ಮಧುದಂಡವತೆ ಅವರ ಗಾಂಧಿ ಕುರಿತ ಉಪನ್ಯಾಸವನ್ನು ಅವರ ಕುರಿತ ಕೃತಿಗಾಗಿ ಅನುವಾದ ಮಾಡಿದ ನಂತರ, ದಂಡವತೆ ನೀಡಿರುವ ಚಂಪಾರಣ್ಯ ಸತ್ಯಾಗ್ರಹದ ಅನುಭವಗಳನ್ನು ಓದಿ ತಲ್ಲಣಗೊಂಡಿದ್ದೆ. ಗಾಂಧಿ ಕುರಿತು ಓದುವುದು, ಬರೆಯುವುದು ಬಹಳಷ್ಟು ಇದೆ ಎಂದು ಆ ಕ್ಷಣಕ್ಕೆ ಅನಿಸಿತು.
1922 ರಲ್ಲಿ ಡಾ.ಬಾಬುರಾಜೇಂದ್ರ ಪ್ರಸಾದ್ ಬರೆದ ಚಂಪಾರಣ್ಯ ಸತ್ಯಾಗ್ರಹ ಕೃತಿಯನ್ನು ಕಳೆದ ಹದಿನೈದು ದಿನಗಳಿಂದ ಹಗಲು, ರಾತ್ರಿ ಕಷ್ಟ ಪಟ್ಟು ಓದಿ ಮುಗಿಸಿದೆ. ಇದೀಗ ಚಂಪಾರಣ್ಯ ಹೋರಾಟ ಕುರಿತ ಇತರೆ ಲೇಖನಗಳನ್ನು ಓದುತ್ತಿದ್ದೇನೆ. ಈಗಾಗಲೇ ಅರವತ್ತು ಪುಟಗಳಷ್ಟು ದಾಖಲೆ ಮಾಡಿ ಇಟ್ಟುಕೊಂಡೆ.
ಇದೀಗ ಅಮೇರಿಕಾದ ಪತ್ರಕರ್ತ ಲೂಯಿಸ್ ಫಿಶರ್ ಕೃತಿ ಓದುತ್ತಿದ್ದೀನಿ. ಆತ ಗಾಂಧೀಜಿ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದ. 1934 ರಲ್ಲಿ ವಾರ್ಧಾದ ಬಳಿಯ ಸೇವಾಗ್ರಾಮದಲ್ಲಿ ಒಂದು ವಾರ ತಂಗಿದ್ದ. 1942 ರಲ್ಲಿ ಪುಣೆಯ ಗಿರಿಧಾಮದಲ್ಲಿ ಐದು ದಿನ ಅವರ ಜೊತೆಗಿದ್ದು ಚಂಪಾರಣ್ಯ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದ.
ಗಾಂಧೀಜಿ ಅವರು 1917 ರ ಏಪ್ರಿಲ್ ನಲ್ಲಿ ನಡೆದ ಚಂಪಾರಣ್ಯ ಹೋರಾಟವನ್ನು ನನ್ನ ಬದುಕಿನ ಅನಿರೀಕ್ಷಿತ ತಿರುವು ಎಂದು ಹೇಳಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಹೋರಾಟ ಮಾಡಿ ಬಂದಿದ್ದ ಗಾಂಧಿ ಅವರಿಗೆ ಚಂಪಾರಣ್ಯದ ಹೋರಾಟ ಮತ್ತು ಅಹಮದಾಬಾದಿನ ಜವಳಿ ಕಾರ್ಮಿಕರ ಮುಷ್ಕರ ಇವೆರೆಡೂ ಸಮಗ್ರ ಭಾರತದ ದರ್ಶನವನ್ನು ನೀಡಿದವು.
ನಾನು ಬ್ರಿಟೀಷರ ವಿರುದ್ಧ ಹೋರಾಡುವುದರ ಜೊತೆಗೆ ಇಲ್ಲಿನ ಬಡತನ, ಅನಕ್ಷರತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಇವುಗಳಿಂದಲೂ ಸಹ ಇಲ್ಲಿನ ಜನತೆಗೆ ಬಿಡುಗಡೆ ದೊರಕಿಸಿಕೊಡಬೇಕು ಎಂದು ನಿರ್ಧರಿಸಿದರು. ನಂತರದ ದಿನಗಳಲ್ಲಿ ಇವೆಲ್ಲವೂ ಅವರ ಬದುಕಿನ ಅವಿಭಾಜ್ಯ ಅಂಗವಾದವು.
