ಮಹಾಡ್ ಸತ್ಯಾಗ್ರಹ ಎಂದಿಗೂ ಸಹ ಸ್ಪೂರ್ತಿಯಾಗಬಲ್ಲ ಸಂಗತಿ: ಡಾ.ಎಚ್.ಸಿ.ಮಹದೇವಪ್ಪ

4 years ago

ಮಹಾಡ್ ಹೋರಾಟದ ನೆನಪು

ಮಹಾಡ್ ಹೋರಾಟವು ಜಾಗತಿಕ ಮಹತ್ವವನ್ನು ಪಡೆದಂತಹ ಅತಿ ದೊಡ್ಡ ನಾಗರೀಕ ಹೋರಾಟಗಳಲ್ಲಿ ಒಂದು. ರಾಮಚಂದ್ರ ಬಾಬಾಜಿ ಮೋರೆ ಎಂಬ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಆತನಿಗೆ ಸ್ಕಾಲರ್ ಶಿಪ್ ದೊರೆತರೂ ಕೂಡಾ ಶಾಲಾ ಆಡಳಿತ ಮಂಡಳಿಯು ಯಾವುದೋ ಪಟ್ಟಭದ್ರ ಹಿತಾಸಕ್ತಿಗಳಿಗೆ ಭಯಪಟ್ಟುಕೊಂಡ ಕಾರಣದಿಂದಾಗಿ ಆತ ಶಾಲೆಯಿಂದ ಹೊರಗೇ ಕೂರುವಂತಹ ಪರಿಸ್ಥಿತಿ ಬರುತ್ತದೆ. ಇದರ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದ ಮೋರೆ ಅದನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸುತ್ತಾರೆ. ಮುಂದೆ ಇದೇ ಹುಡುಗ ಲಂಡನ್ ನಿಂದ ಉನ್ನತ ಅಧ್ಯಯನ ಮುಗಿಸಿ ಬಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭೇಟಿ ಮಾಡಿ ಮಹಾಡ್ ಸ್ಥಳದಲ್ಲಿ ನಡೆಯುವ ದಲಿತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಕೋರುತ್ತಾರೆ.

ಹಲವು ಸಿದ್ಧತೆಗಳ ಬಳಿಕ ಮಹಾಡ್ ನಲ್ಲಿ ಬೃಹತ್ ಮಟ್ಟದ ದಲಿತ ಸಮ್ಮೇಳನವು ಆಯೋಜನೆಗೊಂಡು ಅಲ್ಲಿ ಬಾಬಾ ಸಾಹೇಬರು ಯಾವ ರೀತಿಯಲ್ಲಿ ಅಸ್ಪೃಶ್ಯ ವರ್ಗದ ಜನರು ಸೇನೆ ಹಾಗೂ ಆರ್ಥಿಕ ಉತ್ಪಾದನಾ ಚಟುವಟಿಕೆ ಮತ್ತು ಬೃಹತ್ ನಿರ್ಮಾಣದ  ಕಾರ್ಯಗಳಲ್ಲಿ ತಮ್ಮ ಶ್ರಮವನ್ನು ತೊಡಗಿಸಿಕೊಂಡು ದೇಶದ ನಿರ್ಮಾಣದಲ್ಲಿ ಹೇಗೆ ಪಾಲ್ಗೊಂಡಿದ್ದರು ಎಂಬ ಸಂಗತಿಯನ್ನು ನೆರೆದಿದ್ದ ಎಲ್ಲರಿಗೂ ಮನಮುಟ್ಟುವಂತೆ ತಿಳಿಸುತ್ತಾರೆ.

ತಮ್ಮ ಇತಿಹಾಸದ ಬಗ್ಗೆ ಅರಿಯುತ್ತಾ ಹೋದಂತೆ ಅಲ್ಲಿ ನೆರೆದಿದ್ದ ಜನರು ಹೆಚ್ಚು ಚೈತನ್ಯಶೀಲರಾಗಿ ವರ್ತಿಸುತ್ತಾ ಅಷ್ಟೇ ಭಾವನಾತ್ಮಕತೆಗೆ ಒಳಗಾಗುತ್ತಾರೆ. ಬಾಬಾ ಸಾಹೇಬರ ಅಧ್ಯಯನ ಮತ್ತು ಸಾಧನೆಗಳನ್ನು ಎಲ್ಲರೂ ಸಹ ಅನುಸರಿಸಬೇಕು ಆಗ ಮಾತ್ರ ಶೋಷಿತ ಸಮುದಾಯಗಳಿಗೆ ನೈತಿಕ ಸ್ಥೈರ್ಯ ಬರಲು ಸಾಧ್ಯ ಎಂದು ನೆರೆದಿದ್ದ ಬಹಳಷ್ಟು ಮಂದಿ ಪ್ರತಿಪಾದಿಸುತ್ತಾರೆ.

