ವರ್ಣಭೇದದ ಜನಕ ಮನು

3 years ago

#Manu #father #racism #ramjandarga #manusmriti

ಪಿತೃಪ್ರಧಾನ (ಪುರುಷ ಪ್ರಧಾನ) ವ್ಯವಸ್ಥೆಯ ಮುಖ್ಯ ಲಕ್ಷಣವೆಂದರೆ ಆ ಬುಡಕಟ್ಟಿನ ಜನರು ಅಲೆಮಾರಿಗಳಾಗಿರುವುದು. ಅವರಿಗೆ ಚರಾಸ್ತಿಯೆ ಪ್ರಮುಖವಾದುದು. ದನಕರುಗಳು, ಆಡು, ಕುರಿ, ಒಂಟೆ, ಕುದುರೆ, ಸೀಳುನಾಯಿ, ಬಿಲ್ಲು, ಬಾಣ, ರಥ, ಡೇರೆ, ಪಾತ್ರೆಪಗಡಿ ಮುಂತಾದವು ಅವರ ಚರಾಸ್ತಿಗಳು. ಅವರು ಕುಟುಂಬಸಮೇತ ಹುಲ್ಲುಗಾವಲಿನ ಜಾಡು ಹಿಡಿದು ಜಾನುವಾರುಗಳನ್ನು ಮೇಯಿಸುತ್ತ ಹೋಗುವವರು. ಸೀಮೋಲ್ಲಂಘನ ಅವರ ಜೀವನವಿಧಾನದಲ್ಲೇ ಇತ್ತು. ಹೀಗೆ ಅಲೆಮಾರಿ ಜನಾಂಗಗಳ ಭಾಷಾ ಕುಟುಂಬವಾದ ಇಂಡೋ ಯುರೋಪಿಯನ್ ಭಾಷಾ ಕುಟುಂಬ ಜಗತ್ತಿನಲ್ಲೇ ಅತಿ ದೊಡ್ಡ ಭಾಷಾಕುಟುಂಬವಾಗಿದೆ. ಸಂಸ್ಕೃತ, ಗ್ರೀಕ್, ಲ್ಯಾಟಿನ್, ಟರ್ಕಿ, ಉಜ್ಬೆಕ್, ಪಾರ್ಸಿ, ಇಂಗ್ಲಿಷ್, ಜರ್ಮನಿ, ರಷ್ಯನ್ ಮುಂತಾದ ಭಾಷೆಗಳು ಈ ಭಾಷಾಕುಟುಂಬಕ್ಕೆ ಸೇರಿದ ಸಹೋದರಿ ಭಾಷೆಗಳಾಗಿವೆ.

ಇಂದಿನ ಟರ್ಕಿ ದೇಶದ ಏಷ್ಯಾ ಭಾಗದಲ್ಲಿ ಬರುವ ಅನಾಟೋಲಿಯಾ (ಏಷ್ಯಾ ಮೈನರ್) ಪ್ರದೇಶದಿಂದ ಅಲೆಮಾರಿ ಆರ್ಯರು ದನ ಮೇಯಿಸುತ್ತ ಉಜ್ಬೆಕಿಸ್ತಾನ್, ಅಫಘಾನಿಸ್ತಾನ್, ದಾಟಿ ವಾಯವ್ಯ ಮಾರ್ಗದಿಂದ ಸಿಂಧೂನದಿ ಸಂಸ್ಕೃತಿಯ ಮೊಹೆಂಜೊದಾರೊ ನಾಗರಿಕತೆಯ ಮೇಲೆ ದಾಳಿ ಮಾಡಿದರು.

ಮೊಹೆಂಜೊದಾರೊ ನಾಗರಿಕತೆ ಮಾತೃಪಧಾನ ವ್ಯವಸ್ಥೆಯನ್ನು ಹೊಂದಿತ್ತು. ಅವರದು ಸೀಮೋಲ್ಲಂಘನ ಸಂಸ್ಕೃತಿ ಆಗಿರದೆ ಯುದ್ಧೋನ್ಮಾದವಿಲ್ಲದ ಸ್ಥಳೀಯ ಭೂಮಿ, ಮನೆಯಂಥ ಸ್ಥಿರಾಸ್ತಿ ಮೂಲದ ಮಾತೃಪ್ರಧಾನ ಸಂಸ್ಕೃತಿ ಆಗಿತ್ತು. ಅವರ ಬಳಿ ರಥ, ಕುದುರೆ, ಬಿಲ್ಲು, ಬಾಣ, ಸೀಳುನಾಯಿಗಳಿರಲಿಲ್ಲ. ಇವೆಲ್ಲವನ್ನೂ ಹೊಂದಿದ್ದ ಆರ್ಯರು ದಾಳಿ ಮಾಡಿ ಸಿಂಧೂ ನದಿಯಿಂದ ಗಂಗಾ ನದಿ ಪ್ರದೇಶ ಮತ್ತು ಕೆಳಗಡೆ ವಿಂಧ್ಯ ಪರ್ವತಾವಳಿವರೆಗಿನ ಪ್ರದೆಶವನ್ನು ಆಕ್ರಮಿಸಿಕೊಂಡು “ಆರ್ಯಾವರ್ತ” ಎಂದು ಕರೆದರು.

ಈ ಆರ್ಯರು ಮೂಲನಿವಾಸಿಗಳನ್ನು ಅನಾರ್ಯರು(ಅನಾಗರಿಕರು) ಎಂದರು. ವಿವಿಧ ಬುಡಕಟ್ಟುಗಳ ಮೂಲನಿವಾಸಿಗಳ ಮೇಲೆ ನಿರಂತರ ದಾಳಿ ಮಾಡುತ್ತ ಅವರ ಮೇಲೆ ವಿಜಯ ಸಾಧಿಸಿದರು.

ಮಾತೃಪ್ರಧಾನ ವ್ಯವಸ್ಥೆಯ ಬುಡಕಟ್ಟು ಜನರಿಗೆ ರಕ್ಷಣಾತ್ಮಕ ಹೋರಾಟ ಮಾಡುವುದು ಗೊತ್ತಿತ್ತೇ ಹೊರತಾಗಿ ಪುರುಷಪ್ರಧಾನ ವ್ಯವಸ್ಥೆಯ ಅಲೆಮಾರಿ ಜನಾಂಗದವರ ಹಾಗೆ ಆಕ್ರಮಣಕಾರಿ ದಾಳಿ ಮಾಡುವ ಕ್ರಮ ಗೊತ್ತಿರಲಿಲ್ಲ‌. ಹಾಗೆ ಆಕ್ರಮಣ ಮಾಡಲು ಸಹಾಯಕವಾಗುವಂಥ ಆ ಕಾಲದ ಆಧುನಿಕ ಬಿಲ್ಲು ಬಾಣ ರಥಗಳು ಅವರ ಬಳಿ ಇರಲಿಲ್ಲ. ಅಂಥವುಗಳನ್ನು ಪ್ರಯೋಗಿಸುವ ಚಾಕಚಕ್ಯತೆಯೂ ಗೊತ್ತಿರಲಿಲ್ಲ. ಆಕ್ರಮಣಕಾರಿ ದಾಳಿಗೆ ಬೇಕಾದ ಕುದುರೆ ಮತ್ತು ಸೀಳುನಾಯಿಗಳೂ ಇರಲಿಲ್ಲ!

ಈ ಎಲ್ಲ ಕಾರಣಗಳಿಂದ ಮೂಲನಿವಾಸಿಗಳು ಸೋಲನ್ನು ಅನುಭವಿಸಬೇಕಾಯಿತು‌‌. ಅನೇಕ ಬುಡಕಟ್ಟುಗಳು ದಟ್ಟವಾದ ಅರಣ್ಯ ಸೇರಿದವು. ಮತ್ತೆ ಕೆಲ ಬುಡಕಟ್ಟುಗಳು ವಿಂಧ್ಯಪರ್ವತಾವಳಿ ದಾಟಿ ದಕ್ಷಿಣಕ್ಕೆ ಬಂದವು. ದಕ್ಷಿಣ ಪ್ರದೇಶದಲ್ಲಿ ವಾಸಿಸುವವರಿಗೆ ಆರ್ಯರು, “ಮ್ಲೇಚ್ಛರು” ಎಂದು ಕರೆದರು. ಆರ್ಯಾವರ್ತದಲ್ಲೇ ಉಳಿದ ಮೂಲ ನಿವಾಸಿಗಳನ್ನು ಶೂದ್ರರು, ದಾಸರು ಎಂದು ಕರೆದು, ನಾಲ್ಕನೆಯ ವರ್ಣಕ್ಕೆ ಸೇರಿಸಿ ದುಡಿಸಿಕೊಳ್ಳತೊಡಗಿದರು. ಅವರಲ್ಲಿನ ಬಂಡುಕೋರರನ್ನು ಊರ ಹೊರಗೆ ಇಟ್ಟರು.

ಮೂಲನಿವಾಸಿಗಳನ್ನು ಶೋಷಿಸುವುದಕ್ಕಾಗಿ ಆರ್ಯರು ದಬ್ಬಾಳಿಕೆಯಿಂದ ರೂಪಿಸಿದ ಸಮಾಜಕ್ಕೆ ತಮ್ಮದೇ ಸಾಂವಿಧಾನಿಕ ರೂಪ ಕೊಡುವುದಕ್ಕಾಗಿ ಮನು ಮಹರ್ಷಿಯ ಸಹಾಯ ಕೇಳಿದರು. ಹೀಗೆ ಮನುಸ್ಮೃತಿಯ ರಚನೆಯಾಯಿತು.

ತನ್ನ ಸ್ಮೃತಿ [ಮನುಸ್ಮೃತಿ ಎಂಬ ಕಾನೂನು] ಸರ್ವಶ್ರುತಿ [ಸಕಲವೇದ] ಪ್ರಣೀತವಾಗಿದೆ ಎಂದು ಮನು ಸ್ಪಷ್ಟಪಡಿಸಿದ್ದಾನೆ. ಶ್ರುತಿಗಳಾಗಲೀ ಸ್ಮೃತಿಗಳಾಗಲೀ ಸವರ್ಣೀಯರ ಪರವಾಗಿವೆ ಎಂಬುದಕ್ಕೆ ಮನುವಿನ ಮಾತೇ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಅತಿ ಹಳೆಯ ವೇದವಾದ ಋಗ್ವೇದದಲ್ಲೂ ಇದರ ಪ್ರಸ್ತಾಪವಿದೆ.

