ಮಾರ್ಚ್ ಮತ್ತು ಏಪ್ರಿಲ್ ಗೃಹಲಕ್ಷ್ಮೀ ಹಣ ಯಾವಾಗ ಜಮಾ? ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಬಿಗ್ ಅಪ್ಡೇಟ್‌!

8 hours ago

4-5 ದಿನಗಳಲ್ಲಿ ಮಾರ್ಚ್ ಗೃಹಲಕ್ಷ್ಮೀ ಹಣ ಜಮಾ

ಬೆಳಗಾವಿ: ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು 4ರಿಂದ 5 ದಿನಗಳಲ್ಲಿ ಹಾಗೂ ಏಪ್ರಿಲ್ ತಿಂಗಳ ಹಣ 8ರಿಂದ 10 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಕನೂರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಕೆಲಸ ಮಾಡುವುದೇ ನನಗೆ ಹುಚ್ಚು. 2013ರ ಚುನಾವಣೆಯಲ್ಲಿ ಸೋತ ಬಳಿಕವೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದೆ. ಬೇರೆಯವರಂತೆ ನಾಟಕ ಮಾಡುವುದಕ್ಕಿಂತ ಕೆಲಸ ಮಾಡಿ ತೋರಿಸುವುದೇ ನನ್ನ ಧ್ಯೇಯ,” ಎಂದು ಹೇಳಿದರು.

ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ಕೇವಲ ಹಿಂದುತ್ವದ ರಾಜಕಾರಣ ಮಾಡಿದ್ದು ಹೊರತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿಲ್ಲ. ಆದರೆ ನಾನು ಪ್ರತಿಯೊಂದು ಸಮಾಜಕ್ಕೂ ಸಹಾಯವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ವ ಭಾಷಿಕರು, ಸರ್ವ ಜಾತಿಯ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.

“ಬಾರಾಮತಿಯ ಮಾದರಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಮೂಲಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈತರು ವರ್ಷಕ್ಕೆ 2ರಿಂದ 3 ಬೆಳೆ ಬೆಳೆಯುವಂತೆ ನೀರಾವರಿ ಸೌಲಭ್ಯ ಕಲ್ಪಿಸುವ ಕನಸಿದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಯುವರಾಜ ಕದಂ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply