ಬೆಂಗಳೂರು: ಕಳೆದ ಡಿಸೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರ 6 ಬಾರಿ ಅಡುಗೆ ಅನಿಲದ ದರ ಪರಿಷ್ಕರಣೆ ಮಾಡಿದೆ. ಕೇವಲ 3 ತಿಂಗಳ ಅವಧಿಯಲ್ಲಿ ಇದರಿಂದಾಗಿ ಒಟ್ಟು ₹225 ದರ ಏರಿಕೆಯಾಗಿದೆ ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ವಾಗ್ದಾಳಿ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರ ಅಡುಗೆ ಅನಿಲದ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಮುಂತಾದ ಅಗತ್ಯ ವಸ್ತುಗಳ ಮೇಲಿನ ದುಬಾರಿ ದರ ಏರಿಕೆ ಖಂಡಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಮೌರ್ಯ ವೃತ್ತದ ಮಹಾತ್ಮಾ ಗಾಂಧಿ ಪ್ರತಿಮೆಯವರೆಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತಾಡಿದ ಅವರು, ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ ₹ 94 ತಲುಪಿದ್ದು, ದಿನ ನಿತ್ಯ ಕಚೇರಿಗೆ ಓಡಾಡುವ ದ್ವಿಚಕ್ರ ವಾಹನದವರು ತಿಂಗಳಿಗೆ ಕನಿಷ್ಠ ₹3000 ಪೆಟ್ರೋಲ್’ಗೆ ವ್ಯಯಿಸಬೇಕಾದ ಪರಿಸ್ಥಿತಿಯಿದೆ ಎಂದರು.
ಇಷ್ಟೇ ಅಲ್ಲದೆ ಅಗತ್ಯವಸ್ತುಗಳ ಸಾಗಾಟ ದರ ಹೆಚ್ಚಾಗಿದ್ದು, ಇದರಿಂದಾಗಿ ತರಕಾರಿ, ಹಾಲಿನ ದರಗಳು ಕೂಡ ಏರಿಕೆ ಹಾದಿಯಲ್ಲಿವೆ. ಪ್ರಧಾನಿ ಮೋದಿಯವರ ಪೊಳ್ಳು ‘ಅಚ್ಛೇ ದಿನದ’ ಭರವಸೆಯನ್ನು ನಂಬಿ ಮತ ನೀಡಿದ್ದ ಜನಸಾಮಾನ್ಯರು ಇಂದು ತಮ್ಮ ನಿರ್ಧಾರಕ್ಕಾಗಿ ಕೈ ಹಿಸುಕಿಕೊಳ್ಳುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಿಸಿದೆ. ಇಷ್ಟಾದರೂ ಕೂಡ ಜನರ ಕುರಿತು ಕಾಳಜಿವಹಿಸಲು ಸಮಯವಿಲ್ಲದೆ ಬಿಜೆಪಿ ಸರ್ಕಾರ ಹೊಸ ಸುಳ್ಳುಗಳೊಂದಿಗೆ ಚುನಾವಣಾ ಪ್ರಚಾರಗಳಲ್ಲಿ ನಿರತವಾಗಿದೆ ಎಂದು ಕಿಡಿಕಾರಿದರು.
ಈ ಎಲ್ಲಾ ದರ ಏರಿಕೆಗಳಿಂದ ಇದರ ಕಷ್ಟ ಅನುಭವಿಸುತ್ತಿರುವುದು ನಮ್ಮ ಗೃಹಿಣಿಯರು. ಕೇಂದ್ರ ಸರ್ಕಾರ ತನ್ನ ‘ಟ್ಯಾಕ್ಸ್ ಟೆರರಿಸಂ’ ಕಡಿಮೆ ಮಾಡಿ ಈ ಕೂಡಲೇ ಅಗತ್ಯ ವಸ್ತುಗಳ ದರ ಇಳಿಸದೇ ಹೋದರೆ, ಮುಂದಿನ ದಿನಗಳಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.



