ಸರಕಾರಗಳು ದಲಿತ, ಸಂವಿಧಾನ ವಿರೋಧಿ:  ಗೋಪಾಲಕೃಷ್ಣ ಅರಳಹಳ್ಳಿ

4 years ago

ಮಂಗಳೂರು: ರಾಜ್ಯವನ್ನು ಕೋಮುವಾದದ ಉಗ್ರಾಣವನ್ನಾಗಿ ಮಾಡಲಾಗುತ್ತಿದೆ. ದಲಿತರ ಮೇಲೆ ದಾಳಿ ದೌರ್ಜನ್ಯಗಳನ್ನು ಮಾಡಿದ ಮೇಲ್ಜಾತಿಯ ಜನರನ್ನು ರಕ್ಷಿಸಲು ಕೇಸುಗಳನ್ನೇ ದಾಖಲಿಸುತ್ತಿಲ್ಲ. ರಾಜ್ಯದ ಹಲವೆಡೆಗಳಲ್ಲಿ ನಡೆದ ದಲಿತ ದೌರ್ಜನ್ಯಗಳ ಬಗ್ಗೆ ಕಿಂಚಿತ್ತೂ ಗಮನ ನೀಡದ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ನಿಜಕ್ಕೂ ದಲಿತ, ಸಂವಿಧಾನ ವಿರೋಧಿಯಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಅರಳಹಳ್ಳಿ ಅಭಿಪ್ರಾಯಪಟ್ಟರು.

ದೌರ್ಜನ್ಯ ದಬ್ಬಾಳಿಕೆ ನಿರುದ್ಯೋಗ ಹಾಗೂ ಅಸಮಾನತೆಗಳ ವಿರುದ್ಧ ಹಮ್ಮಿಕೊಂಡ ಮಂಗಳೂರು ನಗರ ಮಟ್ಟದ ದಲಿತ ಚೈತನ್ಯ ಸಮಾವೇಶವನ್ನು ಉದ್ಘಾಟಿಸಿ ಮಾತಾಡಿದ ಅವರು, ದೇಶದ ದಲಿತರ ಬದುಕು ಭಯಭೀತಿಯಲ್ಲೇ ನಡೆಯುವಂತಾಗಿದೆ. ಮೋದಿ ಸರಕಾರದ ಅವಧಿಯಲ್ಲಿ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅವರ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕೇಂದ್ರ ಬಜೆಟ್ಟಿನಲ್ಲಿ ನೀಡಲಿಲ್ಲ. ನೀತಿ ಆಯೋಗದ ಆಣತಿಯಂತೆ ಹಣವನ್ನು ಕಡಿತ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿಯವರು  ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಇದು ಅವೈಜ್ಞಾನಿಕ ನಿರ್ಧಾರ. ಇದರಿಂದ ದಲಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚಿನ ಬಜೆಟ್ಟಿನಲ್ಲಿ ಭೂಮಿ, ನೀರು, ವಸತಿ, ಶಿಕ್ಷಣ ಉದ್ಯೋಗಕ್ಕೆ  ಆದ್ಯತೆ ನೀಡಿರುವ ಯಾವ ಕ್ರಮಗಳೂ ಕಾಣುತ್ತಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿಯ ಮಾರ್ಗದರ್ಶಕ ಡಾ.ಕೃಷ್ಣಪ್ಪ ಕೊಂಚಾಡಿ, ಮಂಗಳೂರಿನ ದಲಿತರ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿ, ಆಳುವ ವರ್ಗಗಳಿಂದ ಇಂದಿಗೂ ವ್ಯವಸ್ಥಿತವಾಗಿ ದಲಿತರನ್ನು ರಾಜಕೀಯ ದಾಳಗಳನ್ನಾಗಿಸುವ ಹುನ್ನಾರದ ಬಗ್ಗೆ ಹೇಳಿದರು.