ವಿ ಜಾನಿಹಿ ಆರ್ಯಾನ್ ಯೇ ಚ ದಸ್ಯವಃ ಬರ್ಹಿಸ್ಮತೆ ರಂಧಯ ಶಾಸದವ್ರತಾನ್|
ಶಾಕೀಭವ ಯಜಮಾನಸ್ಯ ಚೋದಿತಾ ವಿಶ್ವೇತ್ತಾ
ತೇ ಸದಮಾದೇಷು ಚಾಕನ||
(ಆರ್ಯರನ್ನು ಮತ್ತು ದಸ್ಯುಗಳನ್ನು [ಮೂಲನಿವಾಸಿಗಳನ್ನು] ಸರಿಯಾಗಿ ತಿಳಿ. ಯಜ್ಞಾದಿ ವ್ರತಗಳನ್ನು ಮಾಡದ ದಸ್ಯುಗಳನ್ನು ಶಿಕ್ಷಿಸು. ಯಜ್ಞದ ವೇಳೆ ದೇವತೆಗಳನ್ನು ಆಹ್ವಾನಿಸಲು ದರ್ಬೆಯ ಹುಲ್ಲನ್ನು ಹರಡಿರುವವರಿಗೆ [ಯಜ್ಞ ಮಾಡುವವರಿಗೆ] ಅವರು [ದಸ್ಯುಗಳು] ಅಧೀನರಾಗುವ ಹಾಗೆ ಮಾಡು. ಯಜ್ಞ ಮಾಡುವ ಯಜಮಾನನಿಗೆ ನೀನು ಪ್ರೋತ್ಸಾಹದಾಯಕನಾಗು. ನಿನ್ನ ಪೂರ್ವೋಕ್ತ ಕೃತ್ಯಗಳು ನನಗೆ ಆನಂದದಾಯಕ.)

  • ಋಗ್ವೇದ 1ನೇ ಮಂಡಲ 5ನೇ ಸೂಕ್ತ, 8ನೇ ಮಂತ್ರ
    ಹೀಗೆ ಆರ್ಯಾವರ್ತದಲ್ಲಿ ಭಯೋತ್ಪಾದನೆ ಪ್ರಾರಂಭವಾಯಿತು. ಅದಾಗಲೇ ಆರ್ಯಾವರ್ತದಲ್ಲಿ ಆರ್ಯರು ರೂಢಿಗತ ಮಾಡಿಕೊಂಡಿದ್ದ ನಡವಳಿಕೆಗೆ ಮನು ತನ್ನ ಮನುಸ್ಮೃತಿಯಲ್ಲಿ ಶಾಸನದ ರೂಪ ಕೊಟ್ಟ. ಮನುಸ್ಮೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, “ಅದು ಧರ್ಮಗ್ರಂಥವಲ್ಲ, ಶೋಷಕರ ಸಂವಿಧಾನ” ಎಂಬುದು ತಿಳಿದುಬರುತ್ತದೆ.

ಮನುವಿನ ಧರ್ಮದ ಪರಿಕಲ್ಪನೆ ಮನುಸ್ಮೃತಿಯಲ್ಲಿ ಸ್ಪಷ್ಟವಾಗಿದೆ. ಧರ್ಮ ಎಂಬುದು ನಾಲ್ಕೂ ವರ್ಣ ಮತ್ತು ಜಾತಿಗಳವರು ತಮ ತಮಗೆ ನಿರ್ವಹಿಸಿದ ಕರ್ತವ್ಯಗಳನ್ನು ನಿಭಾಯಿಸುವುದು. ಹೀಗೆ ಆಯಾ ಜಾತಿ/ವರ್ಣಗಳಿಗೆ ವಹಿಸಿರುವ ಜವಾಬ್ದಾರಿಗಳನ್ನು ನ್ಯಾಯಯುತ ಕರ್ತವ್ಯ ಎಂದು ಕಾಯಾ ವಾಚಾ ಮನಸಾ ನಂಬಿ ಆ ಪ್ರಕಾರ ಬದುಕುವ ಮೂಲಕ ಸದ್ಗತಿ ಹೊಂದಬೇಕು ಎಂಬುದು ಮನು ಮಹರ್ಷಿಯ ಆಶಯವಾಗಿದೆ. ಧರ್ಮ ಎಂಬುದು ವರ್ಣಾಶ್ರಮ ಆಧಾರದ ಮೇಲೆ ನಡೆದುಕೊಳ್ಳಬೇಕಾದ ಬಾಧ್ಯತೆಗಳು ಎಂಬುದು ಮನುವಿನ ವಾದವಾಗಿದೆ‌. ಆದ್ದರಿಂದ ಧರ್ಮ ಎಂಬುದು ವೈದಿಕ ಪರಿಕಲ್ಪನೆಯ ವಿದ್ಯುಕ್ತ ವರ್ಣ ಜಾತಿ ಆಧಾರಿತ ಕಟ್ಟುಪಾಡುಗಳಿಗೆ ಸಂಬಂಧಿಸಿದುದಾಗಿದೆ.

ಶ್ರುತಿ ಮತ್ತು ಸ್ಮೃತಿಗಳು ಬಣ್ಣದ ಆಧಾರದ ಮೇಲೆ ಮಾನವರನ್ನು ಆರ್ಯರು ಮತ್ತು ಅನಾರ್ಯರೆಂದು ವಿಂಗಡಣೆ ಮಾಡಿವೆ. ಆರ್ಯರು ಹೊರಗಿನಿಂದ ಬಂದ ಬಿಳಿ ಚರ್ಮದವರು. ಮೂಲನಿವಾಸಿಗಳಾದ ಕಪ್ಪು ಜನರು ಅನಾರ್ಯರು.

ಧರ್ಮವು ‘ಧರ್’ ಧಾತುವಿನಿಂದ ಸೃಷ್ಟಿಯಾಗಿದೆ. ಧರ್ ಎಂದರೆ ಎತ್ತಿ ಹಿಡಿಯುವುದು ಅಥವಾ ಹಿಡಿದಿಟ್ಟುಕೊಳ್ಳುವುದು. “ಯದ್ಧಾರ್ಯತೇ ತದ್ಧರ್ಮಃ” (ಧಾರಣ ಅಂದರೆ ಎತ್ತಿಹಿಡಿಯುವ ಶಕ್ತಿಯುಳ್ಳದ್ದೇ ಧರ್ಮ.) ಮನು ಮಹರ್ಷಿಯ ಧರ್ಮದ ಪರಿಕಲ್ಪನೆ ಎಷ್ಟೊಂದು ಕ್ರೌರ್ಯದಿಂದ ತುಂಬಿದೆ ಮತ್ತು ಯಾರನ್ನು ಎತ್ತಿ ಹಿಡಿಯುವ ಶಕ್ತಿ ಹೊಂದಿದೆ ಎಂಬುದನ್ನು ಅರಿತುಕೊಳ್ಳಲು ಮನುಸ್ಮೃತಿಯ ಅಧ್ಯಯನ ಮಾಡುವುದು ಅವಶ್ಯವಾಗಿದೆ.

ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ|
ತಸ್ಮಾದ್ಧರ್ಮೋ ಹಂತವ್ಯೋ ಮಾ ನೋ ಧರ್ಮೋ ಹತೋsವಧೀತ್||
(ನಾವು ಧರ್ಮವನ್ನು ಕೊಂದರೆ ಅದು ನಮ್ಮನ್ನು ಕೊಲ್ಲುತ್ತದೆ. ಧರ್ಮವನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಧರ್ಮವನ್ನು ಕೊಲ್ಲಬಾರದು. ಆ ಧರ್ಮ ಕೂಡ ನಮ್ಮನ್ನು ಕೊಲ್ಲದಿರಲಿ.)

  • ಮನುಸ್ಮೃತಿ 8 -15

ಧರ್ಮವನ್ನು ಕೊಲ್ಲುವುದೆಂದರೆ ನಾಲ್ಕೂ ವರ್ಣ ಮತ್ತು ಜಾತಿಗಳವರು ಮನುಸ್ಮೃತಿಯಲ್ಲಿ ಹೇಳಿದ ಪ್ರಕಾರ ಕರ್ತವ್ಯ ಪಾಲನೆ ಮಾಡದಿರುವುದು. ಈ ಕರ್ತವ್ಯಗಳು ಶೂದ್ರರನ್ನು ಶೋಷಣೆಗೆ ಒಳಪಡಿಸುತ್ತವೆ. ಆದರೆ ಅನುಕ್ರಮವಾಗಿ ಸವರ್ಣೀಯರಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗೆ ಲಾಭದಾಯಕವಾಗಿವೆ. ಹಾಗೆ ಮಾಡದಿದ್ದರೆ ಧರ್ಮಗ್ಲಾನಿಯಾಗಿ ಸಮಾಜದಲ್ಲಿ ಹಾಹಾಕಾರ ತಾಂಡವವಾಡುತ್ತದೆ ಎಂಬುದು ಮನುವಾದವಾಗಿದೆ. ಆತ ಹೇಳಿದ ಪ್ರಕಾರ ವರ್ಣಾಶ್ರಮ ಧರ್ಮವನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ‌. ಅದ್ದರಿಂದ ಧರ್ಮ ರಕ್ಷಣೆ ಮಾಡುವುದೆಂದರೆ ಸವರ್ಣೀಯರು ಅವರವರ ಯೋಗ್ಯತೆಗೆ ಅನುಸಾರವಾಗಿ ಶೋಷಣೆ ಮಾಡಲು ಅಡ್ಡಿಪಡಿಸದೆ ಇರುವುದು. ಮನುಧರ್ಮ ರಕ್ಷಣೆಗಾಗಿ ಶೂದ್ರರು ಶೋಷಣೆಗೆ ಒಳಗಾಗುತ್ತಲೇ ಇರುವುದು.

ಜಾತಿಮಾತ್ರೋಪಜೀವಿ ವಾ ಕಾಮಂ ಸ್ಯಾದ್ಬ್ರಾಹ್ಮಣಬ್ರುವಃ|
ಧರ್ಮಪ್ರವಕ್ತಾ ನೃಪತೇರ್ನ ತು ಶೂದ್ರಃ ಕಥಂಚನ||
(ಧರ್ಮ ವಿಚಾರ ಮಾಡಲು ವಿದ್ವಾಂಸನಾದ ಬ್ರಾಹ್ಮಣನು ರಾಜನಿಗೆ ದೊರೆಯದಿದ್ದ ಪಕ್ಷದಲ್ಲಿ ಬರಿ ಜಾತಿಯಿಂದ ಬ್ರಾಹ್ಮಣನಾಗಿ, ಬ್ರಾಹ್ಮಣ ಧರ್ಮವನ್ನನುಸರಿಸುತ್ತಿದ್ದರೆ ಸಾಕು. ಅಂಥವನು ಕೂಡ ರಾಜನಿಗೆ ಧರ್ಮ ಪ್ರವಚನ ಮಾಡಲು ಸಮರ್ಥನು ಮತ್ತು ಅರ್ಹನು. ಶೂದ್ರನು ಮಾತ್ರ ಎಂದಿಗೂ ರಾಜನಿಗೆ ಧರ್ಮದ ವಿಚಾರವನ್ನು ಹೇಳಲು ಅರ್ಹನಲ್ಲ)

  • ಮನುಸ್ಮೃತಿ 8 -20

ಈಗ ಶುರುವಾಯಿತು ನೋಡಿ ಮನು ಮಹರ್ಷಿಯ ಕೆತ್ತೇಬಾಜಿ. ಅವನ ಧರ್ಮ ಎಂದರೆ ಬ್ರಾಹ್ಮಣ ಹಿತರಕ್ಷಣಾ ಧರ್ಮ. ಶ್ರೇಣೀಕೃತ ಸಮಾಜದಲ್ಲಿಅ ಬ್ರಾಹ್ಮಣನೇ ಅತಿ ಎತ್ತರದ ಸ್ಥಾನದಲ್ಲಿರುವವನು ಎಂಬುದನ್ನು ಆತ ಅವಕಾಶ ಸಿಕ್ಕಲ್ಲೆಲ್ಲ ಹೇಳುತ್ತಲೇ ಇರುತ್ತಾನೆ.

ಶೂದ್ರರು ಎಲ್ಲ ಸವರ್ಣೀಯರ ಸೇವೆ ಮಾಡಬೇಕು. ವೈಶ್ಯರಾದವರು ಬ್ರಾಹ್ಮಣ ಮತ್ತು ಕ್ಷತ್ರಿಯರ ಹಿತಚಿಂತನೆ ಮಾಡಬೇಕು. ಕ್ಷತ್ರಿಯರು ಬ್ರಾಹ್ಮಣರ ಹಿತಚಿಂತನೆ ಮಾಡಬೇಕು ಎಂಬುದು ಮನುವಿನ ದೃಢ ನಿಲುವಾಗಿದೆ. ಹೀಗೆ ಹೇಳುವಲ್ಲಿ ಆತನಿಗೆ ಯಾವ ಲಜ್ಜೆಯೂ ಇಲ್ಲ ಭಯವೂ ಇಲ್ಲ.

ರಾಜನು ಬ್ರಾಹ್ಮಣನಿಂದಲೇ ಧರ್ಮದ ವಿಚಾರವನ್ನು ಅರಿಯಬೇಕು. ಧರ್ಮವಿಚಾರ ತಿಳಿಸಲು ವಿದ್ವಾಂಸನಾದ ಬ್ರಾಹ್ಮಣನೇ ಬೇಕೆಂದಿಲ್ಲ. ದಡ್ಡ ಬ್ರಾಹ್ಮಣನಿದ್ದರೂ ನಡೆಯುತ್ತದೆ. ಆದರೆ ಶೂದ್ರನು ಎಷ್ಟೇ ಜ್ಞಾನಿಯಾಗಿದ್ದರೂ ರಾಜನು ಯಾವ ಕಾಲಕ್ಕೂ ಶೂದ್ರನಿಂದ ರಾಜಧರ್ಮದ ವಿಚಾರಗಳನ್ನು ಅರಿಯಬಾರದು.
ಅರ್ಥಾನರ್ಥಾವುಭೌ ಬುಧ್ವಾ ಧರ್ಮಾಧರ್ಮೌ ಚ ಕೇವಲೌ|
ವರ್ಣಕ್ರಮೇಣ ಸರ್ವಾಣಿ ಪ್ರತ್ಯೇತ್ಯಾರ್ಯಾಣಿ ಕಾರ್ಯಿಣಾಂ||
(ಅರ್ಥ ಅನರ್ಥಗಳನ್ನು ಧರ್ಮ ಅಧರ್ಮಗಳನ್ನು ಸರಿಯಾಗಿ ವಿಶ್ಲೇಷಿಸಿ ತಿಳಿದುಕೊಂಡು ಬ್ರಾಹ್ಮಣಾದಿ ವರ್ಣಕ್ರಮದಿಂದ ನ್ಯಾಯ ಬಯಸಿ ಬಂದಂಥವರ ವಾದ ವಿವಾದಗಳ ವಿಚಾರಣೆ ಮಾಡಬೇಕು.)

  • ಮನುಸ್ಮೃತಿ 8 – 24
    ಸವರ್ಣೀಯರಾಗಲೀ ಶೂದ್ರ ವರ್ಣದವರಾಗಲಿ, ಅವರವರ ಜಾತಿ ವರ್ಣಗಳವರಿಗೆ ಅವರದೇ ಆದ ಕರ್ತವ್ಯಗಳನ್ನು ನಿಗದಿ ಮಾಡಲಾಗಿದೆ.

ವಿವಿಧ ವರ್ಣಗಳ ಜನರು ತಪ್ಪು ಮಾಡಿದಾಗ, ಅವರಿಗೆ ಅವರವರ ವರ್ಣಗಳ ಹಿನ್ನೆಲೆಯಲ್ಲಿ ಮನುಸ್ಮೃತಿಯ ನ್ಯಾಯಪದ್ಧತಿಯ ಪ್ರಕಾರ ರಾಜನಾದವನು ಆಯಾ ವರ್ಣಗಳವರ ವಿವಾದಗಳನ್ನು ಆಲಿಸಿ ತೀರ್ಪು ನೀಡಬೇಕು ಎಂದು ರಾಜರುಗಳಿಗೆ ಮನು ಸೂಚಿಸುತ್ತಾನೆ. ಮನುಸ್ಮೃತಿಯಲ್ಲಿ, ವಿವಿಧ ವರ್ಣಗಳವರಿಗೆ, ಅವರ ಶ್ರೇಣೀಕೃತ ಮರ್ಯಾದೆ ಪ್ರಕಾರ ಒಂದೇ ಅಪರಾಧಕ್ಕೆ ವಿವಿಧ ಶಿಕ್ಷೆಗಳಿವೆ. ಅಪರಾಧ ಒಂದೇ ಪ್ರಕಾರದ್ದಿದ್ದರೂ ಬ್ರಾಹ್ಮಣನಿಗೆ ಅತಿ ಕಡಿಮೆ ಶಿಕ್ಷೆಯಾದರೆ, ಶೂದ್ರರಿಗೆ ಅತಿ ಕಠಿಣ ಶಿಕ್ಷೆ ನೀಡುವಂಥ ವ್ಯವಸ್ಥೆ ಮಾಡಿದ್ದಾನೆ ಮನು.

ಜಾತಿಜಾನಪದಾನ್ಧರ್ಮಾನ್ ಶ್ರೇಣೀಧರ್ಮಾಂಶ್ಚ ಧರ್ಮವಿತ್|
ಸಮೀಕ್ಷ್ಯ ಕುಲಧರ್ಮಾಂಶ್ಚ ಸ್ವಧರ್ಮಂ ಪ್ರತಿಪಾದಯೇತ್||
(ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರ ಜಾತಿ ಧರ್ಮಗಳನ್ನು, ಶ್ರೇಣೀಕೃತ ಧರ್ಮ ವ್ಯವಸ್ಥೆಗಳನ್ನು, ಅವರವರ ಕುಲಧರ್ಮಗಳನ್ನೆಲ್ಲ ಧರ್ಮಜ್ಞನಾದ ರಾಜನು ಗಮನಿಸಿ, ಆಳವಾಗಿ ಪರಿಶೀಲಿಸಿ, ನಂತರ ತನ್ನ ರಾಜಧರ್ಮವನ್ನು ನಿರ್ವಹಿಸಬೇಕು.)

  • ಮನುಸ್ಮೃತಿ 8 – 41

ರಾಜಧರ್ಮವೆಂದರೆ, ರಾಜನಾದವನು ವರ್ಣಾಶ್ರಮ ಧರ್ಮ ರಕ್ಷಣೆಯ ಕರ್ತವ್ಯ ಪಾಲನೆ ಮಾಡುವುದು. ಎಲ್ಲ ವರ್ಣ ಮತ್ತು ಜಾತಿಗಳು ತಮ್ಮ ತಮ್ಮ ಚೌಕಟ್ಟನ್ನು ಮೀರದಂತೆ ಕರ್ತವ್ಯ ಪಾಲನೆ ಮಾಡುವಂತೆ ನೋಡಿಕೊಳ್ಳುವ ರಾಜನೇ ನಿಜವಾದ ರಾಜಧರ್ಮ ಪಾಲಕನು. ಅದಕ್ಕಾಗಿ ರಾಜನಾದವನು ವರ್ಣಾಶ್ರಮ ವ್ಯವಸ್ಥೆಯ ಧರ್ಮಜ್ಞನಾಗಿ ಯಥಾಸ್ಥಿತಿಯನ್ನು ಕಾಪಾಡುವಲ್ಲಿ ಸದಾ ಜಾಗೃತನಾಗಿರಬೇಕು ಎಂದು ಎಚ್ಚರಿಸುತ್ತಾನೆ.

ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ಕ್ಷತ್ರಿಯಸ್ಯ ಬಲಾನ್ವಿತಂ|
ವೈಶ್ಯಸ್ಯ ಪುಷ್ಟಿ ಸಂಯುಕ್ತಂ ಶೂದ್ರಸ್ಯ ತು ಜುಗುಪ್ಸಿತಂ||
(ಬ್ರಾಹ್ಮಣನಿಗೆ ಮಂಗಲ ಸೂಚಕವಾದ, ಕ್ಷತ್ರಿಯನಿಗೆ ಬಲ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹೆಸರುಗಳನ್ನು ಇಡಬೇಕು. [ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರ ಹೆಸರಿನ ಮುಂದೆ ಅನುಕ್ರಮವಾಗಿ ಶರ್ಮ, ವರ್ಮ, ಗುಪ್ತ ಹಾಗೂ ದಾಸ ಎಂಬ ಉಪನಾಮಗಳನ್ನು ಜೋಡಿಸಬೇಕು.]

