ಮೂರು ಡಿಸಿಎಂ ಬೇಡಿಕೆ ಕೈಬಿಟ್ಟ ನಾಯಕರು

2 years ago

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಬೇಕಾದರೆ ಹೆಚ್ಚುವರಿಯಾಗಿ ಮೂವರು ಡಿಸಿಎಂಗಳನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ನ ಕೆಲವು ನಾಯಕರು ಹಿಡಿದಿದ್ದ ಬಿಗಿಪಟ್ಟು ಸಡಿಲಗೊಂಡಿದೆ.

ಹಾಲಿ ಇರುವ ಡಿಸಿಎಂ ಜೊತೆಗೆ ಪರಿಶಿಷ್ಟ ಜಾತಿ, ವರ್ಗ ಮತ್ತು ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಮಾನ್ಯತೆ ನೀಡುವ ದೃಷ್ಟಿಯಿಂದ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ಮಂಡಿಸಲಾಗಿದ್ದ ಬೇಡಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.

ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಇದು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕ್ರಿಯೆ ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈ ಕಟ್ಟಿ ಹಾಕುವ ತಂತ್ರ ಎಂದೇ ವ್ಯಾಖ್ಯಾನಿಸಲಾಗಿತ್ತು.

ಈ ಕುರಿತು ನಡೆಯುತ್ತಿದ್ದ ವಿದ್ಯಮಾನಗಳು ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ನಡೆಸಿದ ಪ್ರಮುಖ ನಾಯಕರು ಸದ್ಯಕ್ಕೆ ಹೈಕಮಾಂಡ್ ಮುಂದೆ ಈ ಬೇಡಿಕೆ ಸಲ್ಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸದ್ಯ ನಮ್ಮ ಎಲ್ಲರ ಗಮನ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದಾಗಿದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಯಾವುದೇ ಬೇಡಿಕೆಯನ್ನು ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅವಕಾಶ ವಂಚಿತ ಸಮುದಾಯಗಳಿಗೆ ಉನ್ನತ ಹುದ್ದೆ ಸಿಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗಾಗಿ ಆಗ್ರಹ ಮುಂದುವರಿಸಲಾಗುವುದು ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂತ್ರಿಗಳನ್ನು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೇಮಿಸಲಾಗಿದೆ. ಇದಕ್ಕೆ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ನನ್ನ ಜೊತೆಗೂ ಮಾತನಾಡಿದ್ದಾರೆ. ಪಕ್ಷದ ಪ್ರಮುಖರಿಗೂ ತಮ್ಮ ಅಭಿಪ್ರಾಯ ರವಾನಿಸಿದ್ದಾರೆ. ಎಲ್ಲವೂ ಪಕ್ಷದ ಆಂತರಿಕ ವಿದ್ಯಮಾನಗಳಾಗಿದ್ದು, ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಈ ಬಾರಿ ರಾಜ್ಯದಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡುವಂತೆ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತಂತೆ ಅವರು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಇದರ ಜೊತೆಯಲ್ಲಿ ಇನ್ನು ಎರಡು ಮೂರು ಹೆಸರುಗಳು ಪರಿಶೀಲನೆಯಲ್ಲಿದ್ದು ಅವುಗಳನ್ನು ಹೈಕಮಾಂಡ್ ಗೆ ಸಲ್ಲಿಸಲಾಗುವುದು ಎಂದರು.

ಹೈಕಮಾಂಡ್ ಈ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿ, ಸಮೀಕ್ಷೆ ಮಾಡಲಿದೆ. ಸಮೀಕ್ಷೆಯಲ್ಲಿ ಯಾರ ಪರವಾಗಿ ಹೆಚ್ಚು ಒಲವು ಸಿಗಲಿದೆಯೋ ಅವರಿಗೆ ಟಿಕೆಟ್ ಸಿಗಲಿದೆ. ಈ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.

Leave a Reply