ರೈತರ ದಶಕಗಳ ಕನಸು ನನಸು
28 ಗ್ರಾಮಗಳ 12,503 ಎಕರೆ ಜಮೀನಿಗೆ 5,812 ಪಹಣಿ ಸೃಜಿಸಿ ದಾಖಲೆ ಸಿದ್ದಪಡಿಸಲಾಗಿದೆ
ರಾಜ್ಯಾದ್ಯಂತ ಶೇ. 80 ರಷ್ಟು ಆರ್ಟಿಸಿ ಜೊತೆಗೆ ಆಧಾರ್ ಜೋಡಣಾ ಕಾರ್ಯ ಮುಗಿದಿದೆ
ಕಂದಾಯ ಪ್ರಕರಣಗಳ ಶೀಘ್ರ ಇತ್ಯರ್ಥ, ಶೀಘ್ರದಲ್ಲೇ ಫೌತಿ ಖಾತೆ ಆಂದೋಲನ
ಮುನಿರತ್ನ ಅಪರಾಧಗಳಿಗೆ ಆರ್ ಅಶೋಕ್, ಕುಮಾರಣ್ಣನ ಕುಮ್ಮಕ್ಕು ಇದೆಯಾ?
ಚಿಕ್ಕಬಳ್ಳಾಪುರ: ಯಾರದ್ದೋ ಆಸ್ತಿ ಇನ್ನಾರಿಗೋ ನೋಂದಣಿಯಾಗುವುದನ್ನು ತಪ್ಪಿಸಲು ಕಂದಾಯ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಾರ್ಯವನ್ನು ಮಾಡಲಾಗುತ್ತಿದ್ದು, ಪ್ರಸ್ತುತ ಶೇ. 80 ರಷ್ಟು ಆಧಾರ್ ಜೋಡಣಾ ಕಾರ್ಯ ಮುಗಿದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ “ಜಿಲ್ಲೆಯ 28 ಜೋಡಿ ಗ್ರಾಮಗಳ ರೈತರಿಗೆ ಆರ್.ಟಿ.ಸಿ ಪಹಣಿ ವಿತರಣಾ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರ ಜಮೀನುಗಳ ಕಬಳಿಕೆಯನ್ನು ತಪ್ಪಿಸಲು ಆರ್.ಟಿ.ಸಿ ಪಹಣಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಶೇ.80 ರಷ್ಟು ಗುರಿ ಸಾಧನೆ ಆಗಿದೆ. ಶೀಘ್ರದಲ್ಲಿಯೇ ಶೇ.100 ಗುರಿ ಸಾಧನೆ ಆಗುವ ಭರವಸೆ ಇದೆ ಎಂದರು.
ಮಹಾರಾಜರು ಗ್ರಾಮದಲ್ಲಿ ಉನ್ನತ ಸೇವೆ ಸಲ್ಲಿಸಿದವರಿಗೆ ಉಚಿತವಾಗಿ ಇಡೀ ಗ್ರಾಮಗಳನ್ನೆ ನೀಡುತ್ತಿದ್ದರು. ಇಂತಹ ಇನಾಮ್ ಮೂಲಕ ಪಡೆದಿದ್ದ ಜಮೀನುಗಳಿಗೆ ಸರ್ವೆ ಕಾರ್ಯ ಆಗಿರಲ್ಲಿಲ್ಲ. ಹಿಂದಿನ ಚಾಲ್ತಾ ನಂಬರ್ ಗಳ ಆಧಾರದ ಮೇಲೆ ದಾಖಲೆಗಳು ಚಾಲ್ತಿಯಲ್ಲಿದ್ದವು. 1954 ಇನಾಮ್ ರದ್ದತಿ ಕಾಯ್ದೆ ಜಾರಿ ನಂತರ ಇನಾಮ್ತಿ ಜಮೀನಿನ ಹಿಂದಿನ ಕಂದಾಯ ದಾಖಲೆಗಳು ಮತ್ತು ಸರ್ವೆ ದಾಖಲೆಗಳು ತಾಳೆಯಾಗದೆ ಜಮೀನಿನ ಮಾಲೀಕರು ಬಹಳ ತೊಂದರೆ ಅನುಭವಿಸುವಂತಾಯ್ತು. ಜಮೀನು ವಿಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು, ಸಾಲ ಸೌಲಭ್ಯ ಪಡೆಯಲು ಅಭಿವೃದ್ಧಿ ಪಡಿಸಲು ತೊಂದರೆಯಾಯಿತು ಎಂದರು.
