ನಮ್ಮ ಮಿತಿಯಲ್ಲಿ ಕ್ರಿಯಾಶೀಲರಾಗೊಣ, ಕರ್ನಾಟಕವನ್ನು ಉಳಿಸೋಣ

3 years ago

ಗೆಳೆಯರೇ ಕ್ರಿಯಾಶೀಲರಾಗೋಣ:

ಕರ್ನಾಟದಲ್ಲಿನ ಭ್ರಷ್ಟಾಚಾರಗಳಿಗೆ ಕೊನೆಯೇ ಇಲ್ಲ. ನೋಟುಗಳ ರಾಶಿ ರಾಶಿ ಸಿಕ್ಕಿದೆ. ಸಿಕ್ಕದ್ದು ಇನ್ನೆಷ್ಟಿರಬಹುದು ಊಹಿಸಲಾಗದು. ಒಬ್ಬ ಕಂಟ್ರಾಕ್ಟುದಾರರಂತೂ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಈ ಭ್ರಷ್ಟಾಚಾರವು ಲೈಂಗಿಕತೆಯಿಂದ ತೊಡಗಿ ಆರ್ಥಿಕತೆಯವರೆಗೆ ವಿಕಾರವಾಗಿ ಹಬ್ಬಿದೆ. ಧಾರ್ಮಿಕ ಅಸಹಿಷ್ಣುತೆ ಸರ್ವವ್ಯಾಪಿಯಾಗಿದೆ. ಜನಸಮುದಾಯದ ಸಾಂಸ್ಕೃತಿಕ ಆಶಯಗಳನ್ನು ಕುರೂಪಗೊಳಿಸಲಾಗಿದೆ. ಸಮುದಾಯಗಳನ್ನು ವಿವಿಧ ತಂತ್ರಗಳ ಮೂಲಕ ಕೋಮುವಾದಕ್ಕೆ ಒಳಪಡಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಗಳು ನಡೆಯುತ್ತಲೇ ಇವೆ. ಮಠಾಧೀಶರುಗಳೆಲ್ಲ ತತ್ವಬೋಧನೆ ಬಿಟ್ಟು ಕ್ಷುದ್ರ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಸಾಂಸ್ಕೃತಿಕ ಸಂಘ ಸಂಸ್ಥೆಗಳು ಪತನಗೊಂಡಿವೆ. ಶಿಕ್ಷಣ ಸಂಸ್ಥೆಗಳು ತಮ್ಮ ಮಹತ್ವವನ್ನು ಕಳೆದುಕೊಂಡಿವೆ. ಬಲಿಷ್ಠ ಜಾತಿಗಳು ಹಿಂದುಳಿದ ಮತ್ತು ದಲಿತರಿಗೆ ನ್ಯಾಯವಾಗಿ ಸಿಗಬೇಕಾದ್ದನ್ನು ತಾವೇ ತಿಂದು ತೇಗುತ್ತಿವೆ. ರಾಜಕೀಯ ಭಾಷಣಗಳು ಪಂಪ, ಬಸವ,ಅಕ್ಕ ಬಳಸಿದ ಕನ್ನಡವನ್ನು ಕಳಂಕಿತಗೊಳಿಸಿವೆ. ಕರ್ನಾಟಕಕ್ಕೆ ಆಗಾಗ ಭೇಟಿ ನೀಡುತ್ತಿರುವ ಪ್ರಧಾನಿಗಳಾಗಲೀ, ಗೃಹಮಂತ್ರಿಗಳಲಾಗಲೀ ಇವುಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

ಇಂಥದ್ದರಿಂದ ರಾಜ್ಯವನ್ನು ಪಾರು ಮಾಡಲು ನಮಗಿರುವ ಏಕೈಕ ಅವಕಾಶವೆಂದರೆ ಚುನಾವಣೆ. ಹಣ, ಜಾತಿ, ಅಧಿಕಾರ, ಮತ್ತಿತರ ಅಂಶಗಳು ಚುನಾವಣೆಗಳನ್ನು ನಿಯಂತ್ರಿಸಿರುವುದು ಹೌದಾದರೂ ಸದ್ಯಕ್ಕೆ ಅದೊಂದೇ ನಮಗಿರುವ ಬೆಳಕಿಂಡಿ. ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿರುವಾಗ ಈ ಮಣ್ಣಿನ ಮೇಲೆ ಪ್ರೀತಿ ಇರುವ ಯಾರೇ ಆದರೂ ಸುಮ್ಮನಿರಬಾರದು. ಸದ್ಯಕ್ಕೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ, ಜನರಿಗೆ ಕ್ರೂರವಾದ ಸತ್ಯಗಳನ್ನು ತಲುಪಿಸಲು ಕ್ರಿಯಾಶೀಲರಾಗೋಣ. ಪ್ರಭುತ್ವದ ಜೊತೆ ಹೋಗುವವರು ಹೋಗಲಿ. ಅವರನ್ನು ಸದ್ಯಕ್ಕೆ ಮರೆತುಬಿಡೋಣ. ಆದರೆ ನಮ್ಮ ನಮ್ಮ ಸಾಧ್ಯತೆಗಳ ಬಗ್ಗೆ ಯೋಚಿಸಿ, ನಮ್ಮ ಮಿತಿಯಲ್ಲಿ ಕ್ರಿಯಾಶೀಲರಾಗೊಣ, ಕರ್ನಾಟಕವನ್ನು ಉಳಿಸೋಣ.

– ಪ್ರೊ. ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸರು

Leave a Reply