ಹೌದು ನಾನು ಕಾಂಗ್ರೆಸ್ ಪರವಾ? ಅಥವಾ ಕಾಂಗ್ರೆಸ್ಸಿನ ಸಿಂಪತೈಸರಾ? ಹಾಗಂತಾ ಒಂದು ಸೀರಿಯಸ್ ಆರೋಪವನ್ನು ಜೀ ಕನ್ನಡ ನ್ಯೂಜ್ ಚಾನೆಲ್ ನಿರೂಪಕಿ ದಿವ್ಯಶ್ರೀ ಮಾಡಿದರು. ಅವರ ಸುದ್ದಿವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಸಲ ಭಾಗವಹಿಸಿದ್ದ ನನ್ನ ಮೇಲೆ ಆ ರೀತಿಯ ಓಪಿನೀಯನ್ ನ್ನು ಕೆಲವು ವೀಕ್ಷಕರು ವ್ಯಕ್ತಪಡಿಸಿದ್ದಾರಂತೆ. ಕಳೆದ ಸಲದ ಚರ್ಚೆಯಲ್ಲೂ ಸಹ ಜೆಡಿಎಸ್ ಪಕ್ಷದ ವಕ್ತಾರೆ ನನಗೆ ಕಾಂಗ್ರೆಸ್ ಪರ ಚಿಂತಕ ಎಂದು ನೇರವಾಗಿ ಲೈವ್ ಚರ್ಚೆಯಲ್ಲೇ ಆರೋಪಿಸಿ ಜಗಳ ತೆಗೆದಿದ್ದರು.
ಈಗ ಮತ್ತೊಮ್ಮೆ ಕೂತು ಆಲೋಚಿಸುತ್ತಿರುವೆ. ಆಳುವ ಪಕ್ಷ ಯಾವುದೇ ಇರಲಿ, ಅದರ ಜನವಿರೋಧಿ ನೀತಿಗಳ ಕಡು ವಿಮರ್ಶಕನಾಗಿದ್ದ ನಾನು ಈಗೇಕೆ ಕಾಂಗ್ರೆಸ್ ವಕ್ತಾರ ಎಂದು ಆರೋಪಿತನಾಗಿರುವೆ. ಕೈಪಕ್ಷದ ಪರ ಒಲವು ಹೆಚ್ಚಾಯಿತೆ? ಪ್ರಭುತ್ವ ವಿರೋಧಿ ನಿಲುವು ಬದಲಾಯಿತೆ?
ನೋ, ಇದು ಯಾವುದೂ ಸತ್ಯವಲ್ಲ. ನನ್ನ ತೀವ್ರ ಅಸಮಾಧಾನ ಇರುವುದು ಮನುವಾದಿಪೀಡಿತ ಸಂಘ ಪರಿವಾರದ ಬಗ್ಗೆ. ಸಂಘದ ರಾಜಕೀಯ ಅಂಗವಾದ ಜೀವವಿರೋಧಿ ಬಿಜೆಪಿ ಪಕ್ಷದ ಬಗ್ಗೆ. ಯಾಕೆ ಈ ಸಂಘ ಪರಿವಾರದ ಕುರಿತು ಈ ಪರಿ ವಿರೋಧ? ಯಾಕೆಂದರೆ ನಾಗಾಪುರದ ವೈದಿಕಶಾಹಿ ಶಕ್ತಿಗಳ ನೇತೃತ್ವದ ಹಿಂದುತ್ವವಾದ ಇದೆಯಲ್ಲಾ ಅದು ಬಹುತ್ವ ಭಾರತಕ್ಕೆ, ಅಂಬೇಡ್ಕರವರ ಸಮಾನತೆಯ ತತ್ವಕ್ಕೆ, ಬುದ್ಧ ಬಸವಾದಿ ಶರಣರ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿರುವಂತಹುದು. ಅಸಮಾನತೆಗೆ (ಕು)ರೂಪಕವೇ ಆಗಿರುವ ಮನುಧರ್ಮ ಶಾಸ್ರ್ತದ ಪ್ರತಿಪಾದನೆ ಮಾಡುವಂತಹುದು. ಅವರ ರಾಜಕೀಯ ಜಂಡಾ ಕೆಲವೊಮ್ಮೆ “ನಾವೆಲ್ಲಾ ಹಿಂದೂ, ಒಂದು ಒಂದು” ಎಂದು ಹೇಳಿದರೂ ಸಂಘದ ಅಜೆಂಡಾ ವರ್ಣಾಶ್ರಮದ ಪುನರ್ ಸ್ಥಾಪನೆಯೇ ಆಗಿರುವುದು ಗುಟ್ಟಿನ ವಿಷಯವಲ್ಲ. ಇದು ಈ ದೇಶದ ಬಹುತ್ವಕ್ಕೆ, ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನಕ್ಕೆ ಮಾರಕವಾಗಿರುವಂತಹುದು.
