ವಿಶ್ವ ಕಾರ್ಮಿಕ ದಿನಾಚರಣೆ ಶುಭಾಶಯಗಳು
‘ಮೇ ಡೇ’ ಯಾವೊಬ್ಬ ರಾಜಕಾರಣಿಯ ಜಯಂತಿಯಲ್ಲ. ಎಂಟು ಗಂಟೆಗಳ ದುಡಿಮೆ,ವಾರದ ರಜೆಗಾಗಿ ಹೋರಾಡಿ ಪ್ರಭುತ್ವ ಮತ್ತು ಬಂಡವಾಳಷಾಹಿಗಳಿಂದ ಸಾರ್ವಜನಿಕವಾಗಿ ನೇಣುಗಂಬಕ್ಕೇರಿದ ಹುತಾತ್ಮರ ಸಂಸ್ಮರಣೆ.
ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಕಾರ್ಮಿಕರ ದಿನಾಚರಣೆಗೆ ಬಹು ದೊಡ್ಡ ಇತಿಹಾಸವಿದೆ. ಈ ದಿನ ಎಂಟು ಗಂಟೆಗಳ ದುಡಿಮೆ,ವಾರದ ರಜೆ ಮುಂತಾದ ಕಲ್ಯಾಣ ಕಾಯ್ದೆಗಳಿಗೆ ಆಗ್ರಹಿಸಿ ಅಮೆರಿಕಾದಲ್ಲಿ ಶಾಂತಿಯುತ ಹೋರಾಟ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡವಾಳಷಾಹಿ ಮತ್ತು ಪ್ರಭುತ್ವ ಪ್ರೇರಿತ ಗೋಲಿಬಾರ್ ಮತ್ತು ಹೋರಾಟಗಾರರ ಮರಣದಂಡನೆ ಸ್ಮರಣಾರ್ಥ “ಮೇ 1 ತಾರೀಖನ್ನು” ಮೇ ಡೇ ಅಥವಾ “ಕಾರ್ಮಿಕ ದಿನಾಚರಣೆ” ಎಂದು ಆಚರಿಸಲಾಗುತ್ತಿದೆ..
ಭಾರತದಲ್ಲಿ ಕಾರ್ಮಿಕ ಚಳುವಳಿಗೆ ಶತಮಾನದ ಇತಿಹಾಸವಿದೆ.ಬ್ರಿಟಿಷ್ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಮದ್ರಾಸ್ ನಲ್ಲಿ ಪ್ರಥಮವಾಗಿ ಕಾರ್ಮಿಕರ ಸಂಘ ಆರಂಭವಾಯ್ತು. ಮುಂಬೈ,ಕಲ್ಕತ್ತಾ ಪ್ರೆಸಿಡೆನ್ಸಿಗಳಲ್ಲಿ ಸಹ ಹೋರಾಟ ಶುರುವಾಗಿತ್ತು. 1917 ರ ರಷ್ಯಾ ಕ್ರಾಂತಿಯು ನಮ್ಮ ದೇಶದ ಕಾರ್ಮಿಕ ಚಳುವಳಿಯ ಮೇಲೆ ಮಹತ್ವದ ಪ್ರಭಾವ ಬೀರಿದೆ.
1877 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ಮುಷ್ಕರ ನಡೆದದ್ದು Express mills ಮಹಾರಾಷ್ಟ್ರದ ನಾಗಪುರದಲ್ಲಿ. 1890 ರಲ್ಲಿ ಬ್ರಿಟನ್ ಸರ್ಕಾರ ಭಾರತ ( British India govt) ಸರ್ಕಾರಕ್ಕೆ ಕಾರ್ಮಿಕರ ಕುರಿತಾಗಿ ಸೂಕ್ತ ಕಾಯ್ದೆ ರೂಪಿಸುವಂತೆ ನಿರ್ದೇಶನ ನೀಡಿತು. 1890 ರಲ್ಲಿ ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಷನ್ ಪ್ರಾರಂಭಿಸಲಾಯ್ತು. 1900 ರಲ್ಲಿ ಪೋಸ್ಟಲ್ ಯೂನಿಯನ್,ಪ್ರಿಂಟರ್ಸ್ ಯೂನಿಯನ್ ಕಲ್ಕತ್ತ ಹೀಗೆ ಹಲವಾರು ಸಂಘಟನೆಗಳು ಪ್ರಾರಂಭವಾದವು.
