ಚಿತ್ರದುರ್ಗ: ಜನಸಮುದಾಯ, ತಳಸಮುದಾಯದ ಸರ್ಕಾರಿ ನೌಕರರು ಜನಸಮುದಾಯದ ಪರವಾಗಿ ನಿಲ್ಲದಿದ್ದರೆ ಅವರ ಮಕ್ಕಳು ಅವರ ಕಣ್ಣಮುಂದೆಯೆ ಬಿಕಾರಿಗಳಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಸ್.ಸಿ, ಎಸ್.ಟಿ. ನೌಕರರ ಸಂಘದ ರಾಜ್ಯ ಅಧ್ಯಕ್ಷ ಡಿ.ಚಂದ್ರಶೇಖರ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ರೈತ, ಕಾರ್ಮಿಕರು ಮತ್ತು ಸರ್ಕಾರಿ ನೌಕರರ ಸವಾಲುಗಳು ವಿಷಯದ ಕುರಿತು ಮಾತನಾಡಿದ ಅವರು, ಯಾವುದೇ ಮಾಧ್ಯಮಗಳು ನಮ್ಮ ಕೈಯಲ್ಲಿ ಇಲ್ಲ. ಒಂದು ಲಕ್ಷ ಜನ ಪರಿಶಿಷ್ಟ ಜಾತಿ, ಪಂಗಡದವರಿದ್ದಾರೆ. ಒಂದು ದಿನದ ವೇತನ 25 ಕೋಟಿಯಾಗುತ್ತದೆ. ದಲಿತ ಒಕ್ಕೂಟಗಳು, ಮಾನವ ಬಂಧುತ್ವ ವೇದಿಕೆ ಸೇರಿ ಒಂದು ಮಾಧ್ಯಮ ತೆರೆಯಬೇಕು. ಇದಕ್ಕೆ 25 ಕೋಟಿಯನ್ನು ಕೊಡುತ್ತೇವೆ ಎಂದರು.
ಸರ್ಕಾರಿ ನೌಕರರಿಗೆ ಸಮಸ್ಯೆಯಾದರೆ ನ್ಯಾಯ ಸಿಗಲ್ಲ. ಬಹುತೇಕ ನ್ಯಾಯಮೂರ್ತಿಗಳು ಮೀಸಲಾತಿ ವಿರೋಧಿಗಳಾಗಿದ್ದಾರೆ. ಒಂದು ಸೆಕೆಂಡ್ ಕೇಸ್ ನಡೆಸಲು 20 ಲಕ್ಷಗಟ್ಟಲೇ ಕರ್ಚಾಗುತ್ತಿದೆ. ಪರಿಶಿಷ್ಟ ನೌಕರರ ಸಾವಿಗೆ ಸರ್ಕಾರಗಳು ಕಾರಣವಾಗಿವೆ. ಇಂದಿಗೂ ಇದರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದರು.
ಬಹುತೇಕ ಜನಪ್ರತಿನಿಧಿಗಳು ನಾಲಿಗೆಯನ್ನೇ ಕಳೆದುಕೊಂಡಿದ್ದಾರೆ. ಎಲ್ಲ ಮಾಹಿತಿಯನ್ನು ಕೊಟ್ಟರು ಮಾತನಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರು ರಾಜ್ಯದಲ್ಲಿ ಪರಿಶಿಷ್ಟ ನೌಕರರ ಸಂಖ್ಯೆ ಕೇವಲ 1 ಲಕ್ಷ. ಕೇವಲ 1.5 ನಷ್ಟು ಜನ ಮಾತ್ರ ನೌಕರಿಯಲ್ಲಿದ್ದಾರೆ ಎಂದರು.