ಹೀಗೆ ಸಭೆ ನಡೆದ ಮೊದಲ ದಿನದ ಸಂಜೆ ಅಂಬೇಡ್ಕರ್ ಮತ್ತವರ ಸಂಗಾತಿಗಳು ಮಾರನೇ ದಿನ ಎಲ್ಲರೂ ಮಹಾಡ್ ನಲ್ಲಿದ್ದ ಚವ್ಹಾರ್ ಕೆರೆಗೆ ಹೋಗಿ ಮುನ್ಸಿಪಾಲಿಟಿ ನಿರ್ಣಯವನ್ನು ಜಾರಿ ಮಾಡಲು ಸಂಕಲ್ಪ ಮಾಡುತ್ತಾರೆ. ಅದರಂತೆಯೇ ಸಮಾವೇಶವು ಕೊನೆಗೊಳ್ಳುವ ಹೊತ್ತಿಗೆ ಸಂಘಟಕರಾಗಿದ್ದ ಭಾಯಿಚಿತ್ರೆಯವರು ಮುನ್ಸಿಪಾಲಿಟಿ ನಿರ್ಣಯಯಕ್ಕೆ ಅನುಸಾರವಾಗಿ ಎಲ್ಲರೂ ಚವ್ಹಾರ್  ಕೆರೆಯ ನೀರನ್ನು ಕುಡಿಯಲು ಸಮ್ಮೇಳಾನಧ್ಯಕ್ಷರ ಜೊತೆಗೆ ಕೆರೆಯ ಕಡೆ ಹೆಜ್ಜೆ ಹಾಕಬೇಕೆಂದು ಸೂಚಿಸಿದಾಗ ಇಡೀ ಸಭೆಯೇ ಒಂದು ಕ್ಷಣ ರೋಮಾಂಚನಗೊಳ್ಳುತ್ತದೆ.

ಅಲ್ಲಿ ನೆರೆದಿದ್ದ ಜನ ಸಮುದಾಯವು ಬಾಬಾ ಸಾಹೇಬರೊಂದಿಗೆ ಹೆಜ್ಜೆ ಹಾಕಿ ಚವ್ಹಾರ್ ಕೆರೆಯ ನೀರನ್ನು ಕುಡಿಯುತ್ತಾರೆ. ಆದಿನ ಅಲ್ಲಿ ಕುಡಿದಿದ್ದು ಪ್ರಕೃತಿದತ್ತವಾದ ನೀರಾಗಿದ್ದರೂ ಕೂಡಾ ಆ ನೀರು ಕುಡಿಯಲು ಅಂಬೇಡ್ಕರ್ ಅವರ ಜ್ಞಾನದ ವಿಶ್ವಾಸ ಮತ್ತು ಹೋರಾಟದ ಕಿಚ್ಚು ಅಲ್ಲಿ ಬಹು ದೊಡ್ಡದಾಗಿ ಕಾಣುತ್ತಿತ್ತು.

ಈ ಘಟನೆಯಾದ ಬಳಿಕ ಅಲ್ಲಿ ಸವರ್ಣೀಯರಿಂದ ತಳ ವರ್ಗದ ಜನರ ಮೇಲೆ ದೊಡ್ಡ ಮಟ್ಟದ ಹಿಂಸಾಚಾರಗಳು ನಡೆದವು. ಕೆಳ ಜಾತಿಯವರು ಪ್ರತಿಭಟನೆಗಾಗಿ ಅಲ್ಲಿದ್ದ ದೇವಸ್ಥಾನವನ್ನು ಪ್ರವೇಶಿಸುತ್ತಾರೆ ಎಂಬುದು ಅವರ ಆತಂಕವಾಗಿತ್ತು. ಆದರೆ ದೇವಾಲಯಗಳ ಅಸಮಾನತೆ ಮತ್ತು ಧರ್ಮದ ಅನ್ಯಾಯದ ಬಗ್ಗೆ ತಿಳಿದಿದ್ದ ಬಾಬಾ ಸಾಹೇಬರು “ನಮಗೆ ದೇವಸ್ಥಾನ ಪ್ರವೇಶಿಸುವ ಯಾವುದೇ ಇರಾದೆ ಇಲ್ಲ” ಎಂದು ಹೇಳಿ ಎಲ್ಲರೂ ವಾಪಸ್ ಹೋಗುವಾಗ ದುಷ್ಟ ಮನಸ್ಸಿನ ಸವರ್ಣೀಯರು ತೀವ್ರ ಅಸಹನೆಯಿಂದ ಲಾಠಿ ಹಿಡಿದು ದಲಿತರ ಮೇಲೆ ಹಲ್ಲೆ ನಡೆಸಲು ಮುಂದಾದರು.