ಇಂತಹ ಜಟಿಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದಶಕಗಳಿಂದ ಪ್ರಯತ್ನಗಳು ನಡೆದರೂ ಯಶಸ್ಸು ಕಾಣಲು ಸಾಧ್ಯವಾಗಿರಲಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಭೂ ಮಾಪಕರುಗಳ ಶ್ರಮದಿಂದ ಹಾಗೂ ರೈತರ ಸಹಕಾರದಿಂದ ಇಂದು ಜೋಡಿ ಗ್ರಾಮಗಳ ರೈತರಿಗೆ ಪಹಣಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಲಾಗಿದೆ. 1954 ರಲ್ಲಿ ನಿಂತಿದ್ದ ಇನಾಂ ಜಮೀನು ವಹಿವಾಟುಗಳ ಚಕ್ರ ಇಂದಿನಿಂದ ಪುನರಾರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜೋಡಿಗ್ರಾಮಗಳಿಗೆ ಗೋಲ್ ನಕ್ಷೆ, ಟಿಪ್ಪಣಿ ಪುಸ್ತಕ, ಪ್ರಸ್ತುತ ಚಾಲ್ತಿಯಲ್ಲಿನ ಗ್ರಾಮ ನಕಾಶೆ ಸಿದ್ದಪಡಿಸಲು ಗ್ರಾಮಲೆಕ್ಕಾಧಿಕಾರಿಗಳು, ಭೂ ಮಾಪಕರು, ತಹಶೀಲ್ದಾರರು ಬಹಳ ಶ್ರಮವಹಿಸಿದ್ದಾರೆ. ಅವರ ಶ್ರಮದ ಫಲವಾಗಿ ಇಂದು ರೈತರಿಗೆ ಪಹಣಿ ಹಾಗೂ ಇತರ ಕಂದಾಯ ದಾಖಲೆಗಳು ಸಿಕ್ಕಿವೆ. ಜಿಲ್ಲೆಯ ವಿವಿಧ ತಾಲ್ಲೂಕುಗಳ 28 ಗ್ರಾಮಗಳ 12,503 ಎಕರೆ ಜಮೀನಿಗೆ 5,812 ಪಹಣಿಗಳನ್ನು ಸೃಜಿಸಲು ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಈ ಪೈಕಿ ಈಗಾಗಲೇ ಸಹಕಾರ ನೀಡಿರುವ 1,830 ರೈತರಿಗೆ ಇಂದು ಪಹಣಿಗಳನ್ನು ಇಂಡೀಕರಿಸಿ ವಿತರಿಸಲಾಗಿದೆ. ಇನ್ನೂಳಿದ 3982 ಪಹಣಿಗಳ ಜಮೀನುಗಳ ಮಾಲೀಕರು ಸಹಕಾರ ನೀಡಿದಲ್ಲಿ ಕೆಲವೇ ತಿಂಗಳುಗಳಲ್ಲಿ ಆ ರೈತರಿಗೂ ಪಹಣಿ ವಿತರಿಸುವ ಕಾರ್ಯ ಆಗಲಿದೆ ಎಂದರು.
ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ರೈತರು ಆತಂಕ ಪಟ್ಟು ತಕರಾರು ಹಾಕಿಕೊಂಡರೆ ನಿಮಗೂ ಹಾಗೂ ನಿಮ್ಮ ನೆರೆಹೊರೆಯ ಜಮೀನು ಮಾಲೀಕರಿಗೂ ತೊಂದರೆಯಾಗಲಿದೆ. ದಯಮಾಡಿ ಯಾವುದೇ ರೈತರು ತಕರಾರು ಉದ್ಭವ ಆಗಲು ಅವಕಾಶ ನೀಡದೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ತಮ್ಮ ದಾಖಲೆಗಳನ್ನುಮಾಡಿಸಿಕೊಳ್ಳಲು ಪ್ರಯತ್ನಿಸಬೇಕು. ಸರ್ಕಾರವೇ ತಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡಲು ಯತ್ನಿಸುತ್ತಿರುವಾಗ ಆ ಅವಕಾಶವನ್ನು ಉಳಿದ ರೈತರು ಬಳಸಿಕೊಳ್ಳಬೇಕು ಎಂದು ಕಂದಾಯ ಸಚಿವರು ಜೋಡಿಗ್ರಾಮಗಳ ರೈತರಲ್ಲಿ ಮನವಿ ಮಾಡಿದರು.
ಮತ್ತೆ ಫೌತಿ ಖಾತೆ ಆಂದೋಲನ: ಫೌತಿ ಖಾತೆಗೆ ಬಾಕಿ ಇರುವ 47 ಲಕ್ಷ ಸರ್ವೆ ನಂಬರುಗಳನ್ನು ಶೀಘ್ರ ವಿಲೇವಾರಿ ಮಾಡಲು ರಾಜ್ಯದಲ್ಲಿ ಮತ್ತೆ ಫವತಿ ಖಾತೆ ಆಂದೋಲನವನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಜಮೀನುಗಳ ದುರಸ್ತಿ ಮಾಡಿ ರೈತರಿಗೆ ಹೊಸ ಆರ್ಟಿ ಸಿ ಪಹಣಿಗಳನ್ನು ಸೃಜನೆ ಮಾಡಿಕೊಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಂದಾಯ ಇಲಾಖೆ ಹೊಸ ಆಪ್ ಮತ್ತಿತರ ತಂತ್ರಾಂಶಗಳನ್ನು ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ಭೂಮಿ ಸಮಸ್ಯೆಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಫವತಿ ಖಾತೆಗೆ ಬಾಕಿ ಇರುವ 47 ಲಕ್ಷ ಸರ್ವೆ ನಂಬರುಗಳನ್ನು ಮತ್ತೆ ಫವತಿ ಖಾತೆ ಆಂದೋಲನ ಆರಂಭ ಮಾಡುವ ಮೂಲಕ ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.