  • ಮನುಸ್ಮೃತಿ 2 – 31

ರಾಜನಾದವನು ಮತ್ತು ಸಮಾಜದ ಪ್ರತಿಯೊಬ್ಬರು, ಒಬ್ಬನ ವರ್ಣವನ್ನು ಆತನ ಹೆಸರಿನಿಂದಲೇ ಗುರುತಿಸುವಂಥ ವ್ಯವಸ್ಥೆಯನ್ನು ಮನು ಮಾಡಿದ್ದಾನೆ. ಬ್ರಾಹಣನಿಗೆ ಮಂಗಲ ಸೂಚಕವಾದ ಹೆಸರಿನ ಮುಂದೆ ಶರ್ಮ ಎಂದು ಸೇರಿಸಬೇಕು. ಕ್ಷತ್ರಿಯ ಮಗುವಿಗೆ ಶೌರ್ಯ ಸೂಚಕವಾದ ಹೆಸರಿಡಬೇಕು. ಆ ಹೆಸರಿನ ಮುಂದೆ ವರ್ಮ ಶಬ್ದ ಇಡಬೇಕು. ವೈಶ್ಯನಿಗೆ ಸಂಪತ್ತನ್ನು ಸೂಚಿಸುವ ಹೆಸರಿನೊಂದಿಗೆ ಗುಪ್ತ ಸೇರಿಸಬೇಕು. ಹೀಗೆ ಮೂರೂ ಪ್ರಕಾರದ ಸವರ್ಣೀಯರಿಗೆ ಅವರ ವರ್ಣಯೋಗ್ಯತೆಗೆ ತಕ್ಕಂತ ಹೆಸರುಗಳನ್ನಿಡಬೇಕು. ಅದೇರೀತಿ ಶೂದ್ರನಿಗೆ ಆತನ ವರ್ಣ ಯೋಗ್ಯತೆಗೆ ತಕ್ಕಂಥ ಅಸಹ್ಯ ಹುಟ್ಟಿಸುವಂಥ ಹೆಸರಿಟ್ಟು, ಅದರ ಮುಂದೆ ದಾಸ ಉಪನಾಮ ಸೇರಿಸಬೇಕು ಎಂದು ಮನು ಇಡೀ ಸಮಾಜಕ್ಕೆ ವರ್ಣಭೇದದ ಪಾಠ ಹೇಳುತ್ತಾನೆ. ಹೀಗೆ ಮನು ಮಹರ್ಷಿ ವರ್ಣಭೇದ ನೀತಿಯ ಪಿತಾಮಹನಾಗಿದ್ದಾನೆ. ಭಾರತದ ವರ್ಣಭೇದ ನೀತಿಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಆದರೆ ಜಗತ್ತಿನ ಇತರೆಡೆಗಳ ವರ್ಣಭೇದ ನೀತಿಯ ಇತಿಹಾಸ 400 ವರ್ಷ ದಾಟುವುದಿಲ್ಲ.

1652ನೇ ಏಪ್ರಿಲ್ 6ರಂದು ಡಚ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಜಾನ್ ವಾನ್ ರಿಬೀಕ್ ಮೂರು ಹಡಗುಗಳೊಂದಿಗೆ ಭಾರತದ ಕಡೆ ಪ್ರಯಾಣ ಬೆಳೆಸಿದ. ಪ್ರಯಾಣ ಮಧ್ಯೆ ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಬಂದರಿನಲ್ಲಿ ತಂಗಿದ. ಆದರೆ ಭಾರತದ ಕಡೆ ಸಾಗದೆ ಅಲ್ಲೇ ನಾವಿಕರೊಂದಿಗೆ ತಳವೂರಿದ. ಡಚ್ ಈಸ್ಟ್ ಇಂಡಿಯಾ ಕಂಪನಿಗೆ ತಳಹದಿ ರೂಪಿಸಿದ. ಆ ಪ್ರದೇಶದ ಸಾನ್ ಮತ್ತು ಖೊಯಿ ಜನಾಂಗಗಳ ಮೇಲೆ ದಾಳಿ ಮಾಡಿ ಅವರ ಭೂಮಿ ಮತ್ತು ಜಾನುವಾರುಗಳನ್ನು ವಶಪಡಿಸಿಕೊಂಡ. ಹೀಗೆ ದಕ್ಷಿಣ ಆಫ್ರಿಕಾದಲ್ಲಿ, ಭಾರತದಿಂದ ಹೊರಗಡೆ, ಮೊದಲ ಬಾರಿಗೆ ಕಪ್ಪು ಜನರ ಮೇಲೆ ಬಿಳಿಯ ಜನರ ವರ್ಣಭೇದದ ದಬ್ಬಾಳಿಕೆ ಪ್ರಾರಂಭವಾಯಿತು.

ಬ್ರಾಹ್ಮಣಂ ದಶವರ್ಷಂ ತುಂ ಶತವರ್ಷಂ ತು ಭೂಮಿಪಂ|
ಪಿತಾಪುತ್ರೌ ವಿಜಾನೀಯಾದ್ಬ್ರಾಹ್ಮಣಸ್ತು ತಯೋಃ ಪಿತಾ||
(ಹತ್ತು ವರ್ಷ ವಯಸ್ಸಿನ ಬ್ರಾಹ್ಮಣನು ನೂರು ವರ್ಷ ವಯಸ್ಸಿನ ಕ್ಷತ್ರಿಯನಿಗೆ ಸಮಾನನು. ಇವರಿಬ್ಬರೂ ತಂದೆ ಮಕ್ಕಳಂತೆ ವ್ಯವಹರಿಸಬೇಕು. ಸಣ್ಣವನಾದರೂ ಬ್ರಾಹ್ಮಣನೇ ಇಲ್ಲಿ ತಂದೆ. ಕ್ಷತ್ರಿಯನೇ ಮಗನು.)

  • ಮನುಸ್ಮೃತಿ 2 -135

ಆರ್ಯಾವರ್ತದಲ್ಲಿ ಬ್ರಾಹ್ಮಣರ ಪರೋಕ್ಷ ಆಧಿಪತ್ಯ ಸ್ಥಾಪಿಸುವುದರ ಮೂಲಕ ರಾಜ ಸದಾಕಾಲ ಬ್ರಾಹ್ಮಣರ ಅಧೀನದಲ್ಲಿರುವಂತೆ ಮಾಡುವ ಷಡ್ಯಂತ್ರವನ್ನು ಮನು ರೂಪಿಸಿದ. ಅಷ್ಟೇ ಅಲ್ಲದೆ, ಸವರ್ಣೀಯರೂ ಸೇರಿದಂತೆ ಇಡೀ ಸಮಾಜ ಒಂದಿಲ್ಲೊಂದು ರೀತಿಯಲ್ಲಿ ಬ್ರಾಹ್ಮಣರ ಗುಲಾಮಗಿರಿಯನ್ನು ಒಪ್ಪಿಕೊಳ್ಳುವಂತೆ ಮಾಡುವುದೇ ಮನು ಮಹರ್ಷಿಯ ಉದ್ದೇಶವಾಗಿತ್ತು. ಕ್ಷತ್ರಿಯರನ್ನು ಮಣಿಸಿದಾಗ ಮಾತ್ರ ಇದು ಸಾಧ್ಯ ಎಂಬುದು ಆತನಿಗೆ ಮನವರಿಕೆಯಾಗಿತ್ತು. ಈ ಕಾರಣದಿಂದಲೇ ಹತ್ತು ವರ್ಷದ ಬ್ರಾಹ್ಮಣ ಬಾಲಕ, ನೂರು ವರ್ಷದ ಕ್ಷತ್ರಿಯನಿಗೆ ಸಮ ಎಂದು ಹೇಳುತ್ತಾನೆ. ಅಷ್ಟೇ ಅಲ್ಲ ಆ ನೂರು ವರ್ಷದ ಕ್ಷತ್ರಿಯ ವಯೋವೃದ್ಧ ಹತ್ತು ವರ್ಷದ ಬ್ರಾಹ್ಮಣ ಬಾಲಕನನ್ನು ತಂದೆಯ ಸ್ವರೂಪದಲ್ಲಿ ಕಾಣಬೇಕೆಂದು ಬಯಸುತ್ತಾನೆ. ಅವರಿಬ್ಬರದು ತಂದೆ ಮಕ್ಕಳ ಸಂಬಂಧವಾದ್ದರಿಂದ ಮಕ್ಕಳಾದ ಕ್ಷತ್ರಿಯರು ತಂದೆಯ ಸ್ವರೂಪದಲ್ಲಿರುವ ಬ್ರಾಹ್ಮಣರು ಹೇಳಿದಂತೆ ಕೇಳಿಕೊಂಡು ನಡೆಯಬೇಕೆಂದು ಸೂಚಿಸುತ್ತಾನೆ.

ನ ಶೂದ್ರಾಯ ಮತಿಂ ದದ್ಯಾನ್ನೋಚ್ಛಿಷ್ಟಂ ನ ಹವಿಷ್ಕೃತಂ|
ನ ಚಾಸ್ಯೋಪದಿಶೇದ್ಧರ್ಮಂ ನಚಾಸ್ಯ ವ್ರತಮಾದಿಶೇತ್|
(ಶೂದ್ರನಿಗೆ ಬುದ್ಧಿ ಹೇಳಬಾರದು [ಓದು ಕಲಿಸಬಾರದು], ಯಜ್ಞದ ಹವಿಸ್ಸಿನ ಶೇಷವನ್ನು ಹಾಗೂ ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿಕೊಡಬಾರದು.)

  • ಮನುಸ್ಮೃತಿ 4 – 80
    ಶೂದ್ರನಿಗೆ ಯಾವುದೇ ರೀತಿಯ ಶಿಕ್ಷಣ ಕೊಡಬಾರದು. ಯಜ್ಞದ ಬಲಿಯ ಭಕ್ಷ್ಯದ ಎಂಜಲನ್ನೂ ಕೊಡಬಾರದು, ಧರ್ಮ ಸಂಸ್ಕಾರಗಳ ವಿಚಾರವಾಗಿ ತಿಳಿವಳಿಕೆ ಕೊಡಬಾರದು. ಶಾಸ್ತ್ರೋಕ್ತ ಪೂಜೆ, ಶೀಲ, ಆಚರಣೆ, ಯಜ್ಞ, ಯಾಗ ಮುಂತಾದ ವ್ರತ ನಿಯಮಗಳ ಕುರಿತು ಹೇಳಿಕೊಡಬಾರದು ಎಂದು ಮನು ಕಟ್ಟಪ್ಪಣೆ ಮಾಡುತ್ತಾನೆ. ಬಹುಜನರಾದ ಶೂದ್ರರು ವಿದ್ಯೆ ಮತ್ತು ಧರ್ಮಾಚರಣೆ ಕಲಿತರೆ ಸಮಾಜದಲ್ಲಿ ಅವರದೇ ಮೇಲುಗೈ ಆಗುವುದು. ಆಗ ವರ್ಣಾಶ್ರಮ ಧರ್ಮದ ಅವನತಿಯಾಗಿ ವೈದಿಕ ವ್ಯವಸ್ಥೆ ಹಾಳಾಗುವುದು ಎಂಬ ಭಯದೊಂದಿಗೆ ಶೂದ್ರರ ವಿರುದ್ಧ ಹೀಗೆ ಮನುಸ್ಮೃತಿಯ ಉದ್ದಕ್ಕೂ ದ್ವೇಷ ಸಾಧಿಸುತ್ತಲೇ ಇರುತ್ತಾನೆ.

