ಮುಡಾ ಕುರಿತ ವರದಿ ನ್ಯಾಯಾಲಯಕ್ಕೆ ಸಲ್ಲಿಸಿದ ಲೋಕಾಯುಕ್ತ

1 year ago

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ನಡೆಸಿದ  ತನಿಖೆ ಪ್ರಗತಿಯ ವಿವರಗಳನ್ನೊಳಗೊಂಡ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿರುವ ವಿವರವು ಅಂತಿಮ ವರದಿಯಲ್ಲ, ಈವರೆಗಿನ ತನಿಖಾ ಪ್ರಗತಿ ವರದಿ ಮಾತ್ರವಾಗಿದ್ದು, ಇನ್ನೂ ತನಿಖೆ ಪೂರ್ಣ ಮುಗಿಯದ ಕಾರಣ ಅಂತಿಮ ವರದಿಗೆ ಮತ್ತಷ್ಟು ಕಾಲಾವಕಾಶ ಕೋರಲು ಅಧಿಕಾರಿಗಳು ಮುಂದಾಗಿದ್ದಾರೆ.

ಮುಡಾ ಹಗರಣ ಸಂಬಂಧ ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿದೆ. ಜ.27ಕ್ಕೆ ಒಂದು ದಿನ ಮುಂಚಿತವಾಗಿ ವರದಿ ಸಲ್ಲಿಸಲು ಸೂಚಿಸಿದೆ. ಜ.26 ಭಾನುವಾರವಿದ್ದು, ಲೋಕಾಯುಕ್ತ ಅಧಿಕಾರಿಗಳು ಜ.25 ರಂದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದು, ಜ.27ರಂದು ವಿಚಾರಣೆ ನಡೆಯಲಿದೆ.

ಈವರೆಗಿನ ತನಿಖಾ ಪ್ರಗತಿಯ 1 ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಮಹತ್ವದ ದಾಖಲೆಗಳು ಅಡಗಿವೆ. ಈ ವರದಿಯಲ್ಲಿ 25ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳು, 17ಎ ಅಡಿಯಲ್ಲಿ ಸಂಗ್ರಹಿಸಿರುವ ವರದಿ, ಆಡಿಯೋ, ವಿಡಿಯೋ, ಎಫ್‌ಎಸ್ಎಲ್ ವರದಿಗಳು, ದಾಖಲೆಗಳ ಸಂಗ್ರಹದ ಹಾರ್ಡ್ ಡಿಸ್ಕ್, ಸಿಡಿ, ಪೆನ್ ಡ್ರೈವ್ ಗಳು, ವಿಜಯನಗರದ 14 ಸೈಟ್ ಗಳು, ಕೆಸರೆಯ ಸರ್ವೇ ನಂ.464ರ 3.16 ಎಕರೆ ಭೂಮಿಯ ಮಾಹಿತಿ, ಆರ್‌ಟಿಸಿ, ಭೂ ಪರಿವರ್ತನೆ, ಮೂಲ ಮಾಲೀಕರ ಬಳಿಯದಾಖಲೆಗಳು, ಕೈ ಬದಲಾವಣೆಯಾದ ದಾಖಲೆಗಳ ಸಂಗ್ರಹಗಳು ಇವೆ.

ಅಲ್ಲದೆ, ಮುಡಾದಲ್ಲಿ ಯಾವ, ಯಾವ ಹಂತದಲ್ಲಿ ಪತ್ರ ವ್ಯವಹಾರ ನಡೆದಿದೆ, ಯಾವ, ಯಾವ ಅಧಿಕಾರಿಗಳು ಸೈಟ್ ಹಂಚಿಕೆಗೆ ಸಹಿ ಹಾಕಿದ್ದರು, 1994ರಿಂದ 2024ರವರೆಗಿನ ಎಲ್ಲಾ ಮಾಹಿತಿಗಳ ಸಂಗ್ರಹ, ಹಿಂದಿನ ಆಯುಕ್ತರುಗಳು, ಅಧ್ಯಕ್ಷರು, ಎಂಜಿನಿಯರ್ ಗಳು, ನಗರ ಯೋಜನಾ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ತಹಸೀಲ್ದಾರ್‌ಗಳು, ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು, ಅಂದಿನ ಎಡಿಸಿ ಅವರಹೇಳಿಕೆಗಳು, ದೂರುದಾರ ಸ್ನೇಹಮಯಿ ಕೃಷ್ಣರಿಂದ ಸಂಗ್ರಹಿಸಲಾದ ದಾಖಲೆಗಳು,ಆರೋಪಿತರಾದ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾರಾಟ ಮಾಡಿದ್ದ ದೇವರಾಜು ಹೇಳಿಕೆಗಳನ್ನು ಆಧರಿಸಿ ಸಿದ್ಧ ಗೊಂಡಿರುವ ತನಿಖಾ ಪ್ರಗತಿ ವರದಿಯನ್ನು ಲೋಕಾಯುಕ್ತ ಕೋರ್ಟ್‌ಗೆ ಸಲ್ಲಿಸಿದ್ದಾರೆ.

Leave a Reply