ಮನುಷ್ಯತ್ವ ಉಳ್ಳವರು ಮಾತ್ರವೇ ಜನರ ಬದುಕಿನ ಬಗ್ಗೆ ಮಾತನಾಡುತ್ತಾರೆ
ಬಿ.ಜೆ.ಪಿ.ಯ ನಾಯಕರುಗಳು ರಾಷ್ಟ್ರಮಟ್ಟದಿಂದ ಹಿಡಿದು ಗ್ರಾಮೀಣ ಪ್ರದೇಶದಲ್ಲಿನ ಪಂಚಾಯ್ತಿಯ ತನಕ ಕೇವಲ ಭಾವನಾತ್ಮಕವಾದಂತಹ ಮಾತುಗಳನ್ನಾಡುತ್ತಲೇ ಚುನಾವಣೆಯ ವಿಷಯವನ್ನು ನಿಗದಿಪಡಿಸುವ ಹಾಗಿದೆ.
ಇವರು ಯಾರು ಸಹ ಬದುಕಿನ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇಲ್ಲ. ಹಲಾಲ್ ಕಟ್ ಅಥವಾ ಜಟಕ ಕಟ್, ಮಾಂಸದ ವಿಚಾರ ಇವರಿಗೆ ಪ್ರಮುಖವಾಗಿಯೇ ಪ್ರಸ್ತಾಪವಾಗುತ್ತದೆ. ಅದು ಹಬ್ಬಗಳು ಬಂತೆಂದರೆ ಈ ಸುದ್ದಿ ದೊಡ್ಡದಾಗಿ ಸದ್ದು ಮಾಡುತ್ತದೆ. ಟಿಪ್ಪು ಸುಲ್ತಾನ್, ವೀರಸಾರ್ವಕರ್ ಮುಂತಾದಂತಹ ಹೆಸರುಗಳು ಇವರ ಪ್ರಚಾರದ ವಸ್ತುಗಳಾಗಿರುತ್ತದೆ. ಮಂದಿರ, ಮಸೀದಿ ಇವರ ಆದ್ಯತೆಯ ವಿಚಾರವಾಗಿರುತ್ತದೆ.
ಆಹಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದು ಜನರನ್ನು ಬಾಧಿಸುತ್ತಿರುವ ಸಂಗತಿ. ಇದರ ಬಗ್ಗೆ ಮಾತನಾಡುವವರು ಗತಿ ಇಲ್ಲ. 450/- ರೂಪಾಯಿಗಳಿಂದ ಅಡಿಗೆ ಅನಿಲ ಕಳೆದ 9 ವರ್ಷಗಳಲ್ಲಿ 1,100/- ತಲುಪಿದೆ. ಸಬ್ಸಿಡಿಯಂತೂ ನಿಂತು ಎಷ್ಟೋ ವರ್ಷಗಳಾಯಿತು. ಪೆಟ್ರೋಲ್, ಡಿಸೇಲ್ ದರಗಳು ಗಗನಕ್ಕೇರಿದೆ. ಇನ್ನು ನಿರುದ್ಯೋಗದ ಸಮಸ್ಯೆ ಬೆಟ್ಟದಂತೆ ಬೆಳೆದಿದೆ. ಪ್ರತಿನಿತ್ಯ ಒಂದಲ್ಲ ಒಂದು ಸಂಸ್ಥೆಗಳಿಂದ ಸಾವಿರಾರು ಮಂದಿಯ ಉದ್ಯೋಗವನ್ನು ಕಸಿದು ಮನೆಗೆ ಕಳುಹಿಸುತ್ತಿದ್ದಾರೆ.
ಹಣಕಾಸಿನ ಪರಿಸ್ಥಿತಿಯಂತೂ ಅಲ್ಲೋಲ್ಲ ಕಲ್ಲೋಲ್ಲ ಆಗಿ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಯಾಗುತ್ತಿಲ್ಲ. ಬಹುತೇಕ ಸಹಕಾರಿ ಬ್ಯಾಂಕ್‌ಗಳು ನಷ್ಟದ ಹಾದಿಯಲ್ಲಿದೆ. ಠೇವಣಿದಾರರಿಗೆ ಕಾಲ ಕಾಲಕ್ಕೆ ಬಡ್ಡಿಯನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಅನೇಕ ರೀತಿಯ ಒತ್ತಡಗಳಿಂದಾಗಿ ಸಾಮೂಹಿಕವಾದ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿ ಕರುಳು ಕಿತ್ತು ಬರುತ್ತಿದೆ. ಸಮಾಜದಲ್ಲಿ ಮೇಲು-ಕೀಳೆಂಬ ತಾರತಮ್ಯ ದಿನದಿಂದ ದಿನಕ್ಕೆ ಮನಸ್ಸುಗಳಲ್ಲಿ ವಿಷವಾಗಿ ಪರಿಣಮಿಸಿ ಅನೇಕ ರೀತಿಯ ಸಮಸ್ಯೆಗಳು, ಸಾವು, ನೋವುಗಳಿಗೆ ಕಾರಣವಾಗುತ್ತಿದೆ.
ಶುದ್ಧವಾದಂತಹ ಗಾಳಿ ದೊರೆಯದೆ ಎಲ್ಲೆಲ್ಲಿಯೂ ವಾತಾವರಣ ಕಲುಷಿತಗೊಂಡು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ. ಹದಗೆಟ್ಟ ರಸ್ತೆಗಳು, ವೈದ್ಯರಿಲ್ಲದ ಆಸ್ಪತ್ರೆಗಳು, ಶಿಕ್ಷಕರಿಲ್ಲದ ಶಾಲೆಗಳು, ನ್ಯಾಯದೊರೆಯದ ಕೆಲವು ಪೊಲೀಸ್ ಠಾಣೆಗಳು ಹೀಗೆ ಜನರನ್ನು ಹತ್ತು ಹಲವಾರು ರೀತಿಯಲ್ಲಿ ಬಾಧಿಸುತ್ತಿದೆ. ಆದರೆ ಇವರುಗಳಿಗೆ ಭಾವನಾತ್ಮಕವಾದಂತಹ ವಿಚಾರಗಳು ಮಾತ್ರವೇ ಕಣ್ಣಿಗೆ ಕಾಣುತ್ತವೆ. ಹೊಟ್ಟೆ ತುಂಬಿದ ಜನ ಸಮಯ ಕಳೆಯಲು ನಿಮ್ಮ ಭಾವನಾತ್ಮಕವಾದಂತಹ ಮಾತುಗಳಿಗೆ ಮರುಳಾಗಿ ನಿಮ್ಮ ಅನುಯಾಯಿಗಳಾಗಬಹುದು. ಆದರೆ ಹಸಿವಿನ ಪ್ರಶ್ನೆಯಿಂದ ಕಾಡುತ್ತಿರುವ ಹಸಿದ ಹೊಟ್ಟೆಗಳು ತನ್ನ ಬದುಕಿನ ಬಗ್ಗೆ ಚಿಂತಿಸುತ್ತಿವೆ. ಮನುಷ್ಯತ್ವ ಉಳ್ಳವರು ಮಾತ್ರವೇ ಜನರ ಬದುಕಿನ ಬಗ್ಗೆ ಮಾತನಾಡುತ್ತಾರೆ.
– ಕೆ.ಎಸ್. ನಾಗರಾಜ್, ಬೆಂಗಳೂರು