ಸತ್ಯಾಗ್ರಹದ ನಡೆಸಿದವರ ಮನೆಯಲ್ಲಿದ್ದ ಹೆಂಗಸರು ಮಕ್ಕಳನ್ನು ಮತ್ತು ಅಲ್ಲಿದ್ದ ಜನರನ್ನು ಅವರು ಹಿಗ್ಗಾಮುಗ್ಗಾ ಥಳಿಸಿದರು. ನೋವು ತಾಳಲಾರದೇ ದಲಿತರು ಊರೊಳಗಿದ್ದ ಇತರ ಜನರ ಮನೆಯೊಳಗೆ ರಕ್ಷಣೆಗೆ ಓಡುತ್ತಿದ್ದರೆ ಬಹುತೇಕರು ಜಾತಿಯ ಕಾರಣಕ್ಕಾಗಿ ಮನೆ ಬಾಗಿಲನ್ನು ಹಾಕಿಕೊಂಡು ದಲಿತರನ್ನು ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ. ನಿಜಕ್ಕೂ ಅದೊಂದು ಅಮಾನವೀಯವಾದ ಘಟನೆಯೇ ಆಗಿತ್ತು.

ಆದರೆ ಇಂತಹ ಹಿಂಸೆಯನ್ನು ನೋಡಿ ಸಹಿಸದ ಅಲ್ಲಿದ್ದ ಮುಸಲ್ಮಾನರು ದಲಿತರ ರಕ್ಷಣೆಗೆ ಟೊಂಕಕಟ್ಟಿ ಧಾವಿಸಿದರು. ಅವರ ಪ್ರವೇಶದಿಂದ ದಿಗಿಲುಗೊಂಡ ಸವರ್ಣೀಯರು ಅವರಿಂದ ಮರು ಹೊಡೆತ ಬಿದ್ದಾಕ್ಷಣ ತಡೆದುಕೊಳ್ಳುವ ಸಾಮರ್ಥ್ಯವಿಲ್ಲದೇ ಅಲ್ಲಿಂದ ಜಾಗ ಖಾಲಿ ಮಾಡಿದರು. ಬಹುಶಃ ಭಾರತದ ಸಾಮಾಜಿಕ ಇತಿಹಾಸದ ಅಧ್ಯಯನದಲ್ಲಿ ಮುಸ್ಲೀಮರ ಈ ಸಹಕಾರವು ಮಹತ್ವದ ಸಂಗತಿಗಳಲ್ಲಿ ಒಂದಾಗಿ ಉಳಿದಿದೆ.

ಒಟ್ಟಿನಲ್ಲಿ ಬಾಬಾ ಸಾಹೇಬರ ಜ್ಞಾನ ಮತ್ತು ಅವರ ಅದಮ್ಯ ಬದ್ಧತೆಯ ಕನಸಿನ ಮೊದಲ ಹೆಜ್ಜೆಯಾಗಿದ್ದ ಮಹಾಡ್ ಸತ್ಯಾಗ್ರಹವು ಎಂದಿಗೂ ಸಹ ಸ್ಪೂರ್ತಿಯಾಗಬಲ್ಲ ಸಂಗತಿಯಾಗಿದೆ. ಈಗ ಅದನ್ನೆಲ್ಲಾ ನೆನೆದರೆ ನಮ್ಮೆದುರು ಹಿಂದುತ್ವದ ಮುಖವಾಡ ಹಾಕಿ ಬರುವ ಕೋಮುವಾದಿ ಕಳ್ಳರ ಮುಖಕ್ಕೆ ಒಂದು ಬೀಸಬೇಕು ಎನಿಸುವಷ್ಟು ಸಿಟ್ಟು ಬರುತ್ತದೆ!

  • ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

Leave a Reply