ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಹಾಗೂ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕುಣಿಕೆ ಸಿದ್ದಗೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲು ಪ್ರಜ್ವಲ್ ಅವರ ವಕೀಲರು ಸಮಯಾವಕಾಶ ಕೋರಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿರುವ ತನಿಖಾ ತಂಡ ತಕ್ಷಣವೇ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಇದಿಷ್ಟೇ ಅಲ್ಲದೇ ಪ್ರಜ್ವಲ್ ಪರ ವಕೀಲರಿಗೂ ನೋಟೀಸ್ ನೀಡಿರುವ ತನಿಖಾ ತಂಡ ತಕ್ಷಣವೇ ತಮ್ಮ ಕಕ್ಷಿದಾರನನ್ನು ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಲು ತಿಳಿಸಿ ಎಂದು ಹೇಳಿದೆ.
ಇದರ ನಡುವೆ, ವಿದೇಶಕ್ಕೆ ತೆರಳಿರುವ ಪ್ರಜ್ವಲ್ ಅವರನ್ನು ವಾಪಸ್ ಕರೆತರುವ ಪ್ರಯತ್ನ ನಡೆಸಿದ್ದು, ಲುಕ್ ಔಟ್ ನೋಟೀಸ್ ಜಾರಿಗೊಳಿಸಲಾಗಿದೆ.
ಪ್ರಜ್ವಲ್ ರೇವಣ್ಣ ಅವರನ್ನು ತನಿಖೆಗೊಳಪಡಿಸುವುದು ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ಅಗತ್ಯವಾಗಿದ್ದು, ಅವರನ್ನು ಜರ್ಮನಿಯಿಂದ ಕರೆತರಬೇಕಿದೆ. ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗಕ್ಕೆ ಲುಕೌಟ್ ನೋಟೀಸ್ ಸರ್ವ್ ಮಾಡಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳ ಇಮಿಗ್ರೇಷನ್ಗೆ ಎಸ್ಐಟಿ ಅಧಿಕಾರಿಗಳು ಲುಕ್ ಔಟ್ ನೋಟಿಸ್ ನೀಡಿದ್ದಾರೆ.
ಈ ಮೂಲಕ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡ ಕೂಡಲೇ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದರ ನಡುವೆಯೂ ಪ್ರಜ್ವಲ್ ವಿರುದ್ಧ ಮತ್ತೊಬ್ಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.ಈ ದೂರಿನ ತನಿಖೆಯನ್ನೂ ಎಸ್ಐಟಿ ಕೈಗೆತ್ತಿಕೊಂಡಿದೆ.
ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿರುವ ಪ್ರಜ್ವಲ್ ರೇವಣ್ಣಗೆ ಫಾರಂ -41 ಎ ಜಾರಿಗೊಳಿಸಿದ್ದು, ನೋಟಿಸ್ ಜಾರಿಗೊಂಡ 24 ಗಂಟೆಯಲ್ಲೇ ತನಿಖೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದರಿಂದ ಲುಕ್ಔಟ್ ನೋಟೀಸ್ ಜಾರಿ ಮಾಡಿ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಿಗೆ ಮಾಹಿತಿ ನೀಡಲಾಗಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ಅವರ ವಕೀಲರು ಎಸ್ಐಟಿ ಅಧಿಕಾರಿಗಳಿಗೆ ಪತ್ರ ಬರೆದು ತಮ್ಮ ಕಕ್ಷಿದಾರರು ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು 6 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದರು.
ನಿಯಮಗಳ ಅನುಸಾರ ಕಾಲಾವಕಾಶ ನೀಡಲು ಆಸ್ಪದವಿಲ್ಲ. ಆದರೂ ಎಸ್ಐಟಿ ಅಧಿಕಾರಿಗಳು ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದಾರೆ. ಒಂದು ವೇಳೆ ಅವಕಾಶ ಇದ್ದರೆ 6 ದಿನಗಳವರೆಗೂ ಸಮಯ ನೀಡಲಾಗುವುದು. ಅಷ್ಟರೊಳಗೆ ವಿಚಾರಣೆಗೆ ಹಾಜರಾಗಲೇಬೇಕು. ಮತ್ತೆ ಅವಧಿ ವಿಸ್ತರಣೆ ಅಥವಾ ಇತರ ವಿನಾಯಿತಿಗಳಿಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಸಮಯಾವಕಾಶ ನೀಡಲು ಅವಕಾಶ ಇಲ್ಲದೇ ಇದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಅಗತ್ಯ ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದು ಎಂದರು.
24 ಗಂಟೆಯೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣರಿಗೆ ನೋಟೀಸ್ ನೀಡಲಾಗಿದೆ. ವಿಚಾರಣೆಗೆ ಬರದೇ ಇದ್ದರೆ ಎಸ್ಐಟಿ ಅಧಿಕಾರಿಗಳು ಬಂಧನಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. ರೇವಣ್ಣ ಇಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದರು.
ಸಂತ್ರಸ್ತ ಮಹಿಳೆಯರ ಪೈಕಿ ಕೆಲವರ ಹೇಳಿಕೆಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ನಿನ್ನೆ ಇನ್ನೊಬ್ಬ ಮಹಿಳೆ ದೂರು ನೀಡಿದ್ದಾರೆ. ಆಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಲಿದೆ. ಇದರಲ್ಲಿ ಮಹಿಳೆಯರ ಸುರಕ್ಷತೆಯ ಜೊತೆಗೆ ಕುಟುಂಬ ಹಾಗೂ ಅವರ ಜೀವನದ ಪ್ರಶ್ನೆಯೂ ಅಡಗಿರುವುದರಿಂದಾಗಿ ಎಲ್ಲಾ ಪ್ರಕರಣಗಳಂತೆ ಸಾಮಾನ್ಯವಾಗಿ ಪರಿಗಣಿಸುವುದಿಲ್ಲ. ಸೂಕ್ಷ್ಮ ಹಾಗೂ ವಿಶೇಷವಾಗಿ ನಿಭಾಯಿಸಲಾಗುವುದು ಎಂದರು.