ಆದ್ದರಿಂದಲೇ ನನ್ನ ಬಹುತೇಕ ಬರಹಗಳಲ್ಲಿ, ಕಾಮೆಂಟುಗಳಲ್ಲಿ, ಪ್ರಹಸನಗಳಲ್ಲಿ, ನಾಟಕಗಳಲ್ಲಿ ಈ ಮತೀಯವಾದಿ ಶಕ್ತಿಗಳ ವಿರುದ್ಧ ಪ್ರತಿಭಟನಾತ್ಮಕ ವಿಚಾರಗಳೇ ಇರುತ್ತವೆ. ಯಾವುದೇ ಸುದ್ದಿ ವಾಹಿನಿಗಳ ಚರ್ಚೆಯಲ್ಲೂ ಸಹ ಮತಾಂಧ ಶಕ್ತಿಗಳ ಕುರಿತು ಟೀಕೆ ನೇರವಾಗಿಯೇ ಇರುತ್ತದೆ. ಯಾವಾಗ ಸಂಘ ಪರಿವಾರವನ್ನೋ ಇಲ್ಲಾ ಅದರ ಅಂಗ ಬಿಜೆಪಿಯನ್ನೋ ಅಥವಾ ಕಮಲ ಪಕ್ಷದ ಅಧಿನಾಯಕನನ್ನೋ ವಿರೋಧಿಸಿ ಮಾತಾಡುತ್ತೇನೋ, ಬರೆಯುತ್ತೇನೋ ಆಗ ನನ್ನನ್ನು ನಗರ ನಕ್ಸಲ್, ಕಮ್ಯೂನಿಸ್ಟ್ ಇಲ್ಲವೇ ಕಾಂಗ್ರೆಸ್ ಹಿತಚಿಂತಕ ಎಂದು ಆರೋಪಿಸುತ್ತಾರೆ. ರಾಜಕೀಯ ಚಿಂತಕ, ಪ್ರಗತಿಪರ, ಪತ್ರಕರ್ತ ಎಂದುಕೊಂಡು ಕಾಂಗ್ರೆಸ್ ಬೆಂಬಲಿಸುವ ಅಗತ್ಯ ಏನಿದೆ? ಎಂದೂ ಪ್ರಶ್ನಿಸುತ್ತಾರೆ.
ಆದರೆ ನನಗೆ ಅಥವಾ ನನ್ನಂತೆ ಅಂಬೇಡ್ಕರ್ ರವರ ಸಂವಿಧಾನವನ್ನು ಪ್ರೀತಿಸುವ, ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವವನ್ನು ಉಳಿಸುವ ಹಲವಾರು ಮನಸುಗಳ ಅನಿವಾರ್ಯ ಆಯ್ಕೆ ಕಾಂಗ್ರೆಸ್ ಪರ ನಿಲುವಾಗಿದೆ. ಸಂಘ ಪರಿವಾರವನ್ನು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಖಂಡಿಸುವ ಸಿದ್ದರಾಮಯ್ಯನವರ ಪರವಾಗಿದೆ. ಇದು ಕಾಂಗ್ರೆಸ್ ಪಕ್ಷದ ಮೇಲಿನ ಪ್ರೀತಿಯಿಂದಲೋ ಇಲ್ಲಾ ಸಿದ್ದರಾಮಯ್ಯನವರ ಮೇಲಿನ ಅಭಿಮಾನದಿಂದಲೋ ಹುಟ್ಟಿದ ಒಲವಂತೂ ಖಂಡಿತಾ ಅಲ್ಲಾ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಫ್ಯಾಸಿಸ್ಟ್ ಮೋನಸ್ಟಾರ್ ಶಕ್ತಿಗಳನ್ನು ಎದುರಿಸಲು ಬೇರೆ ಪರ್ಯಾಯ ಪಕ್ಷಗಳು ಇಲ್ಲದೇ ಇರುವ ಅನಿವಾರ್ಯತೆಯಿಂದ ಹುಟ್ಟಿದ ನಿಲುವಾಗಿದೆ.
ಹಾಗಂತ ಕಾಂಗ್ರೆಸ್ ಪಕ್ಷವೇನೂ ಅತ್ಯಂತ ಜನಪರ, ಸಮಾನತೆಯ ಹರಿಕಾರ ಎಂದೇನೂ ಅರ್ಥವಲ್ಲಾ. ಈ ಪುರಾತನ ಪಕ್ಷವೂ ಆಂತರ್ಯದಲ್ಲಿ ಜಾತಿವಾದಿಯಾಗಿದೆ, ಫ್ಯೂಡಲ್ ಆಟಿಟ್ಯೂಡ್ ಹೊಂದಿದೆ. ಬಂಡವಾಳಶಾಹಿಗಳ ಪರವಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಭ್ರಷ್ಟಾಚಾರಕ್ಕೂ ಇಳಿದಿದೆ. ಆದರೂ ಸಂವಿಧಾನದ ಚೌಕಟ್ಟಿನೊಳಗೇ ತನ್ನ ಇತಿ ಮತ್ತು ಅತಿಗಳ ರಾಜಕೀಯದ ಆಟವನ್ನು ಆಡುತ್ತಾ ಬಂದಿದೆ.
ಹಾಗೆಯೇ ಬಿಜೆಪಿ ಪಕ್ಷದಲ್ಲೂ ಸಹ ಜಾತಿವಾದ, ಭ್ರಷ್ಟಾಚಾರ, ದಮನ, ಶೋಷಣೆ ಎಲ್ಲವೂ ಇದೆ. ಆದರೆ ಇದನ್ನೂ ಹೊರತು ಪಡಿಸಿ ಸರ್ವಾಧಿಕಾರಿ ಮನೋಭಾವ, ಮತಾಂಧತೆ, ಧರ್ಮದ್ವೇಷಗಳಂತಹ ವಿನಾಶಕಾರಿ ನೀತಿಗಳು ಆತಂಕ ಹುಟ್ಟಿಸುವಂತಿವೆ. ಬಿಜೆಪಿ ಪ್ರತಿನಿಧಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವಂತೂ ಆರಂಭದಿಂದಲೂ ಭಾರತದ ಸಂವಿಧಾನವನ್ನು ಒಪ್ಪಿದ್ದಿಲ್ಲ. ರಾಷ್ಟ್ರಗೀತೆ ರಾಷ್ಟ್ರದ್ವಜಗಳ ಕುರಿತು ತಕರಾರು ಹೊಂದಿದೆ. ಮೀಸಲಾತಿಯನ್ನು ವಿರೋಧಿಸುತ್ತದೆ. ಬಹುತ್ವ ಭಾರತದ ವಿರುದ್ಧ ಹಿಂದುತ್ವವಾದಿ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ. ಮನುವಾದಿ ಸಿದ್ಧಾಂತದ ಅನುಷ್ಠಾನಕ್ಕಾಗಿ ಕೋಮುವಾದಿ ದಾರಿ ಹಿಡಿದಿದೆ. ಹುಸಿ ರಾಷ್ಟ್ರೀಯತೆಯ ಹೆಸರಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಭಾವನೆಯನ್ನು ಕೆರಳಿಸಿ ಮುಸ್ಲಿಂ ದ್ವೇಷದ ಕಿಚ್ಚನ್ನು ಹಚ್ಚಿ ತನ್ನ ಹಿಂದುತ್ವವಾದಿ ಅಜೆಂಡಾವನ್ನು ಜಾರಿಗೊಳಿಸಲು ಸರ್ವರೀತಿಯಲ್ಲೂ ಪ್ರಯತ್ನಿಸುತ್ತದೆ. ಇದಕ್ಕೆ ತನ್ನ ಸಂಘ ಪರಿವಾರವನ್ನು ಬಳಸಿಕೊಳ್ಳುತ್ತದೆ. ಸಂಘದ ಉದ್ದೇಶ ಸ್ಪಷ್ಟವಾಗಿದೆ. ಹಿಂದೂರಾಷ್ಟ್ರ ನಿರ್ಮಾಣವೇ ಇದರ ಗುರಿಯಾಗಿದೆ, ಅದನ್ನು ಮುಟ್ಟಲು ಧರ್ಮದ್ವೇಷ ಹಾಗೂ ಕೋಮುವಾದವನ್ನು ದಾರಿ ಮಾಡಿಕೊಂಡಿದೆ. ಈ ಸಂಘವು ನಿರ್ಮಿಸಲು ಹೊರಟ ಹಿಂದೂರಾಷ್ಟ್ರ ವರ್ಣಬೇಧದ ಆಧಾರದಲ್ಲಿ, ಮನುಧರ್ಮಶಾಸ್ತ್ರದ ಚೌಕಟ್ಟಿನಲ್ಲಿ ಇರುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಇದೆಲ್ಲದಕ್ಕೂ ಅಂಬೇಡ್ಕರರ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದಲೇ ಈ ಕೆಲವು ಬಿಜೆಪಿ ನಾಯಕರು ಹೇಳುತ್ತಾರೆ ನಮ್ಮ ಪಕ್ಷ ಬಂದಿರೋದೇ ಸಂವಿಧಾನ ಬದಲಿಸಲು ಎಂದು. ಅದಕ್ಕಾಗಿಯೇ ಸಂಘ ಪರಿವಾರದ ಕೆಲವರು ಸಂವಿಧಾನದ ಪ್ರತಿಯನ್ನು ಬೀದಿಯಲ್ಲಿ ಸುಡುತ್ತಾರೆ. ಹಿಂದುತ್ವವಾದದ ಉಗ್ರ ಪ್ರತಿಪಾದಕ ಸಾವರ್ಕರರನ್ನು ಆರಾಧಿಸುತ್ತಾರೆ, ಗಾಂಧಿ ಕೊಂದ ಗೋಡ್ಸೆಗೆ ಗುಡಿ ಕಟ್ಟಿ ಪೂಜಿಸುತ್ತಾರೆ. ಇಂತಹ ಸಂವಿಧಾನ ವಿರೋಧಿತನವನ್ನು ಸಂಘ ಎಂದೂ ಖಂಡಿಸುವುದೂ ಇಲ್ಲಾ, ಅಧಿಕಾರದಲ್ಲಿರುವ ಬಿಜೆಪಿ ಯಾವುದೇ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ.
ಭವಿಷ್ಯದಲ್ಲಿ ಬರಬಹುದಾದ ಬಹುತ್ವದ ವಿರುದ್ಧದ ಹಿಂದುತ್ವದ ಅಪಾಯವನ್ನು ಮನಗಂಡವರು ಯಾರೂ ಸಂಘ ಪರಿವಾರವನ್ನು ಎಂದೂ ಬೆಂಬಲಿಸುವುದಿಲ್ಲ. ಬಿಜೆಪಿ ಪಕ್ಷವನ್ನು ಸಮರ್ಥಿಸಿಕೊಳ್ಳುವುದಿಲ್ಲ. ಇದಕ್ಕೆ ನಾನೂ ಹೊರತಾಗಿಲ್ಲ.
