ಶಿಕ್ಷಣ ನೀತಿ ರಾಜ್ಯ ಸರ್ಕಾರದ ಹಕ್ಕಾಗಿರಲಿ

3 years ago

#education #policy #right #state #government #nep #ksnagaraj

ನೂತನ ಶಿಕ್ಷಣ ನೀತಿಯ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಹಿಂದೆ ನೂತನ ಶಿಕ್ಷಣ ನೀತಿಯನ್ನು ರಚಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜಕೀಯ ಪಕ್ಷದ ಅಭಿಪ್ರಾಯವನ್ನು ಕೇಳಿರಲಿಲ್ಲ. ಪೋಷಕರ ಅಭಿಪ್ರಾಯವನ್ನು ಕೇಳಿರಲಿಲ್ಲ. ಮೇಲಾಗಿ ಮಕ್ಕಳ ಮನಸ್ಸಿನಲ್ಲಿರಬಹುದಾದ ಭಾವನೆಗಳನ್ನು ಅರಿಯುವ ಪ್ರಯತ್ನವನ್ನೂ ಸಹ ನಡೆಸಲಿಲ್ಲ. ಕೇವಲ ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪುವಂತಹ ಮತ್ತು ಈ ನೆಲೆಗಟ್ಟಿನಲ್ಲಿ ಮಾತನಾಡಬಲ್ಲ ಬುದ್ಧಿಜೀವಿಗಳು ಮತ್ತು ಆಯ್ದ ಶಿಕ್ಷಣ ತಜ್ಞರನ್ನು ನೇಮಿಸಿಕೊಂಡು ತಮ್ಮ ಪಕ್ಷದ ಸಿದ್ಧಾಂತವನ್ನು ನೂತನ ಶಿಕ್ಷಣ ನೀತಿಯ ನಿರೂಪಣೆಗೆ ಆಧಾರವನ್ನಾಗಿ ಮಾಡಿಕೊಂಡಿತ್ತು. ಇದರಿಂದಾಗಿ ಸಾಕಷ್ಟು ಗೊಂದಲಗಳಾಗಿವೆ.

ದೇಶದ ಅನೇಕ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿಯನ್ನು ಅಲ್ಲಿನ ಸರ್ಕಾರಗಳು ಅನುಷ್ಠಾನಗೊಳಿಸಿದಿಲ್ಲ. ಈ ಮೊದಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಬಂಧಗಳ ವಿಚಾರದಲ್ಲಿ ಚರ್ಚೆಗಳಾಗಿ ಶಿಕ್ಷಣ ರಾಜ್ಯ ಸರ್ಕಾರದ ಹಕ್ಕಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಶಿಕ್ಷಣದ ಹಕ್ಕನ್ನು ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದೆ. ಶಿಕ್ಷಣ ನೀತಿಯನ್ನು ರೂಪಿಸಬೇಕಾದರೆ ಕೇಂದ್ರಕ್ಕಿಂತ ಆಯಾ ರಾಜ್ಯಗಳಿಗೆ ಹೆಚ್ಚಿನ ಅನುಭವವಿರುತ್ತದೆ. ಅಲ್ಲಿನ ಪ್ರಾದೇಶಿಕತೆ, ಇತಿಹಾಸ, ಚರಿತ್ರೆ ಮತ್ತು ಜನರ ಭಾವನೆಗಳು ಇದಕ್ಕೆ ಅನುಗುಣವಾಗಿ ಆಯಾ ರಾಜ್ಯದ ಮಕ್ಕಳಿಗೆ ಯಾವ ಶಿಕ್ಷಣವನ್ನು ನೀಡಬೇಕು, ಪಠ್ಯಪುಸ್ತಕದಲ್ಲಿ ಯಾವ ವಿಚಾರವಿರಬೇಕು ಎಂದು ತೀರ್ಮಾನಿಸಲು ಹೆಚ್ಚಿನ ಅನುಭವವು ಮತ್ತು ಜ್ಞಾನವು ಇರುತ್ತದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಲವಂತವಾಗಿ ನೂತನ ಶಿಕ್ಷಣ ನೀತಿಯನ್ನು ಹೇರುವಂತಹ ಪ್ರಯತ್ನ ನಡೆಸಬಾರದು.

ಇದು ರಾಜ್ಯದ ಹಕ್ಕಾಗಿರಲಿ. ಕರ್ನಾಟಕ ರಾಜ್ಯದಲ್ಲಿ ಪದೇ ಪದೇ ಪಠ್ಯಪುಸ್ತಕಗಳು ಮತ್ತು ಶಿಕ್ಷಣ ನೀತಿಯ ವಿಚಾರದಲ್ಲಿ ಬಂದಂತಹ ಸರ್ಕಾರಗಳು ತಮ್ಮ ತಮ್ಮ ವಿಚಾರಗಳನ್ನು ಅಳವಡಿಸುವಂತಹ ಸಂದರ್ಭಗಳು ಒದಗಿಬರಬಹುದು. ಈ ಹಿನ್ನಲೆಯಲ್ಲಿ ಶಾಶ್ವತವಾದಂತಹ ರಾಜಕೀಯೇತರ ಪಠ್ಯಪುಸ್ತಕ ರಚನಾ ಸಮಿತಿಯನ್ನು ನೇಮಕ ಮಾಡಲಿ. ಯಾವ ರೀತಿಯಲ್ಲಿ ಕೆ.ಪಿ.ಎಸ್.ಸಿ. ಮಾನವ ಆಯೋಗ ಮುಂತಾದವು ಇದೆಯೋ ಅದೇ ರೀತಿಯಲ್ಲಿ ಪಠ್ಯಪುಸ್ತಕಗಳ ರಚನಾ ಯಾವುದೇ ಸಿದ್ಧಾಂತವನ್ನು ಬಲವಂತವಾಗಿ ಹೇರದೇ ಇರುವ ಮತ್ತು ಮಕ್ಕಳ ಮನಸ್ಸಿನ ಮಾತುಗಳನ್ನೊಳಗೊಂಡ ಪಠ್ಯಪುಸ್ತಕಗಳನ್ನು ರಚಿಸುವಂತಹ ಸಮಿತಿ ರಚನೆಯಾಗಲಿ. ಪ್ರತಿ 10 ವರ್ಷಕ್ಕೊಮ್ಮೆ ಇದರ ಪರಿಷ್ಕರಣೆಯಾಗಲಿ. ಮಕ್ಕಳಿಗೆ ಧಾರ್ಮಿಕ ವಿಚಾರಗಳನ್ನು ತುಂಬುವುದಕ್ಕಿಂತ ವೈಜ್ಞಾನಿಕವಾದ ಮತ್ತು ಸಂಶೋಧನಾತ್ಮಕವಾದ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಹೇಳುವಂತಹ ಪ್ರಯತ್ನ ನಡೆಯಲಿ.

  • ಕೆ.ಎಸ್.ನಾಗರಾಜು, ಬೆಂಗಳೂರು

Leave a Reply