ಶ್ರುತಿಸ್ಮೃತ್ಯುದಿತಂ ಸಮ್ಯಙ್ ನಿಬದ್ಧಂ ಸ್ವೇಷು ಕರ್ಮಸು|
ಧರ್ಮಮೂಲಂ ನಿಷೇವೇತ ಸದಾಚಾರಮತಂದ್ರಿತಃ||
(ಶ್ರುತಿ ಮತ್ತು ಸ್ಮೃತಿಗಳಲ್ಲಿ ಹೇಳಿದ ತಮ್ಮ ತಮ್ಮ ಜಾತಿಯ ಸ್ವ ಕರ್ಮಗಳ ಆಚರಣೆಯಲ್ಲಿ ತೊಡಗಿ, ಔದಾಸೀನ್ಯವಿಲ್ಲದೇ ಧರ್ಮವನ್ನು ಆಚರಿಸುತ್ತಲಿರಬೇಕು.)

  • ಮನುಸ್ಮೃತಿ 4 -155
    ಧರ್ಮಕ್ಕೆ ಮಾರ್ಗದರ್ಶನ ನೀಡುವ ವೇದಗಳು ಮತ್ತು ಧರ್ಮದ ಆಚರಣೆಗಳನ್ನು ತಿಳಿಸಿಕೊಡುವ ಮನುಸ್ಮೃತಿಯಂಥ ಧರ್ಮ, ಕಾಮ, ಅರ್ಥ ಮತ್ತು ಮೋಕ್ಷಕ್ಕೆ ಸಂಬಂಧಿಸಿದಂತೆ ವಿವಿಧ ವರ್ಣಗಳವರಿಗೆ ವಿವಿಧ ರೀತಿಯ ಆಚರಣೆಗಳನ್ನು ಹೇಳಿಕೊಡಲಾಗಿದೆ. ಎಲ್ಲ ಜಾತಿ ವರ್ಣಗಳವರು ತಮ ತಮಗೆ ಪ್ರತ್ಯೇಕವಾಗಿ ಹೇಳಿಕೊಟ್ಟ ಪ್ರಕಾರ ತಾವು ಮಾಡಬೇಕಾದ ಸೇವೆ ಮತ್ತು ಉತ್ಪಾದನಾ ಕಾರ್ಯಗಳನ್ನು ಮಾಡುವ ಮೂಲಕ ಸ್ವಸಂತೋಷದಿಂದ ಧರ್ಮ ಮಾರ್ಗದಲ್ಲಿ ನಡೆಯಬೇಕು. ಇದರರ್ಥ ಸವರ್ಣೀಯರು ಸುಖದ ಜೀವನ ಸಾಗಿಸಬೇಕು. ಶೂದ್ರರು ಕಷ್ಟದ ಜೀವನ ಸಾಗಿಸಬೇಕು.

ದುಷ್ಯೇಯುಃ ಸರ್ವವರ್ಣಾಶ್ಚ ಭಿದ್ಯೇರನ್ ಸರ್ವಸೇತವಃ|
ಸರ್ವಲೋಕಪ್ರಕೋಷಶ್ಯ ಭವೇದ್ದಂಡಸ್ಯ ವಿಭ್ರಮಾತ್||
(ರಾಜದಂಡವಿಲ್ಲದಿದ್ದರೆ ವರ್ಣಸಂಕರವಾಗಿ ಸರ್ವವರ್ಣಗಳೂ ದೂಷಿತವಾಗಬಹುದು. ಎಲ್ಲ ಶಾಸ್ತ್ರ ನಿಯಮಗಳು ಹಾಳಾಗಿಹೋಗಬಹುದು. ರಾಜದಂಡದ ದುರುಪಯೋಗದಿಂದ ಸಮಸ್ತ ಜನತೆಯಲ್ಲಿ ಹಾಹಾಕಾರ ಉಂಟಾಗಬಹುದು.)

  • ಮನುಸ್ಮೃತಿ 7 – 24
    ರಾಜದಂಡವೆಂಬುದು ವರ್ಣಾಶ್ರಮ ವ್ಯವಸ್ಥೆಯನ್ನು ರಾಜ ಎಂಥ ಪ್ರಸಂಗದಲ್ಲೂ ಕಾಪಾಡಬೇಕು ಎಂಬುದರ ಎಚ್ಚರಿಕೆಯ ಸಂಕೇತವಾಗಿದೆ. ರಾಜನು ಈ ರಾಜದಂಡದ ಜೊತೆ ಇರುವುದೆಂದರೆ, ವರ್ಣ ವ್ಯವಸ್ಥೆಯ ಬಗ್ಗೆ ಸದಾ ಜಾಗೃತಾವಸ್ಥೆಯಲ್ಲಿದ್ದು ರಾಜಧರ್ಮವನ್ನು ಪಾಲಿಸುವುದು. ಒಂದುವೇಳೆ ಈ ರಾಜದಂಡ ಎಚ್ಚರಿಕೆಯ ಸಂಕೇತವಾಗಿ ಇರದಿದ್ದರೆ ವರ್ಣಸಂಕರವಾಗಿ ಇಡೀ ವೈದಿಕ ವ್ಯವಸ್ಥೆ ಹಾಳಾಗುವುದು. ಆಗ ವರ್ಣಾಶ್ರಮ ಧರ್ಮದ ವಿಧಿ ನಿಯಮಗಳು ಹಾಳಾಗುವವು. ಆ ಸ್ಥಿತಿ ಬರಲು ರಾಜದಂಡದ ಬಗೆಗಿನ ಉದಾಸೀನವೇ ಕಾರಣವಾಗುವುದು. ಹೀಗೆ ರಾಜದಂಡದ ದುರುಪಯೋಗ ಆಗುವುದರಿಂದ ಇಡೀ ಸಮಾಜ ಅಸ್ತವ್ಯಸ್ತವಾಗಿ ಹಾಹಾಕಾರ ಉಃಟಾಗುವುದು ಎಂದು ಮನು ಭಯಂಕರವಾಗಿ ಅಂಜಿಸುತ್ತ ನಿರಂತರವಾಗಿ ಯಥಾಸ್ಥಿತಿಯನ್ನು ರಕ್ಷಿಸಬಯಸುತ್ತಾನೆ.

ಶೂದ್ರಂ ತು ಕಾರಯೇದ್ದಾಸ್ಯಂ ಕ್ರೀತಮಕ್ರೀತಮೇವ ವಾ|
ದಾಸ್ಯಾಯೈವ ಹಿ ಸೃಷ್ಟೋsಸೌ ಬ್ರಾಹ್ಮಣಸ್ಯ ಸ್ವಯಂಭುವಾ||
(ಶೂದ್ರನು ಕೂಲಿಗೆ ಗೊತ್ತು ಮಾಡಿಕೊಂಡನಾಗಿರಲಿ ಅಥವಾ ಇಲ್ಲದಿರಲಿ, ಅಂಥ ಶೂದ್ರನಿಂದ ಬ್ರಾಹ್ಮಣನು ತನ್ನ ಸೇವೆ ಮಾಡಿಸಿಕೊಳ್ಳಬೇಕು. ಏಕೆಂದರೆ ಶೂದ್ರನು ಬ್ರಾಹ್ಮಣನ ಸೇವೆಗಾಗಿಯೆ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿದ್ದಾನೆ.)

  • ಮನುಸ್ಮೃತಿ 8 – 413
    ಶೂದ್ರರು ಸದಾ ಆರ್ಥಿಕವಾಗಿ ದುರ್ಬಲರಾಗಿರಬೇಕು, ವೈದಿಕ ಧರ್ಮಹೀನರಾಗಿರಬೇಕು ಮತ್ತು ಸದಾ ಸಂಸ್ಕಾರರಹಿತವಾಗಿ ಬದುಕಬೇಕು ಎಂಬುದರ ಬಗ್ಗೆಯೆ ಮನು ಬಹಳ ತಲೆ ಕೆಡಿಸಿಕೊಳ್ಳುತ್ತಾನೆ. ಬ್ರಾಹ್ಮಣರ ಸೇವೆ ಮಾಡುವುದಕ್ಕೇ ಬ್ರಹ್ಮನು ಶೂದ್ರರನ್ನು ಹುಟ್ಟಿಸಿದ್ದಾನೆ ಎಂಬುದು ಆತನ ವಾದ. ಆದ್ದರಿಂದ ಬ್ರಾಹ್ಮಣರು ಶೂದ್ರರಿಗೆ ಕೂಲಿ ಕೊಡಲಿ ಬಿಡಲಿ, ಅವರಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಒತ್ತಿ ಹೇಳುತ್ತಾನೆ.
    ವಿಸ್ರಬ್ಧಂ ಬ್ರಾಹ್ಮಣಃ ಶೂದ್ರಾದ್ದ್ರವ್ಯೋಪಾದಾನಮಾಚರೇತ್|
    ನಹಿ ತಸ್ಯಾಸ್ತಿ ಕಿಂಚಿತ್ಸ್ವಂ ಭರ್ತೃಹಾರ್ಯಧನೋ ಹಿ ಸಃ||
    (ಬ್ರಾಹ್ಮಣನು ತನ್ನ ಸೇವಕನಾದ ಶೂದ್ರನ ಹಣವನ್ನು ಹಿಂದುಮುಂದು ನೋಡದೆ ಪಡೆಯಬಹುದು. ಏಕೆಂದರೆ ಸೇವಕನಿಗೆ ಸ್ವಂತದ್ದೆಂಬುದು ಏನೂ ಇರುವುದೇ ಇಲ್ಲ. ತನ್ನದೆಲ್ಲವನ್ನು ಆತ ಒಡೆಯನಿಗೆ ಒಪ್ಪಿಸತಕ್ಕದ್ದು.)
  • ಮನುಸ್ಮೃತಿ 8 – 417
    ಸವರ್ಣೀಯರಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗೆ ಬೇರೆ ಪ್ರಕಾರದ ಜನಿವಾರಗಳಿವೆ. ಐತಿಹಾಸಿಕವಾಗಿ ಬ್ರಾಹ್ಮಣನು ಬರೆಯುತ್ತಾನೆ ಓದುತ್ತಾನೆ. ಸಾಮಾಜಿಕ ಮತ್ತು ಬ್ರಾಹ್ಮಣ ಧಾರ್ಮಿಕ ಯಥಾಸ್ಥಿತಿಯನ್ನು ಕಾಪಾಡಲು ಹೆಣಗುತ್ತಾನೆ. ಆದರೆ ಶಾಸ್ತ್ರೋಕ್ತವಾಗಿ ಉತ್ಪಾದನೆಯಲ್ಲಿ ತೊಡಗುವುದಿಲ್ಲ. ಕ್ಷತ್ರಿಯ ಯುದ್ಧದಲ್ಲಿ ಕೊಲ್ಲುತ್ತಾನೆ ಇಲ್ಲವೆ ವೀರಮರಣವನ್ನು ಹೊಂದುತ್ತಾನೆ. ಆದರೆ ಉತ್ಪಾದನೆಯಲ್ಲಿ ತೊಡಗುವುದಿಲ್ಲ. ವೈಶ್ಯ ವಸ್ತುಗಳನ್ನು ಕೊಳ್ಳುತ್ತಾನೆ ಮತ್ತು ಮಾರುತ್ತಾನೆ. ಶೂದ್ರರನ್ನು ಕೃಷಿಯಲ್ಲಿ ತೊಡಗಿಸುತ್ತಾನೆ. ಆದರೆ ಉತ್ಪಾದನೆ ಮಾಡುವುದಿಲ್ಲ. ಇವರೆಲ್ಲ ಜನಿವಾರದ ಸವರ್ಣೀಯರು. ಆದರೆ ಸೇವೆ ಮಾಡುವ ಅಂಬಿಗರು, ಹಡಪದರು, ಕಸಗುಡಿಸುವವರು, ಮಡಿವಾಳರು, ಉತ್ಪಾದನೆ ಮಾಡುವ ರೈತರು, ಬಡಗಿಗಳು, ಕಮ್ಮಾರರು, ಕುಂಬಾರರು ಮುಂತಾದವರಿಗೆ ಜನಿವಾರ ಇಲ್ಲ. ಜನಿವಾರ ಇಲ್ಲದವರೆಲ್ಲ ಮೂಲ ನಿವಾಸಿಗಳು. ಅವರೆಲ್ಲರೂ ಸವರ್ಣೀಯರ ದೃಷ್ಟಿಯಲ್ಲಿ ಶೂದ್ರರೆ. ಈ ಎಲ್ಲ ಶೂದ್ರರ ಸಂಪತ್ತಿನ ಮೇಲೆ ಬ್ರಾಹ್ಮಣರ ಅಧಿಕಾರವಿದೆ ಎಂದು ಮನು ಹೇಳುತ್ತಾನೆ. ಶೂದ್ರರಿಗೆ ತಮ್ಮ ಸಂಪತ್ತಿನ ಮೇಲೆ ಯಾವುದೇ ಹಕ್ಕಿಲ್ಲ. ಆತ ತನ್ನದೆಲ್ಲವನ್ನು ಒಡೆಯರಿಗೆ ಒಪ್ಪಿಸಲೇಬೇಕು‌ ಎಂಬುದು ಮನುವಾದವಾಗಿದೆ.