ಈ ಎಲ್ಲಾ ಕಾರಣಗಳಿಗೆ ನಾನು ಬಿಜೆಪಿ ಪಕ್ಷವನ್ನು, ಅದರ ಮಹಾನಾಯಕ ಮೋದಿಯವರನ್ನು ಹಾಗೂ ಸಂಘ ಪರಿವಾರವನ್ನು ಪ್ರಶ್ನಿಸುತ್ತೇನೆ, ವಿರೋಧಿಸುತ್ತೇನೆ. ನನ್ನ ನಡೆ ನುಡಿ ಬರಹಗಳಲ್ಲಿ ಪ್ರತಿಭಟಿಸುತ್ತೇನೆ. ಹೀಗಾಗಿ ನನ್ನ ಮೇಲೆ ಆರೋಪಿಸಲಾಗುತ್ತಿರುವ ನಕ್ಸಲ್, ಕಮ್ಯೂನಿಸ್ಟ್, ಕಾಂಗ್ರೆಸ್ಸಿಗ, ದೇಶದ್ರೋಹಿ, ಧರ್ಮವಿರೋಧಿ ಹೀಗೆ ಅನೇಕಾನೇಕ ಅನಗತ್ಯ ನಿಂದನೆಗಳಿಗೆ ಭಾಜನನಾಗಿದ್ದೇನೆ.
ಮತ್ತೊಮ್ಮೆ ಸ್ಪಷ್ಟೀಕರಣ ಕೊಡುತ್ತೇನೆ. ನಾನು ಯಾವುದೇ ಪಕ್ಷದವನಲ್ಲಾ. ಸಂವಿಧಾನವನ್ನು ಉಳಿಸುವ, ಪ್ರಜಾಪ್ರಭುತ್ವವನ್ನು ಕಾಪಾಡುವ ಉದ್ದೇಶ ಹೊಂದಿರುವ ಪಕ್ಷ ಹಾಗೂ ವ್ಯಕ್ತಿಗಳನ್ನು ಅಭಿಪ್ರಾಯಬೇಧ ಇಟ್ಟುಕೊಂಡೇ ಬೆಂಬಲಿಸುತ್ತೇನೆ. ಹಾಗಂತಾ ಅಂಧಶ್ರದ್ಧೆಯನ್ನೇನು ಹೊಂದಿಲ್ಲ. ಕಾಂಗ್ರೆಸ್ ಪಕ್ಷವೇ ಆಗಲಿ, ಕಮ್ಯೂನಿಸ್ಟ್ ಪಕ್ಷವೇ ಇರಲಿ ಅಥವಾ ಸಂವಿಧಾನಕ್ಕೆ ಬದ್ಧವಾಗಿರುವ ಬೇರೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳಾಗಿರಲಿ ಅಂತವರು ಮಾಡುವ, ಮಾಡಿರುವ, ಮಾಡಬಹುದಾದ ಜನವಿರೋಧಿ, ಜೀವವಿರೋಧಿ ಕೃತ್ಯಗಳನ್ನು ಶತಾಯ ಗತಾಯ ವಿರೋಧಿಸುತ್ತೇನೆ, ಪ್ರತಿಭಟಿಸುತ್ತಲೇ ಇರುತ್ತೇನೆ. ಇದೇ ನನ್ನ ಪ್ರಜಾಪ್ರಭುತ್ವವಾದಿ ನಿಲುವು, ಬಹುತ್ವ ಭಾರತದ ಪರ ಬದ್ಧತೆ ಹಾಗೂ ಸಂವಿಧಾನದ ನಿಷ್ಟೆಯಾಗಿದೆ. ಇಷ್ಟರ ಮೇಲೆಯೂ ಆರೋಪಿಸುವವರು ಆರೋಪಿಸಲಿ, ನಿಂದಿಸುವವರು ನಿಂದಿಸಲಿ ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಎಂಬುದಿಲ್ಲ.
– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ



