ಬೆಂಗಳೂರು: ನಾಳೆ ನ್ಯಾಷನಲ್ ಕಾಲೇಜಿನ ಸಾಹಿತ್ಯ ವೇದಿಕೆಯ ತಿಂಗಳ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಹಿರಿಯ ಪರ್ತಕರ್ತ ಇಂಧೂದರ ಹೊನ್ನಾಪುರ ಅವರು ‘ಮಾಧ್ಯಮಗಳು ಮತ್ತು ವರ್ತಮಾನದ ಬಿಕ್ಕಟ್ಟುಗಳು’ ಎನ್ನುವ ವಿಷಯದ ಕುರಿತು ಮಾತನಾಡಲಿದ್ದಾರೆ. ಮಾತಿನ ನಂತರ ಚರ್ಚೆ, ಸಂವಾದ ಇರುತ್ತದೆ.
ಕರ್ನಾಟಕದ ಸಾಮಾಜಿಕ ಚಳುವಳಿಗಳು ಮತ್ತು 70-80 ದಶಕಗಳ ಕನ್ನಡ ಪತ್ರಿಕೋದ್ಯಮದ ಇತಿಹಾಸ ಬಲ್ಲವರಿಗೆ ಇಂದೂಧರ ಹೊನ್ನಾಪುರ ಯಾರೆಂಬುದನ್ನು ವಿವರಿಸುವ ಅಗತ್ಯವಿಲ್ಲ.
ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಇಂಧೂದರ ಹೊನ್ನಾಪುರ ಪತ್ರಿಕೊದ್ಯಮವನ್ನು ಯಾವತ್ತೂ ತಮ್ಮ ಹೋರಾಟದ ವಿಸ್ತರಣೆಯಾಗಿ ನೋಡುತ್ತ ಬಂದಿದ್ದಾರೆ.
ಎಪ್ಪತ್ತರ ದಶಕದಲ್ಲಿ ಪತ್ರಕರ್ತರಾಗಿ ರಾಜಶೇಖರ ಕೋಟಿಯವರ ‘ಆಂದೋಲನ’ದಿಂದ ತಮ್ಮ ಬರವಣಿಗೆ ಆರಂಭಿಸಿ ಕರ್ನಾಟಕದ ದಲಿತ ಚಳುವಳಿಯ ದನಿಯಾಗಿ ಎಪ್ಪತ್ತರ ದಶಕದಲ್ಲಿ ರೂಪುಗೊಂಡ ‘ಶೋಷಿತ’, ‘ಪಂಚಮ’ ಪತ್ರಿಕೆಗಳು ರೂಪುಗೊಳ್ಳುವುದರಲ್ಲಿ ಮಹತ್ವದ ಪಾತ್ರ ವಹಿಸಿದರು. ಎಪ್ಪತ್ತರ ದಶಕದಲ್ಲಿ ‘ಪ್ರಜಾವಾಣಿ’ಗೆ ಸೇರುವ ಮೂಲಕ ಕನ್ನಡದ ಮುಖ್ಯವಾಹಿನಿ ಪತ್ರಿಕೆಗೆ ಸೇರಿದ ತಳಸಮುದಾಯದ ಪರ್ತಕರ್ತರಲ್ಲಿ ಮೊದಲಿಗರಾದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಕೊಳಗೇರಿಗಳ ಕುರಿತಾದ ಸರಣಿ ವರದಿಗಳು, ದಲಿತ ದೌರ್ಜನ್ಯದ ಕರಾಳ ಕಥನಗಳು, ನಗರದ ಅಪರಾಧ ಜಗತ್ತಿನ ನಲುಗಿದ ನಾರಿ ಕುಸುಮಗಳು, ಗುಜರಾತಿನ ಮಿಸಲಾತಿ ವಿರೋಧಿ ಹತ್ಯಾಕಾಂಡದ ರಕ್ತಸಿಕ್ತ ಅಧ್ಯಾಯಗಳು, ಕಳ್ಳಭಟ್ಟಿ ದುರಂತದ ಮಗ್ಗುಲುಗಳು ಹೀಗೆ ಮುಖ್ಯವಾಹಿನಿಯು ಕಣ್ಣೆತ್ತಿಯೂ ನೋಡದ ಹಲವು ಮುಖಗಳನ್ನು ಅನಾವರಣಗೊಳಿಸಿದರು.
ಪ್ರಜಾವಾಣಿಯ ನಂತರ ಜನಪರ ಪತ್ರಿಕೋದ್ಯಮದ ಪ್ರಯತ್ನಗಳಾಗಿ ಶುರುವಾದ ವಡ್ಡರ್ಸೆ ರಘುರಾಮಶೆಟ್ಟರ ‘ಮುಂಗಾರು’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಅಲ್ಲಿಂದ ಮುಂದೆ ‘ಸುದ್ದಿ ಸಂಗಾತಿ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. ಕೆಲ ವರ್ಷ ‘ಅಗ್ನಿ’ ವಾರಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಸಾಮಾಜಿಕ ಕಳಕಳಿ ಮತ್ತು ತಳಸಮುದಾಯದ ಪ್ರಶ್ನೆಗಳನ್ನು ಗಂಭೀರವಾಗಿ ಎತ್ತಿಕೊಳ್ಳುತ್ತಿರುವ ‘ಸಂವಾದ’ ಮಾಸಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ತಮ್ಮ ಸುದೀರ್ಘ ಕಾಲದ ಪತ್ರಿಕೋದ್ಯಮದ ಅನುಭವದ ಹಿನ್ನಲೆಯಲ್ಲಿ ಸಮಕಾಲೀನ ಸಮಾಜದಲ್ಲಿ ಮಾಧ್ಯಮದ ಪಾತ್ರದ ಕುರಿತು ಮಾತಾನಾಡುತ್ತಾರೆ.
ದಯವಿಟ್ಟು ಬಿಡುವು ಮಾಡಿಕೊಂಡು ಜೊತೆಯಾಗಿ.
ನಾಳೆ ಸಂಜೆ 4 ಗಂಟೆಗೆ.