ಲೋಕಾನನ್ಯಾತ್ ಸೃಜೇಯುರ್ಯೇ ಲೋಕಪಾಲಾಶ್ಚ ಕೋಪಿತಾಃ|
ದೇವಾನ್ ಕುರ್ಯುರದೇವಾಂಶ್ಚ ಕಃ ಕ್ಷಿಣ್ವನ್ ತಾನ್ಸಮೃಧ್ನುಯಾತ್||
(ಸಿಟ್ಟಿಗೆದ್ದರೆ ಬ್ರಾಹ್ಮಣರು ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನೇ ನೇಮಿಸಬಲ್ಲರು. ದೇವತೆಗಳ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು ರೇಗಿಸಿ ಯಾವ ರಾಜನು ತಾನೆ ಸಮೃದ್ಧಿಯನ್ನು ಹೊಂದಬಲ್ಲ?)

  • ಮನುಸ್ಮೃತಿ 9 – 315
    ಮನು ಶೂದ್ರರಿಗಷ್ಟೇ ಅಲ್ಲ, ವೈದಿಕ ಶಕ್ತಿಯ ಮೂಲಕ ರಾಜರಿಗೂ ಅಂಜಿಸುತ್ತಾನೆ. ಬ್ರಾಹ್ಮಣರ ಸಿಟ್ಟು ನೆತ್ತಿಗೇರಿದರೆ ಬೇರೊಂದು ಲೋಕದ ನಿರ್ಮಾಣ ಮಾಡಬಲ್ಲರು, ಒಬ್ಬ ರಾಜನನ್ನು ಉರುಳಿಸಿ ಇನ್ನೊಬ್ಬ ರಾಜನನ್ನು ತಂದು ಅದೇ ಸಿಂಹಾಸನದ ಮೇಲೆ ಕೂಡಿಸಬಲ್ಲರು. ಅಷ್ಟೇ ಅಲ್ಲ ದೇವತೆಗಳ ಶಕ್ತಿ ಹರಣ ಮಾಡಬಲ್ಲರು. ಬ್ರಾಹ್ಮಣರನ್ನು ಸಿಟ್ಟಿಗೆಬ್ಬಿಸುವ ರಾಜ ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ ಎಂಬ ಧಿಮಾಕಿನ ಮಾತುಗಳನ್ನಾಡುವ ಮೂಲಕ ಅಂಜಿಸುತ್ತಾನೆ. ಭಾರತದ ಇತಿಹಾಸದಲ್ಲಿ ಬ್ರಾಹಣಶಾಹಿಯ ಸೊಕ್ಕು ಮುರಿದ ಏಕೈಕ ರಾಜನೆಂದರೆ ಕೊಲ್ಹಾಪುರದ ಶಾಹು ಮಹಾರಾಜ!
    ಏವಂ ಯದ್ಯಪ್ಯನಿಷ್ಟೇಷು ವರ್ತಂತೇ ಸರ್ವ ಕರ್ಮಸು||
    ಸರ್ವತಾ ಬ್ರಾಹ್ಮಣಾಃ ಪೂಜ್ಯಾಃ ಪರಮಂ ದೈವತಂ ಹಿ ತತ್||
    (ಹಾಗೆಯೆ ಬ್ರಾಹ್ಮಣರು ಕೂಡ ಅನಿಷ್ಟವಾದ ದುಷ್ಕರ್ಮದಲ್ಲಿ ತೊಡಗಿದರೂ ಅಪವಿತ್ರರಾಗುವುದಿಲ್ಲ. ಬದಲಾಗಿ ದೇವಸ್ವರೂಪರಾಗಿರುವುದರಿಂದ ಸರ್ವಥಾ ಪೂಜ್ಯರೂ ಪವಿತ್ರರೂ ಆಗಿರುತ್ತಾರೆ.)
  • ಮನುಸ್ಮೃತಿ 9 – 319
    ಬ್ರಾಹ್ಮಣರು ನೀಚರು ಮತ್ತು ದುಷ್ಟರಾಗಿ ಹೀನ ಮತ್ತು ಅನಿಷ್ಟ ಕೃತ್ಯಗಳಲ್ಲಿ ತೊಡಗಿದರೂ ಪವಿತ್ರರಾಗೇ ಉಳಿಯುತ್ತಾರೆ ಎಂಬ ದಾರ್ಷ್ಟ್ಯದ ಮಾತುಗಳನ್ನು ಆಡುತ್ತಾನೆ. ಅವರು ಏನೇ ಆಗಿದ್ದರೂ ದೇವಾಂಶಸಂಭೂತರು, ಪೂಜ್ಯರು ಮತ್ತು ಪವಿತ್ರಾತ್ಮರು ಎಂದು ಪ್ರತಿಪಾದಿಸುತ್ತಾನೆ.

ನಾ ಬ್ರಹ್ಮಕ್ಷತ್ರಮೃಘ್ನೋತಿ ನಾಕ್ಷತ್ರಂ ಬ್ರಹ್ಮ ವರ್ಧತೇ|
ಬ್ರಹ್ಮ ಕ್ಷತ್ರಂ ಚ ಸಂಪೃಕ್ತಮಿಹ ಚಾಮುತ್ರ ವರ್ಧತೇ||
(ಬ್ರಾಹ್ಮಣನಿಲ್ಲದೆ ಕ್ಷತ್ರಿಯನ ಏಳಿಗೆಯಾಗದು. ಕ್ಷತ್ರಿಯನಿಲ್ಲದೆ ಬ್ರಾಹ್ಮಣನ ಏಳಿಗೆಯಾಗದು. ಬ್ರಾಹ್ಮ ಮತ್ತು ಕ್ಷಾತ್ರ ಶಕ್ತಿಗಳ ಪರಸ್ಪರ ಸಹಕಾರದಿಂದಲೇ ಇಹಪರಗಳಲ್ಲಿ ಕ್ಷೇಮ ಉಂಟಾಗುವುದು‌.)

  • ಮನುಸ್ಮೃತಿ 9 – 322
    ಮನು ಈ ಪ್ರಕಾರ ಬ್ರಾಹ್ಮಣರ ಶಾಸ್ತ್ರಗಳನ್ನು ಮತ್ತು ಕ್ಷತ್ರಿಯರ ಶಸ್ತ್ರಗಳನ್ನು ಒಗ್ಗೂಡಿಸುತ್ತಾನೆ. ‘ಶಸ್ತ್ರಗಳು ಶಾಸ್ತ್ರಗಳ ಮಾತನ್ನು ಕೇಳುವಂತೆ ಮಾಡುತ್ತಾನೆ. ರಾಮನ ಶಸ್ತ್ರವು ಶಾಸ್ತ್ರಗಳ ಮಾತು ಕೇಳಿದ್ದರಿಂದಲೇ ಶೂದ್ರ ತಪಸ್ವಿ ಶಂಬೂಕನ ವಧೆಯಾಯಿತು. ಬಿಜ್ಜಳನ ಶಸ್ತ್ರಗಳು ಶಾಸ್ತ್ರಗಳ ಮಾತು ಕೇಳಿದ್ದರಿಂದಲೇ ಶರಣರ ಕೊಲೆಗಳಾದವು ಮತ್ತು ಅವರ ವಚನಕಟ್ಟುಗಳನ್ನು ಧ್ವಂಸ ಮಾಡಲಾಯಿತು ಎಂಬುದನ್ನು ಮರೆಯಬಾರದು‌.