ವೃತ್ತಿನಿರತ ಅಲೆಮಾರಿ ಸಿಳ್ಳೇಕ್ಯಾತ ಸಮುದಾಯದ ನಾಯಕ ರವಿಯವರು ಮಾತನಾಡಿ, ಪ್ರಜ್ಞಾವಂತರ, ಬುದ್ದಿವಂತರ ಜಿಲ್ಲೆಯೆಂದೇ ಕರೆಯಲ್ಪಡುವ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಏಳೆಂಟು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ. ಹಿಂದು ನಾವೆಲ್ಲ ಒಂದು ಎಂದು ಹೇಳುವ ಹಿಂದುತ್ವವಾದಿ ಶಕ್ತಿಗಳು ದಲಿತರನ್ನು ಮಾತ್ರ ಹಿಂದುಗಳಾಗಿ ನೋಡುತ್ತಿಲ್ಲ. ಅಲ್ಪಸಂಖ್ಯಾತರ ಮೇಲೆ ಧಾಳಿ ನಡೆಸಲು ದಲಿತರನ್ನು ದುರುಪಯೋಗಪಡಿಸುತ್ತಿರುವ ಬಿಜೆಪಿ ಸಂಘಪರಿವಾರದ ದ್ವೇಷ ರಾಜಕಾರಣವನ್ನು ದಲಿತ ಸಮುದಾಯ ಅರ್ಥೈಸಬೇಕಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಜಿಲ್ಲಾ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ಗುಳುಂ ಮಾಡುತ್ತಿರುವ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಮಂಗಳೂರಿನಲ್ಲಿ ದಲಿತರ ಬದುಕನ್ನು ಉತ್ತಮ ಪಡಿಸಲು ಗಮನ ಹರಿಸುತ್ತಿಲ್ಲ. ದಲಿತರಿಗಾಗಿ ಮೀಸಲಿರಿಸಿದ ಹಣವನ್ನು ದಲಿತರ ಅಭಿವೃದ್ಧಿಗಾಗಿ ವಿನಿಯೋಗಿಸದೆ ಇತರ ಅಭಿವೃದ್ದಿ ಕಾರ್ಯಕ್ಕೆ ಉಪಯೋಗಿಸುವ ಮೂಲಕ ಮಂಗಳೂರು ನಗರ ಪಾಲಿಕೆ ಆಡಳಿತ ದಲಿತ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇನ್ನೂ ಶೋಷಿತ ಸಮುದಾಯಕ್ಕೆ ಭೂಮಿ, ಶಿಕ್ಷಣ, ಉದ್ಯೋಗ ದೊರೆಯದೆ ಇರುವುದು ದೇಶದ ಕರಾಳತೆಯನ್ನು ಎತ್ತಿ ತೋರಿಸಿದೆ. ಮುಂಬರುವ ದಿನಗಳಲ್ಲಿ ಬಲಿಷ್ಠ ದಲಿತ ಚಳುವಳಿ ಕಟ್ಟುವ ಮೂಲಕ ಆಳುವ ವರ್ಗಕ್ಕೆ ಎದಿರೇಟು ನೀಡಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಬಶೀರ್ ಪಂಜಿಮೊಗರು, ಕೃಷ್ಣಪ್ಪ ಕೋಣಾಜೆ, ಸಮಾವೇಶಕ್ಕೆ ಶುಭ ಕೋರಿ ಸಮುದಾಯದ ವಾಸುದೇವ ಉಚ್ಚಿಲ್, ವಿಚಾರವಾದಿ ಸಂಘಟನೆಯ ನರೇಂದ್ರ ನಾಯಕ್, ಕಾರ್ಮಿಕ ಮುಖಂಡ ರವಿಚಂದ್ರ ಕೊಂಚಾಡಿ ಮಾತನಾಡಿದರು.

ವೇದಿಕೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಚಂದ್ರಶೇಖರ್, ಶಶಿಕಲಾ ನಂತೂರು, ಕಮಲ ಶಿವನಗರ, ಸುರೇಶ್, ನಾರಾಯಣ ತಲಪಾಡಿ, ರಾಮಕೃಷ್ಣ ನಂತೂರು, ಶಿವಾನಂದ ಕುಳಾಯಿ, ಚಂದ್ರಶೇಖರ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ನಾಗೇಂದ್ರ ಉರ್ವಾಸ್ಟೋರು ವಹಿಸಿದ್ದರು. ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರೆ, ಪ್ರವೀಣ್ ಕೊಂಚಾಡಿ ವಂದನಾರ್ಪಣೆ ಮಾಡಿದರು.

Leave a Reply