ಲೂಯಿಸ್ ಫಿಶರ್ ಬರೆದ ಗಾಂಧಿ ಅವರ ಜೀವನ ಚರಿತ್ರೆ ಜಗತ್ ಪ್ರಸಿದ್ಧ ಕೃತಿಯಾಯಿತು. ಜೊತೆಗೆ ಇಡೀ ಜಗತ್ತಿಗೆ ಅವರ ವ್ಯಕ್ತಿತ್ವ ಪರಿಚಯವಾಯಿತು ಲೂಯಿಸ್ ಫಿಶರ್ ನ ಒಳನೋಟಗಳು ವಿಶ್ಲೇಷಣೆ ಅದ್ಭುತವಾದವು. ಅವರ ಕುರಿತಾದ ಕೃತಿಯಲ್ಲಿನ ಇಂಡಿಗೋ ಚಳುವಳಿ ಕುರಿತು ಓದುವಾಗ ಈ ಮಹಾಶಯ ಇಂದು ನೆನಪಾದನು.
ವಾರ್ಧಾ ದ ಸೇವಾಗ್ರಾಮದಲ್ಲಿ ಗಾಂಧೀಜಿ ಅವರು ಎಲ್ಲರ ಜೊತೆ ನೆಲದ ಮೇಲೆ ಕುಳಿತು ಪ್ರಾರ್ಥನೆ ಮಾಡುವುದು ಮತ್ತು ಸಾಮೂಹಿಕ ಭೋಜನ ಮಾಡುವುದನ್ನು ನೋಡಿ ಲೂಯಿಸ್ ಫಿಶರ್ ಗಾಂಧಿ ಅವರನ್ನು ‘’ ಅನ್ನಕ್ಕೆ ಆಧ್ಯಾತ್ಮವನ್ನು ಬೆಸೆದ ಮಹಾತ್ಮ’’ ಎಂದು ತುಂಬು ಹೃದಯದಿಂದ ಬಣ್ಣಿಸಿದ್ದ.
ಗಾಂಧಿಯನ್ನು ಓದಲಾಗದ, ಗಾಂಧಿಯನ್ನು ಗ್ರಹಿಸಲಾಗದ ಅರೆಬೆಂದ ಮಡಕೆಗಳು ಮತ್ತು ಅಸ್ವಸ್ಥ ಮನಸ್ಸುಗಳು ಗಾಂಧಿ ಅವರನ್ನು ಟೀಕಿಸುವುದೇ ಸಿದ್ಧಾಂತ ಎಂಬ ಮಲದ ಗುಂಡಿಯಲ್ಲಿ ಬಿದ್ದು ಈಜಾಡುತ್ತಿದ್ದಾವೆ. ಅವರಿಗೋಸ್ಕರ, ಗಾಂಧಿ ಅವರ ಪ್ರಾರಂಭಿಕ ಹೋರಾಟ ಚಂಪಾರಣ್ಯ ಹೋರಾಟ ಮತ್ತು ಅಂತಿಮ ಹೋರಾಟ ನೌಕಾಲಿಯ ದುರಂತಗಳನ್ನು, ವಿಭಜನೆಯ ಸಂಕಟಗಳನ್ನು ದಾಖಲಿಸುತ್ತಿದ್ದೀನಿ.
ಅವರ ತಲೆಯೊಳಗಿನ ಕಸ ಕಡಿಮೆಯಾದರೆ ಸಾಕು. ಇಂದು ನಾವು ಬದುಕುತ್ತಿರುವ ಅಯೋಮಯ ಭಾರತದ ನಡುವೆ ಭವಿಷ್ಯದ ಭಾರತದ ಬಗ್ಗೆ ನಂಬಿಕೆ ಇಟ್ಟುಕೊಳ್ಳಬಹುದು.
ಕೊನೆಯಮಾತು- 1934 ರಲ್ಲಿ ಸೇವಾಗ್ರಾಮದಲ್ಲಿ ಲೂಯಿಸ್ ಫೀಶರ್ ಗಾಂಧಿ ಅವರನ್ನು ಪ್ರಥಮಬಾರಿಗೆ ಭೇಟಿ ಮಾಡಿದ ಚಿತ್ರವಿದು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