ಬ್ರಾಹ್ಮಣನು ಬಹುಜನ ಶೂದ್ರರನ್ನು ಮನುಸ್ಮೃತಿಯ ಮೂಲಕ ಮಾನಸಿಕ ಬಂಧನದಲ್ಲಿ ಇಟ್ಟಿದ್ದರಿಂದಲೇ ಸವರ್ಣೀಯರ ರಾಜರಾಗಿ ಕ್ಷತ್ರಿಯರು ಮೆರೆಯಲು ಸಾಧ್ಯವಾಯಿತು. ಈ ರಹಸ್ಯ ಕ್ಷತ್ರಿಯರಿಗೆ ಗೊತ್ತಿತ್ತು. ಬ್ರಾಹ್ಮಣರ ಶಾಸ್ತ್ರಗಳಿಲ್ಲದೆ ತಮ್ಮ ಏಳಿಗೆ ಸಾಧ್ಯವಿಲ್ಲ ಎಂಬುದು ಕ್ಷತ್ರಿಯರಿಗೆ ಮನವರಿಕೆಯಾಗಿತ್ತು. ಅದೇರೀತಿ ಕ್ಷತ್ರಿಯರ ಶಸ್ತ್ರಗಳಿಲ್ಲದೆ ತಮಗೆ ಉಳಿಗಾಲವಿಲ್ಲ ಎಂಬುದು ಬ್ರಾಹ್ಮಣರಿಗೆ ಮನವರಿಕೆ ಆಗಿತ್ತು. ಹೀಗೆ ಬಹುಸಂಖ್ಯಾತ ಶೂದ್ರರ ವಿರುದ್ಧ ಶಾಸ್ತ್ರ ಮತ್ತು ಶಸ್ತ್ರಗಳ ಅಪವಿತ್ರ ಮೈತ್ರಿ ಉಂಟಾಗಿ ಒಂದಿಲ್ಲೊಂದು ರೀತಿಯಲ್ಲಿ ಇಂದಿಗೂ ಮುಂದುವರಿದಿದೆ.

ವೈದಿಕ ಶಕ್ತಿ ಮತ್ತು ರಾಜ್ಯಶಕ್ತಿ ಸಂಬಂಧಗಳನ್ನು ಅಲ್ಲಗಳೆಯುವ ಸಾಮರ್ಥ್ಯ ಬಾಬಾಸಾಹೇಬರ ಸಂವಿಧಾನಕ್ಕಿದೆ. ಆದರೆ ಶೂದ್ರರು ಎಚ್ಚರಾಗುವವರೆಗೆ ಸಂವಿಧಾನ ಶಕ್ತಿಯ ಅರಿವಾಗುವುದಿಲ್ಲ. ಸಂವಿಧಾನ ಸಂಪೂರ್ಣ ಅವೈದಿಕ ಎಂಬ ಪ್ರಜ್ಞೆ ಮೂಡುವುದಿಲ್ಲ.

ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಸ್ತ್ರಯೋ ವರ್ಣಾ ದ್ವಿಜಾತಯಃ|
ಚತುರ್ಥ ಏಕಜಾತಿಸ್ತು ಶೂದ್ರೋ ನಾಸ್ತಿ ತು ಪಂಚಮಃ||
(ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ಜಾತಿಯವರಿಗೆ ದ್ವಿಜಾತಿಗಳು ಎನ್ನುತ್ತಾರೆ. [ಏಕೆಂದರೆ ಇವರು ಜನ್ಮದಿಂದ ಹಾಗೂ ಸಂಸ್ಕಾರದಿಂದ ಎರಡು ತೆರನಾದ ಜಾತಿ ಪಡೆಯುತ್ತಾರೆ.] ನಾಲ್ಕನೆಯವರಾದ ಶೂದ್ರರು ಏಕಜಾತಿಗಳು. [ಇವರಿಗೆ ಉಪನಯನಾದಿ ಸಂಸ್ಕಾರಗಳಿಲ್ಲ.) ಐದನೇ ಜಾತಿಯು ಇಲ್ಲವೇ ಇಲ್ಲ.)

  • ಮನುಸ್ಮೃತಿ 10 – 4
    ಈ ಶ್ಲೋಕದಲ್ಲಿ ಮನು ಮುಂದುವರಿದು ಶೂದ್ರರನ್ನು ಕಡೆಗಣಿಸುವ ಉದ್ದೇಶದಿಂದ ಮೂರೂ ಪ್ರಕಾರದ ಸವರ್ಣೀಯರ ಮಧ್ಯೆ ಘನ ಸಂಬಂಧ ಬೆಳೆಸುವಲ್ಲಿ ತಲ್ಲೀನನಾಗುತ್ತಾನೆ. ಸವರ್ಣೀಯರೆಲ್ಲ ದ್ವಿಜರು ಎಂದು ಸಾರುತ್ತಾನೆ‌. ಇವರೆಲ್ಲ ಬೇರೆ ಬೇರೆ ಉಚ್ಚ ವರ್ಣಗಳಲ್ಲಿ ಜನಿಸಿದರೂ ತಮ್ಮ ವರ್ಣಗಳಿಗಾಗಿ ಬೇರೆ ಬೇರೆ ತೆರನಾದ ಸಂಸ್ಕಾರಗಳನ್ನು ಪಡೆದರೂ ಆಯಾ ಸಂಸ್ಕಾರಗಳಲ್ಲಿ “ಮರುಹುಟ್ಟು” ಪಡೆಯುವುದರಿಂದ ದ್ವಿಜರು ಎನಿಸಿಕೊಳ್ಳುತ್ತಾರೆ ಎಂದು ತಿಳಿಸುತ್ತಾನೆ. ನಾಲ್ಕನೆಯವರಾದ ಶೂದ್ರರಿಗೆ ಜನಿವಾರ ಮುಂತಾದ ಸಂಸ್ಕಾರಗಳಿಲ್ಲದ ಕಾರಣ “ದ್ವಿಜರು” ಎನಿಸಿಕೊಳ್ಳುವುದಿಲ್ಲ. ‘ಪಂಚಮ ಜಾತಿ ಇಲ್ಲವೇ ಇಲ್ಲ’ ಎಂದು ಮನು ಬಹಳ ಎಚ್ಚರಿಕೆಯಿಂದ ಹೇಳುತ್ತಾನೆ. ಅಸ್ಪೃಶ್ಯರನ್ನು “ಪಂಚಮರು” ಎಂದು ಕರೆದು ಶೂದ್ರ ವರ್ಣದಿಂದ ಬೇರ್ಪಡಿಸಲು ಮನು ಸಿದ್ಧನಿಲ್ಲ. ಮನುಸ್ಮೃತಿ ಹಾಕಿದ ಗೆರೆಗಳನ್ನು ಶೂದ್ರರು ದಾಟಿದರೆ, ಅವರಿಗೂ ಅಸ್ಪೃಶ್ಯರಿಗೆ ಆಗುವ ಗತಿಯೇ ಆಗುವುದು ಎಂಬ ಸೂಚನೆ ಅವನ ದೃಢನಿರ್ಧಾರದಲ್ಲಿದೆ.

ಧರ್ಮಸ್ಯ ಬ್ರಾಹ್ಮಣೋ ಮೂಲಮಗ್ರಂ ರಾಜಸ್ಯ ಉಚ್ಯತೇ|
ತಸ್ಮಾತ್ಸಮಾಗಮೇ ತೇಷಾಮೇನೋ ವಿಖ್ಯಾಪ್ಯ ಶುದ್ಧ್ಯತಿ||
(ಬ್ರಾಹ್ಮಣನು ಧರ್ಮದ ಮೂಲ ರಾಜನು ಧರ್ಮದ ತುದಿ. ಆದ್ದರಿಂದ ಅವರ ಸಮ್ಮುಖದಲ್ಲಿ ಪಾಪವನ್ನು ಒಪ್ಪಿಕೊಂಡು ಅವಭೃತ ಸ್ನಾನ ಮಾಡಿದರೆ ಪಾಪ ಶುದ್ಧಿ ಉಂಟಾಗುವುದು.)

  • ಮನುಸ್ಮೃತಿ 11 – 83
    ಮನು ಒಳವಲಯದಿಂದ ಸವರ್ಣೀಯ ವೈಶ್ಯರನ್ನೂ ದೂರವಿಟ್ಟು ಬ್ರಾಹ್ಮಣರ ಮತ್ತು ಕ್ಷತ್ರಿಯರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ತಲ್ಲೀನನಾಗುತ್ತಾನೆ. ಬ್ರಾಹ್ಮಣ ಧರ್ಮದ ತಳಹದಿಯಾದರೆ ರಾಜನೇ ಅದರ ಶಿಖರ ಎಂದು ಮನು, ಶಾಸ್ತ್ರ ಮತ್ತು ಶಸ್ತ್ರಗಳ ಸಂಬಂಧ ಕಲ್ಪಿಸುತ್ತಾನೆ. ಆ ಮೂಲಕ ಕ್ಷತ್ರಿಯರಿಗೂ ಬ್ರಾಹ್ಮಣರು ಅಡಿಪಾಯ ಎಂದು ಸೂಚಿಸುತ್ತಾನೆ. ಸಕಲ ವರ್ಣದವರು ಬ್ರಾಹ್ಮಣರು ಮತ್ತು ಕ್ಷತ್ರಿಯರ ಮುಂದೆ ಪಾಪವನ್ನು ಒಪ್ಪಿಕೊಂಡು ಅವಭೃತ ಸ್ನಾನ [ಶುಭಕಾರ್ಯಗಳ ನಂತರ ಮಾಡುವ ಸ್ನಾನ] ಮಾಡಿದರೆ ಶುದ್ಧರಾಗುತ್ತಾರೆ ಎಂದು ಕಥೆ ಕಟ್ಟುತ್ತಾನೆ.

ಚಂಡಾಲಶ್ವಪಚಾನಾಂ ತು ಬಹಿರ್ಗ್ರಾಮಾತ್ಪ್ರತಿಶ್ರಯಃ|
ಅಪಪಾತ್ರಾಶ್ಚ ಕರ್ತವ್ಯಾ ಧನಮೇಷಾಂ ಶ್ವಗರ್ದಭಮ್||
(ಚಂಡಾಲರು ಶ್ವಪಚರು ಊರ ಹೊರಗೆ ವಾಸಿಸಬೇಕು. ಒಳ್ಳೆಯ ಪಾತ್ರೆಯಲ್ಲಿ ಅಡುಗೆ ಮಾಡಬಾರದು. ಉಣಬಾರದು ಕೂಡ. ಇವರು ನಾಯಿ ಕತ್ತೆ ಇತ್ಯಾದಿಗಳನ್ನೇ ಸಾಕಬೇಕು.)

  • ಮನುಸ್ಮೃತಿ 10 – 51
    ಅಸ್ಪೃಶ್ಯರಾದ ಚಂಡಾಲರು ಶ್ವಪಚರು ಗ್ರಾಮಗಳ ಹೊರಗೆ ತಮ್ಮದೇ ಆದ ಕೇರಿಗಳಲ್ಲಿರಬೇಕು. ಒಳ್ಳೆಯ ಪಾತ್ರೆಗಳಲ್ಲಿ ಅಡುಗೆ ಮಾಡಬಾರದು. ಒಳ್ಳೆಯ ಆಹಾರವನ್ನೂ ಸೇವಿಸಬಾರದು. ಇವರು ಹಸು, ಕುದುರೆಗಳನ್ನು ಸಾಕುವಂತಿಲ್ಲ. ನಾಯಿ, ಕತ್ತೆಯಂಥ ಪ್ರಾಣಿಗಳನ್ನು ಮಾತ್ರ ಸಾಕಬೇಕು. ಇಷ್ಟಾದರೂ ಇವರನ್ನು ಮನು “ಪಂಚಮ”ರೆಂದು ಕರೆಯಲು ಸಿದ್ಧನಿಲ್ಲ. ಶೂದ್ರರ ಮೇಲೆ ಅಂಕುಶದಂತೆ ಬಳಸುವುದಕ್ಕಾಗಿ ಇವರನ್ನು ಶೂದ್ರರ ಪಟ್ಟಿಯಲ್ಲೇ ಇಟ್ಟಿದ್ದಾನೆ.

ವಾಸಾಂಸಿ ಮೃತ ಚೇಲಾನಿ ಭಿನ್ನ ಭಾಂಡೇಷು ಭೋಜನಮ್|
ಕಾರ್ಷ್ಣಾಯಸಮಲಂಕಾರಃ ಪರಿವ್ರಜ್ಯಾ ಚ ನಿತ್ಯಶಃ||
(ಒಡಕು ಮಣ್ಣಿನ ಪಾತ್ರೆಗಳಲ್ಲಿ ಉಣ್ಣಬೇಕು, ಹೆಣದ ಮೇಲಿನ ಬಟ್ಟೆಯನ್ನು ಉಡಬೇಕು. ಕಬ್ಬಿಣದ ಬಳೆ ಇತ್ಯಾದಿಗಳೇ ಇವರಿಗೆ ಆಭರಣಗಳು. ಇವರು ಸದಾ ಅಂಡಲೆಯುತ್ತಿರಬೇಕು.)

  • ಮನುಸ್ಮೃತಿ 10 – 52
    ಈ ಅಸ್ಪೃಶ್ಯರು ಉಣ್ಣುವ ಪಾತ್ರೆ ಕೂಡ ಒಡೆದಿರಬೇಕು. ತಂಗಳನ್ನವನ್ನೇ ಉಣಬೇಕು. ಅವರು ಹೊಸ ಬಟ್ಟೆಗಳನ್ನು ಧರಿಸಕೂಡದು. ಸವರ್ಣೀಯರು ಸತ್ತಾಗ, ಆ ಹೆಣದ ಬಟ್ಟೆಗಳನ್ನೇ ಧರಿಸಬೇಕು. ಇವರ ಆಭರಣಗಳು ಕಬ್ಬಿಣದವು ಮಾತ್ರ ಆಗಿರಬೇಕು. ಇವರು ಸದಾ ಸೇವೆ ಮಾಡುತ್ತ ಊರೂರು ಅಲೆಯುತ್ತಿರಬೇಕು ಎಂದು ಕಟ್ಟಪ್ಪಣೆ ಮಾಡುವ ಮೂಲಕ ಅವರ ವ್ಯಕ್ತಿತ್ವವನ್ನೇ ನಾಶ ಮಾಡಲು ಯತ್ನಿಸುತ್ತಾನೆ.
    ಯೋ ಲೋಭಾದದಮೋ ಜಾತ್ಯಾ ಜೀವೇದುತ್ಕೃಷ್ಟಕರ್ಮಭಿಃ|
    ತಂ ರಾಜಾ ನಿರ್ಧನಂ ಕೃತ್ವಾ ಕ್ಷಿಪ್ರಮೇವ ಪ್ರವಾಸಯೇತ್||
    (ಧನ ಸಂಪಾದನೆಯ ಆಶೆಯಿಂದ ಕೀಳುಜಾತಿಯ ಯಾವನು ಮೇಲ್ಜಾತಿಯವರ ಊದ್ಯೋಗ ಮಾಡುತ್ತ ಜೀವಿಸುತ್ತಾನೋ ಅವನ ಆಸ್ತಿಯನ್ನೆಲ್ಲ ರಾಜನು ಕಸಿದುಕೊಂಡು ಅವನನ್ನು ದೇಶದಿಂದ ಹೊರಗೆ ಅಟ್ಟಬೇಕು.)
  • ಮನುಸ್ಮೃತಿ 10 – 96
    ಕೀಳುಜಾತಿಯವರು ಸದಾ ಬಡತನದಲ್ಲೇ ಇರುವಂತೆ ನೋಡಿಕೊಳ್ಳುವುದು ಕೂಡ ರಾಜಧರ್ಮದ ಕರ್ತವ್ಯಗಳಲ್ಲಿ ಒಂದಾಗಿದೆ. ಶ್ರೀಮಂತನಾಗುವ ಉದ್ದೇಶದಿಂದ ಕೀಳುಜಾತಿಯನು ಮೇಲ್ಜಾತಿಯವರ ಉದ್ಯೋಗ ಮಾಡುತ್ತ ಶ್ರೀಮಂತನಾದರೆ, ರಾಜನಾದವನು ಅವನ ಆಸ್ತಿಯನ್ನೆಲ್ಲ ಕಸಿದುಕೊಂಡು ಗಡಿಪಾರು ಮಾಡಬೇಕೆಂದು ತಿಳಿಸುತ್ತಾನೆ.

ವರಂ ಸ್ವಧರ್ಮೋ ವಿಗುಣೋ ನ ಪಾರಕ್ಯಃ ಸ್ವನುಷ್ಠಿತಃ|
ಪರಧರ್ಮೇಣ ಜೀವನ್ ಹಿ ಸದ್ಯಃ ಪತತಿ ಜಾತಿತಃ||
(ಏನೇ ದೋಷವಿದ್ದರೂ ಸ್ವಧರ್ಮ ವೃತ್ತಿಯೇ ಶ್ರೇಷ್ಠವಾದುದು. ಬೇರೆಯವರ ಜಾತಿ ಧರ್ಮವನ್ನು – ವೃತ್ತಿಧರ್ಮವನ್ನು ಎಷ್ಟೇ ನಿರ್ದೋಷವಾಗಿ ಪಾಲಿಸಿದರೂ ಅದು ತಪ್ಪು. ಅನ್ಯ ಜಾತಿಯ ವೃತ್ತಿಧರ್ಮವನ್ನನುಸರಿಸಿದರೆ ಸ್ವಜಾತಿಯಿಂದ ಭ್ರಷ್ಟನಾಗುವನು.)

  • ಮನುಸ್ಮೃತಿ 10 – 97
    ಮನುಧರ್ಮದ ಪ್ರಕಾರ ವರ್ಣ ಮತ್ತು ಜಾತಿಗಳವರಿಗೆಲ್ಲ ಅವರವರದೇ ಆದ ಧರ್ಮಗಳಿದ್ದು ಅವೇ ಅವರ ಸ್ವಧರ್ಮಗಳು. ಅವರು ಸ್ವಧರ್ಮ ಬಿಟ್ಟು ಜೀವಿಸಬಾರದು. ಬೇರೆಯವರ ಸ್ವಧರ್ಮವನ್ನು ಎಷ್ಟೇ ಚೆನ್ನಾಗಿ ಪಾಲಿಸಿದರೂ ತಪ್ಪು ತಪ್ಪೇ. ಹಾಗೆ ಮಾಡಿದಾತ ಸ್ವಧರ್ಮ ಭ್ರಷ್ಟನಾಗುವನು. ಶೂದ್ರನಿಗೆ ದಾಸವೃತ್ತಿಯೇ ಅವನ ಸ್ವಧರ್ಮ. ಅವನು ಅದನ್ನು ಬಿಟ್ಟು ಬೇರೆ ಸವರ್ಣೀಯ ಕಾರ್ಯಗಳಿಗೆ ಕೈ ಹಾಕಿದರೆ ಸ್ವಧರ್ಮ ಭ್ರಷ್ಟನಾಗುವನು. ಮನು ಮಹರ್ಷಿ ಶೂದ್ರರನ್ನು ಬ್ರಾಹ್ಮಣರ ಗುಲಾಮರನ್ನಾಗಿಸಲು ಪ್ರಯತ್ನಿಸಿದರೂ ಬಂಡಾಯಗಳು ಏಳುತ್ತಲೇ ಇದ್ದವು. ಮಹಾಭಾರತ ಸಮಯದಲ್ಲಿ ಲೋಕಾಯತರು ಬಂಡಾಯವೆದ್ದರು. ಅವರನ್ನು ಕೊಂದು, ಅವರ ಸಾಹಿತ್ಯ ಸುಡಲಾಯಿತು. ಜೈನರನ್ನು ಬಹುಬೇಗ ಹದ್ದುಬಸ್ತಿನಲ್ಲಿ ಇಟ್ಟುಕೊಂಡರು. ನಂತರ ಬಂದ ಬೌದ್ಧರು ವೈದಿಕರನ್ನು ಎದುರಿಸಿದರು. ಅವರನ್ನು ಕೊಂದು ಅವರ ಸಾಹಿತ್ಯ ಸುಟ್ಟರು. ಬ್ರಾಹ್ಮಣಶಾಹಿಯನ್ನು ವಿರೋಧಿಸಿದ ಶರಣರಿಗೂ ಇದೇ ಗತಿಯಾಯಿತು.

ಬ್ರಾಹ್ಮಣಶಾಹಿಯ ವಿರುದ್ಧದ ಹೋರಾಟಕ್ಕೆ ಮೂರುಸಾವಿರ ವರ್ಷಗಳ ಇತಿಹಾಸವುಳ್ಳ ಹಿನ್ನಲೆ ನಮ್ಮ ಸಂವಿಧಾನಕ್ಕಿದೆ. ಒಬ್ಬ ಬಾಬಾಸಾಹೇಬರನ್ನು ಪಡೆಯಲು ಭಾರತ ಮೂರುಸಾವಿರ ವರ್ಷ ಕಾಯಬೇಕಾಯಿತು! ಲೋಕಾಯತರು ಭೂಮಿ ಹದ ಮಾಡಿದರು. ಬುದ್ಧ ಬೀಜ ಬಿತ್ತಿದ. ಬಸವಣ್ಣ ಮರವಾಗಿಸಿದರು. ಅಂಬೇಡ್ಕರ್ ಫಲವಾಗಿಸಿದರು. ನಾವು ಫಲಾನುಭವಿಗಳಾದೆವು. ನಾವೀಗ ಏನು ಮಾಡುತ್ತಿದ್ದೇವೆ?

  • ರಂಜಾನ್ ದರ್ಗಾ, ಹಿರಿಯ ಸಾಹಿತಿ

Leave a Reply