ಕಂದಾಯ ಪ್ರಕರಣಗಳ ಶೀಘ್ರ ಇತ್ಯರ್ಥ: ರಾಜ್ಯದ ವಿವಿಧ ಜಿಲ್ಲೆಗಳ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ 69,217 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಒಂದು ವರ್ಷದ ಮೀರಿದ ಪ್ರಕರಣಗಳು 59800. ಇನ್ನು ಐದು ವರ್ಷಕ್ಕಿಂತ ಹೆಚ್ಚಿನ ಅವಧಿ ದಾಟಿದ್ದ 32,787 ಪ್ರಕರಣಗಳಿದ್ದವು. 5 ವರ್ಷ ಮೀರಿದ ಪ್ರಕರಣಗಳ ಸಂಖ್ಯೆ ಈಗ 7,330 ಕ್ಕೆ ಇಳಿದಿದೆ. ಗರಿಷ್ಠ ಪ್ರಕರಣಗಳು ಅತಿ ಕಡಿಮೆ ಅವಧಿಯಲ್ಲಿ ವಿಲೇವಾರಿಯಾಗಿ ಈಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಸಂಖ್ಯೆ 27000 ಆಗಿದೆ ಎಂದರು. ಇನ್ನು ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಗರಿಷ್ಠ 90 ದಿನಗಳಲ್ಲಿ ವಿಲೇವಾರಿಯಾಗಬೇಕಾದ ಪ್ರಕರಣಗಳು ಈ ಹಿಂದೆ ಸರಾಸರಿ 212 ದಿನ ತೆಗೆದುಕೊಳ್ಳುತ್ತಿದ್ದವು. ಈಗ ಸರಾಸರಿ 82 ದಿನಗಳಲ್ಲಿ ವಿಲೇವಾರಿಯಾಗುತ್ತಿರುವುದು ಸರ್ಕಾರದ ಕ್ರಿಯಾಶೀಲತೆಗೆ ಸಾಕ್ಷಿ ಎಂದರು.
ರಾಜ್ಯದಲ್ಲಿ ಕಂದಾಯ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಮೊದಲ ಆದ್ಯತೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಪಕ್ರಿಯೆ ಪ್ರಗತಿಯಲ್ಲಿದೆ. ಈ ವರ್ಷದ ಕೊನೆಯ ವೇಳೆಗೆ ಹೊಸ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲದೇ 357 ಭೂ ಮಾಪಕರ ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇಲಾಖೆಯ ಕಾರ್ಯ ಚಟುವಟಿಕೆಗಳ ವೇಗ ಹೆಚ್ಚಿಸಲು 1,191 ಪರವಾನಗಿ ಹೊಂದಿದ ಭೂ ಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಹೊಸ ಭೂಮಾಪಕರ ಹುದ್ದೆಗಳ ಸೃಷ್ಟಿಗೂ ಸರ್ಕಾರದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದರು.
ಕಳೆದ ವರ್ಷದಲ್ಲಿ 38 ಲಕ್ಷ ರೈತರಿಗೆ ಯಾವುದೇ ಮಧ್ಯವರ್ತಿಗಳ ಪಾತ್ರವಿಲ್ಲದೆ 4200 ಕೋಟಿ ರೂಪಾಯಿಗಳ ಬರ ಪರಿಹಾರ ಹಣವನ್ನು ನೇರವಾಗಿ ರಾಜ್ಯದ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ಮುಂದಿನ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸ ತಾಲ್ಲೂಕುಗಳಾದ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಿಗೆ ಆಡಳಿತ ಕೇಂದ್ರದ ಕಟ್ಟಡ ಪ್ರಜಾಸೌಧವನ್ನು ಮಂಜೂರು ಮಾಡಲಾಗುವುದು ಎಂದರು. ರಾಜ್ಯದಲ್ಲಿ ಒಟ್ಟು 14 ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದೆ. ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು. ಮುಂದಿನ ನಾಲ್ಕು ವರ್ಷಗಳಲ್ಲಿ ದರಕಾಸ್ತಿಗೆ ಸಂಬಂಧಿಸಿದ 8 ರಿಂದ 11 ಲಕ್ಷ ರೈತರ ಸರ್ವೆ ನಂಬರುಗಳು ಹಾಗೂ ಖಾಸಗಿ ಹಿಡುವಳಿದಾರರ ಸರ್ವೆ ನಂಬರುಗಳೂ ಸೇರಿದಂತೆ ಒಟ್ಟು 60 ಲಕ್ಷ ಪಹಣಿಗಳನ್ನು ಸೃಜನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಶಾಸಕರಾದ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಅರಪ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜೋಡಿಗ್ರಾಮಗಳ ರೈತರು ಮುಂತಾದವರು ಹಾಜರಿದ್ದರು.




