ಧಾರವಾಡ: ಮಹಿಳೆಯು ಭಾರತದಲ್ಲಿ ತನ್ನದೇ ಆದ ಗೌರವ ಸ್ಥಾನಮಾನವನ್ನು ಹೊಂದಿದ್ದಾಳೆ. ಅವಳು ದೇವತೆ ಸಮಾನಳು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ. ಎಫ್. ದೊಡ್ಡಮನಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ, ಜಿಲ್ಲಾ ತಪಾಸಣಾ ಮತ್ತು ಮೇಲ್ವಚಾರಣಾ ಸಮಿತಿ, ಜಿಲ್ಲಾ ಐ.ಇ.ಸಿ ವಿಭಾಗಗಳು ಮತ್ತು ಕಿಟೆಲ್ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ, ಲಿಂಗ ಸಂವೇದನೆ ಮತ್ತು ಮಹಿಳಾ ಸಬಲೀಕರಣ ಘಟಕಗಳು ಸಂಯುಕ್ತವಾಗಿ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತು ಅರಿವು ಮೂಡಿಸುವ ಕಿಟಲ್ ಕಲಾ ಮಹಾವಿದ್ಯಾಲಯ ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.
ಭಾರತದಲ್ಲಿ ಎಲ್ಲಾ ನದಿಗಳಿಗೆ ಮಹಿಳೆಯರ ಹೆಸರನ್ನು ನಮ್ಮ ಪೂರ್ವಜರು ಇಟ್ಟಿದ್ದಾರೆ. ನಮ್ಮ ಸಂಪ್ರದಾಯದಲ್ಲಿ ಪೂಜ್ಯತೆಗೆ ಮಹಿಳೆ ಒಳಗಾಗಿದ್ದಾಳೆ. ಆದರೆ ಇಂದು ನಾವು ಮಹಿಳೆಯನ್ನು ಕಾಣುವ ರೀತಿ ಬದಲಾಗಿದೆ, ಅದು ತಪ್ಪು. ಭ್ರೂಣ ಹತ್ಯೆ ಮಹಾ ಪಾಪ ಎಂಬ ಅರಿವು ಎಲ್ಲರಲ್ಲಿಯೂ ಮೂಡಿಸುವ ಅಗತ್ಯತೆ ಇದೆ ಎಂದರು.
ಮುಖ್ಯ ಅಥಿತಿಗಳಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ, ವೈದ್ಯರು, ಸಮಾಜ ಇಬ್ಬರೂ ಕೈಜೋಡಿಸಿ ಹೆಣ್ಣನ್ನು ರಕ್ಷಿಸೋಣ. ಈಗಾಗಲೇ ಭಾರತದಲ್ಲಿ ಲಿಂಗಾನುಪಾತ ಬಹಳ ಕಡಿಮೆ ಇದೆ. ಇದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಎಚ್ಚರಿಕೆಯ ಅರಿವು ನಮಗಿರಲಿ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಿವಕುಮಾರ ಎಫ್. ಕುಂಬಾರ ಮಾತಾಡಿ, ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಕಾನೂನುಗಳು ಶಿಕ್ಷೆಯ ಪ್ರಮಾಣ, ಲಿಂಗ ಅಸಮಾನತೆಯ ಪರಿಣಾಮಗಳ ಕುರಿತು ತಿಳಿಸಿಕೊಟ್ಟರು. ಭ್ರೂಣಲಿಂಗ ಪತ್ತೆ ಒಂದು ಅಪರಾಧ. ಈ ಅಪರಾಧಕ್ಕೆ ಇರುವ ಶಿಕ್ಷೆಗಳೂ ಇದನ್ನು ಪ್ರೋತ್ಸಾಹಿಸುವವರಿಗೂ ಇರುವ ಕಾನೂನು ಶಿಕ್ಷೆಗಳನ್ನು ತಿಳಿಸಿಕೊಟ್ಟರು. ಎಲ್ಲರೂ ಸೇರಿ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳೋಣ. ಸುಂದರ ಭಾರತ ಕಟ್ಟೋಣವೆಂದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರೇಖಾ ಎಮ್. ಜೋಗುಳ ಇವರು ಹೆಣ್ಣು ಶಿಶು ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು. ಆಶಾ ಕಾರ್ಯಕರ್ತೆಯರು ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಗೀತೆಯನ್ನು ಹಾಡಿದರು. ಹಾಗೂ ಕಾಲೇಜಿನಲ್ಲಿ ಏರ್ಪಡಿಸಿದ ರಾಷ್ಟ್ರೀಯ ಕಾರ್ಯಕ್ರಮಗಳ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ತಾಲೂಕ ಆರೋಗ್ಯ ಅಧಿಕಾರಿ ಡಾ. ತನುಜಾ ಕೆ.ಎನ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ ಬಿ. ನ್ಯಾಮತಿ, ಡಾ. ಕವಿತಾ ಚಾಂದಗುಡೆ, ಡಾ. ವಿ.ಐ ಶೇಖ, ಬೋಧಕ, ಬೋಧಕೇತರ ಸಿಬ್ಬಂದಿಗಳು, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್. ಅಗಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಬಾಡಗಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




