ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳನ್ನು ಪೂರೈಸುತ್ತಿದೆ. ಹುಸಿ ಭರವಸೆಯೊಂದಿಗೆ ಅಧಿಕಾರ ಹಿಡಿದು ಆಡಳಿತ ನಡೆಸುವಲ್ಲಿ ವೈಫಲ್ಯ ಕಂಡಿದ್ದು ಸಾಮಾನ್ಯ ಜನರ ಜೀವನವನ್ನು ನರಕವನ್ನಾಗಿಸಿದೆ ಎಂದು ಕೆಪಿಸಿಸಿ ವಕ್ತಾರ ಮಂಜುನಾಥ ಅದ್ದೆ ವಾಗ್ದಾಳಿ ನಡೆಸಿದ್ದಾರೆ.
ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಆಳುವ ಸರ್ಕಾರಗಳಿಗೆ ಜನಸಾಮಾನ್ಯರ ಪ್ರಶ್ನೆಗಳು ಎಂಬ ವಿಷಯದ ಮೇಲೆ ಯಲಹಂಕ ಕ್ಷೇತ್ರ ಕಾಂಗ್ರೆಸ್, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, 2013 ಹಾಗೂ 2018ರ ಭರವಸೆಗಳಂತೆ ಜಿಡಿಪಿಯು ಹೆಚ್ಚಳವಾಗಿದೆಯೆ? ಯುವಕರು ಉದ್ಯೋಗ ಪಡೆದರೆ? ಮಹಿಳೆಯರು ಸುರಕ್ಷತೆಯಿದಿಂದ್ದಾರೆಯೆ? ಎಂದು ಪ್ರಶ್ನಿಸಿದರು.
ರೈತರು ತಮ್ಮ ಉತ್ಪನ್ನಗಳಿಗಾಗಿ ನ್ಯಾಯಯುತ ಬೆಲೆ ಪಡೆದರೆ? ಕಪ್ಪು ಹಣ ಪ್ರತಿ ಕುಟುಂಬಕ್ಕೆ ತಲುಪಿತೆ? ಪೆಟ್ರೋಲ್, ಡೀಸೆಲ್ ಬೆಲೆ 50 ರೂಪಾಯಿಗಳನ್ನು ತಲುಪುವಂತೆ ನಿಯಮಗಳು ಇವೆಯೆ? ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸಿದೆಯೆ? ಇಂಥ ನೂರಾರು ಪ್ರಶ್ನೆಗಳಿಗೆ ಆಳುವ ಸರ್ಕಾರಗಳು ಉತ್ತರಿಸಬೇಕಿದೆ ಎಂದರು.
ಅಧಿಕಾರ ಹಿಡಿದ ನೂರು ದಿನಗಳಲ್ಲಿ ವಿದೇಶಿ ಬ್ಯಾಂಕ್‍ಗಳ ಕಪ್ಪು ಹಣವನ್ನು ತಂದು ದೇಶದ ಪ್ರತಿ ಕುಟುಂಬಕ್ಕೂ ತಲಾ 15 ಲಕ್ಷ ರೂ.ಗಳಂತೆ ಹಂಚುತ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು 2014ರ ಲೋಕಸಭೆ ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಆದರೀಗ ದೇಶದಲ್ಲಿ 37 ಕೋಟಿ ಯುವ ಜನರಿಗೆ ಉದ್ಯೋಗ ಇಲ್ಲದಂತಾಗಿದೆ. ಬುರುಡೆ ಬುಲೆಟ್ ಟ್ರೈನ್ ಏನಾಯಿತು? ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ ಎಂದರು.
ಸಿಲಿಂಡರ್ ಬೆಲೆ 480 ರೂ. ಇದ್ದಾಗ ಮೋದಿ-ಅಮಿತ್ ಜೋಡಿ ಸಿಲಿಂಡರ್ ಹೊತ್ತು ಪ್ರದರ್ಶಿಸಿದ್ದರು. ಪೆಟ್ರೊಲ್ ಡಿಸೇಲ್ ಬೆಲೆ 50 ರ ಗಡಿ ದಾಟದು ಎಂದಿದ್ದರು. ಇದೀಗ, ಇಂಧನ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ ಜೊತೆಗೆ ಜಿಎಸ್‌ಟಿ ಬರೆ ಎಳೆದಿದ್ದಾರೆ. ಜೊತೆಗೆ ದೇಶದಲ್ಲಿ ಶೇ.24ರಷ್ಟು ವಸತಿ ವಂಚಿತರಿದ್ದಾರೆ ಇಂತಹ ಬಡ, ಜನಸಾಮಾನ್ಯರ ಪಾಡೇನು ಎಂದರು.
ದೇಶದ ರೈತರ ಖಾಸಗಿ ಸಾಲ 1,60,000 ಕೋಟಿ ಹೆಚ್ಚಾಗಿದೆ. “ಮೇಕ್ ಇನ್ ಇಂಡಿಯಾ” ಸ್ಮಾರ್ಟ್ ಸಿಟಿಗಳ ಕಥೆ ಏನಾಯಿತು? ಮಹಿಳೆ, ಮಕ್ಕಳು, ಎಸ್‍ಸಿ-ಎಸ್‍ಟಿ, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಮೀಸಲಿದ್ದ ಅನುದಾನ 2012-13ರಲ್ಲಿ 53,11,000 ಲಕ್ಷ ಕೋಟಿಗಳು. ಮೇಲಿನವರ ಅಭಿವೃದ್ಧಿಯ ಸೂಚ್ಯಂಕದ ಪ್ರಕಾರ ಏರಬೇಕಿದ್ದ ಅನುದಾನ ಇಂದು ಶೇ. 29ರಷ್ಟು ಕಡಿತಗೊಂಡಿದೆ ಎಂದರು.
ಸುಳ್ಳನ್ನೆ ಪ್ರಣಾಳಿಕೆ ಮಾಡಿಕೊಂಡಿರುವ ಕೇಂದ್ರ-ರಾಜ್ಯ ಸರ್ಕಾರಗಳು ದುಡಿಯುವ ಜನರನ್ನು ಬಡತನಕ್ಕೆ ತಳ್ಳಿ ಅದಾನಿ, ಅಂಬಾನಿಯಂತಹ ಬಂಡವಾಳಿಗರ ಸಂಪತ್ತನ್ನು ಲಕ್ಷಾಂತರ ಕೋಟಿಗಳಷ್ಟು ಹಿಗ್ಗಿಸಿದ್ದಾರೆ. ಇದೇ ಇವರ ಎಂಟು ವರ್ಷಗಳ ಸಾಧನೆ. ಇವರ ಸುಳ್ಳು ಅರಿಯುವ ಕಾಲ ಈಗ ಸನ್ನಿಹಿತವಾಗಿದೆ. ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಲಹಂಕ ಕ್ಷೇತ್ರ ಕಾಂಗ್ರೆಸ್ ಮುಖಂಡ ಕೇಶವ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಶ್ರೀನಿವಾಸ್, ಜಿ.ಪಂ.ಮಾಜಿ ಅಧ್ಯಕ್ಷ ಜಯರಾಮಯ್ಯ, ರೈತ ಮುಖಂಡರು ಆಳುವ ಸರ್ಕಾರಗಳ ವೈಫಲ್ಯಗಳ ಬಗ್ಗೆ ವಿವರಿಸಿದರು.