1923 ರಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರ The workmen compensation act -1923, The Trade union act -1926, Industrial dispute act-1947,Factories act – 1948 ಮುಂತಾದವು ಜಾರಿಗೆ ಬಂದಿತು. 8 ಗಂಟೆಗಳ ಕಾಲ ದುಡಿಮೆ ಮತ್ತು ವಾರದ ರಜಾ ದಿನಗಳನ್ನು ಕಾರ್ಮಿಕ ಸಂಘಟನೆಗಳು ತಮ್ಮ ತ್ಯಾಗ ಬಲಿದಾನಗಳಿಂದ ಬ್ರಿಟಿಷರ ಕಾಲದಲ್ಲಿಯೇ ಗಳಿಸಲಾಗಿದೆ.
ಪ್ರಥಮ,ದ್ವಿತೀಯ ಮತ್ತು ಮೂರನೆಯ ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಕಮ್ಯೂನಿಸ್ಟರು ಮತ್ತು ಸಮಾಜವಾದಿಗಳ ಬೆಂಬಲ,ಭಾರತದ ಆಡಳಿತದ ಮೇಲಿನ ಸೋವಿಯತ್ ರಶಿಯಾ ಒಕ್ಕೂಟದ ಪ್ರಭಾವಗಳು ಮತ್ತು International Labour Organisation ಗಳ ಕಟ್ಟುಪಾಡುಗಳಿಂದ ಭಾರತದಲ್ಲಿ ಒಂದಿಷ್ಟು ಕಾರ್ಮಿಕರ ಪರವಾದ ಕಾಯ್ದೆಗಳು ರಚನೆಯಾಗಿ ಕಾರ್ಮಿಕ ಸಂಘಟನೆಗಳು ಬಲಿಷ್ಟವಾಗಿದ್ದವು.
ಕಾರ್ಮಿಕರ ದುಡಿಯುವ ಅವಧಿಯನ್ನು 8 ಗಂಟೆಯಿಂದ 12 ಗಂಟೆಯವರೆಗೆ ಹೆಚ್ಚಳ,ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅನುಮತಿ ನೀಡಿರುವ ಅಮಾನವೀಯ ರಾಜ್ಯ ಸರ್ಕಾರದ ನೀತಿಗಳು ಮತ್ತು ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಕಾಯ್ದೆಗಳಿಂದ ಕಾರ್ಮಿಕರು ಮತ್ತಷ್ಟು ಶೋಷಣೆಗೆ ಒಳಪಡುತ್ತಿದ್ದಾರೆ. ಉದ್ಯಮ ರಂಗದಲ್ಲಿ ಖಾಯಂ ಉದ್ಯೋಗ ಎನ್ನುವುದು ಇತಿಹಾಸದ ಪುಟಗಳನ್ನು ಸೇರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಗಾರಿಕಾ, ವಾಣಿಜ್ಯ ಮತ್ತು ರಫ್ತು ನೀತಿಗಳು,GST, ನೋಟ್ ಬ್ಯಾನ್, ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳು / ರೋಬೋಟ್ ಗಳ ಅನಿಯಂತ್ರಿತ ಬೆಳವಣಿಗೆಗಳಿಂದ ಗುಡಿ ಕೈಗಾರಿಕೆ ಸಣ್ಣಪುಟ್ಟ ಮಾಧ್ಯಮ ಪ್ರಮಾಣದ ಕೈಗಾರಿಕೆಗಳು ನಾಶವಾಗಿವೆ.ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.
- ಜಿ ಟಿ ನರೇಂದ್ರ ಕುಮಾರ್, ವಕೀಲರು, ಬೆಂಗಳೂರು




