪುತ್ತಿರುವ ಬಗ್ಗೆ ಎಚ್ಚರಿಸಿದರು.

ಊಹಾ ಪತ್ರಿಕೋದ್ಯಮದ ಅಪಾಯ: ಇಂದಿನ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಸಂವೇದನಾಶೀಲತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ. ಕ್ಷುಲ್ಲಕ ವಿಚಾರಗಳನ್ನು, ಅದರಲ್ಲೂ ಗಂಡ-ಹೆಂಡತಿ ಜಗಳದಂತಹ ವೈಯಕ್ತಿಕ ವಿಷಯಗಳನ್ನು ಇಡೀ ದಿನ ತೋರಿಸುವುದರಿಂದ ಸಮಾಜಕ್ಕೆ ಏನು ಪ್ರಯೋಜನ? ಇಂತಹ ವಿಷಯಗಳ ಪರಿಣಾಮದ ಬಗ್ಗೆ ಮಾಧ್ಯಮ ಸಂಸ್ಥೆಗಳು ಗಂಭೀರವಾಗಿ ಯೋಚಿಸಬೇಕು ಎಂದರು.

ಗಾಂಧಿ-ಅಂಬೇಡ್ಕರ್ ಹಾದಿ ಮರೆಯದಿರಿ: ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಅಸಮಾನತೆಯನ್ನು ಹೋಗಲಾಡಿಸಿ ಸಮಸಮಾಜ ಕಟ್ಟುವ ಬಸವಾದಿ ಶರಣರ ಆಶಯಗಳನ್ನು ಮುಂದುವರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಅಸಮಾನತೆ ಮುಂದುವರಿಯಲಿ ಎಂದು ಬಯಸುತ್ತವೆ, ಆದರೆ ಪತ್ರಕರ್ತರು ಜನರ ಅರಿವು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಪೊರೇಟ್ ಹಿಡಿತ ಹಾಗೂ ಸಂಪಾದಕೀಯ ಸ್ವಾತಂತ್ರ್ಯ: ಮಾಧ್ಯಮಗಳ ಮೇಲಿರುವ ಕಾರ್ಪೊರೇಟ್ ಪ್ರಭಾವದ ಬಗ್ಗೆ ಮಾತನಾಡುತ್ತಾ, ಅನೇಕ ಮಾಧ್ಯಮ ಸಂಸ್ಥೆಗಳು ಇಂದು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿವೆ. ಪತ್ರಕರ್ತರು ಸತ್ಯ ಬರೆದರೂ, ಮಾಲೀಕರ ಒತ್ತಡಕ್ಕೆ ಮಣಿದು ಸಂಪಾದಕರು ಅದನ್ನು ಬದಲಿಸುವ ಪರಿಸ್ಥಿತಿ ಇದೆ. ನಾನು ಸಚಿವನಾಗಿ 40 ವರ್ಷಗಳಾದರೂ, ಇದುವರೆಗೂ ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಯಾರನ್ನೂ ಕೇಳಿಲ್ಲ. ಪತ್ರಿಕೋದ್ಯಮಕ್ಕೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ಇರಬೇಕು ಎಂದರು.

ಸರ್ಕಾರದ ಬದ್ಧತೆ ಮತ್ತು ಪತ್ರಕರ್ತರ ಸವಲತ್ತು: ಕಾಂಗ್ರೆಸ್ ಸರ್ಕಾರವು ಅಂಬೇಡ್ಕರ್ ಅವರ ಆಶಯದಂತೆ ‘ಯೂನಿವರ್ಸಲ್ ಬೇಸಿಕ್ ಇನ್‌ಕಮ್’ ತತ್ವದಡಿ ಬಡವರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದ ಸಿಎಂ, ಪತ್ರಕರ್ತರ ಹಿತರಕ್ಷಣೆಗೂ ಸರ್ಕಾರ ಬದ್ಧವಾಗಿದೆ ಎಂದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಿದ್ದೇ ನಾನು. ಈ ಯೋಜನೆಯಲ್ಲಿ ಏನಾದರೂ ತಾಂತ್ರಿಕ ತೊಂದರೆಗಳಿದ್ದರೆ ಅದನ್ನು ಚರ್ಚಿಸಿ ಶೀಘ್ರವಾಗಿ ಬಗೆಹರಿಸಲಾಗುವುದು. ಜನಸಾಮಾನ್ಯರು ಇಂದಿಗೂ ಮಾಧ್ಯಮಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪತ್ರಿಕಾ ರಂಗದ ಮೇಲಿದೆ ಎಂದರು.

Leave a Reply