ಕಸಾಪದಲ್ಲಿ ಕನ್ನಡ ನಾಡು-ನುಡಿಗೆ ಮಹತ್ವವೇ ಹೊರತು ರಾಜಕೀಯಕ್ಕಲ್ಲ: ಡಾ.ಮಹೇಶ ಜೋಶಿ

3 years ago

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೂ ಹಾಗೂ ಇತರ ಸಂಘಟನೆಗಳ ಮಧ್ಯ ಸಾಕಷ್ಟು ವ್ಯತ್ಯಾಸವಿದೆ. ಇದು ಕನ್ನಡಿಗರ ಅಸ್ಮಿತೆಯ ಚಿರಂಜೀವಿ ಸಂಸ್ಥೆ. ಇಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶವೇ ಇರುವುದಿಲ್ಲ. ರಾಜಕೀಯ ಮಾಡುವವರಿಗೆ ಅಥವಾ ಸಮಯ ಸಾಧಕರಿಗೆ ಇಲ್ಲಿ ಅವಕಾಶವೇ ಇರುವುದಿಲ್ಲ. ಇಂಥಹ ಅತೀ ಸೂಕ್ಷ್ಮತೆಯ ಸ್ಪಷ್ಟತೆಗಳಿರುವುದರಿಂದಲೇ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಜನರು ಅಪಾರವಾದ ವಿಶ್ವಾಸವಿಟ್ಟಿದ್ದಾರೆ. ಅದರ ಪ್ರತಿರೂಪವಾಗಿ ಇವತ್ತಿಗೆ ೨೦೬೫ ಜನರು ದತ್ತಿ ನಿಧಿಯನ್ನು ಇಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಅವರು ಹೆಮ್ಮೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೧ನೇ ಸಾಲಿನ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ೨೦೨೧ರ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳಿಗಾಗಿ ಈ ೨೦೨೧ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿವಿಧ ೪೯ ವಿಭಾಗಗಳ ದತ್ತಿ ಪ್ರಶಸ್ತಿಗೆ ೫೪ ಕೃತಿಗಳನ್ನು ಆಯ್ಕೆಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿಗಳನ್ನು ನೀಡುವ ಮೂಲಕ ಅಮೋಘವಾಗಿರುವ ಪರಂಪರೆ ಜಾರಿಯಲ್ಲಿದೆ. ಅನೇಕ ದತ್ತಿ ದಾನಿಗಳು ವಿವಿಧ ವಿಚಾರಗಳಿಗೆ ಅವರ ಭಾವನೆಗಳಿಗೆ ತಕ್ಕಂತೆ ದತ್ತಿ ನಿಧಿಯನ್ನು ಇಟ್ಟಿರುತ್ತಾರೆ. ದತ್ತಿ ದಾನಿಗಳ ಆಶಯಕ್ಕೆ ಧಕ್ಕೆ ಆಗದಂತೆ ಕಾಲಕಾಲಕ್ಕೆ ಸರಿಯಾಗಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಕೆಲವು ಮಾನದಂಡಗಳನ್ನು ಪಾಲಿಸುವ ಅವಶ್ಯಕತೆ ಇದೆ.

ವಾಸ್ತವದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಕ್ಷರ ಕೃತಿಗಳನ್ನು ನೀಡುವ ಮೂಲಕ ತಮ್ಮ ಸಾಧನೆಗೆ ಮುಂದಾಗಿರುವ ಎಲ್ಲರೂ ಪ್ರಶಸ್ತಿಗೆ ಯೋಗ್ಯರೇ. ಆದರೆ ಕೆಲವು ನಿಯಮಗಳು ಇರುವುದರಿಂದ ಎಲ್ಲರಿಗೂ ಸನ್ಮಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಸರ್ಕಾರದಿಂದ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಕಾನೂನು ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅಮೋಘವಾಗಿದೆ. ಇನ್ನು ಮುಂದೇ ಆಡಳಿತದ ಜೊತೆ, ನ್ಯಾಯಾಂಗ, ವ್ಯಾಪಾರ, ಉದ್ಯೋಗದಲ್ಲಿ ಕನ್ನಡ ಕಡ್ಡಾಯವಾಗಲಿದೆ ಎನ್ನುವ ವಿಶ್ವಾಸ ಪರಿಷತ್ತಿಗಿದೆ. ಜಿಲ್ಲಾ ನ್ಯಾಯಾಲಗಳಲ್ಲಿ ಕನ್ನಡದಲ್ಲೇ ನ್ಯಾಯದಾನ ಮಾಡಬೇಕು ಎನ್ನುವುದನ್ನು ಕಾನೂನಿನಲ್ಲಿ ಸೇರಿಸಲಾಗಿರವುದು. ಕನ್ನಡಕ್ಕೆ ಬಲ ತರುವ ನಿರೀಕ್ಷೆಯಲ್ಲಿ ಇದ್ದೆವೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಒಲವು ಬಯಕೆ ಹುಟ್ಟವಂತೆ ಮಾಡುವುದಕ್ಕೆ ಎಲ್ಲರೂ ಮುಂದಾಗಬೇಕು. ಇಂದು ದೊಡ್ಡ ದೊಡ್ಡಮನೆ, ಬಂಗಲೆ ಕಟ್ಟುವವರನ್ನು ನೋಡಿದ್ದೇನೆ. ಆದರೆ ಅದರಲ್ಲೊಂದು ಓದುವ ಕೊಠಡಿ ರಚಿಸುವುದಿಲ್ಲ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಉಳಿದಿಲ್ಲ. ಬೆಂಗಳೂರಿನಲ್ಲಿ ಹೆಚ್ಚಾಗಿ ಮಾತಾಡುವ ಮನೆಯಲ್ಲಿ ಕನ್ನಡದ ವಾತಾವರಣ ಇಲ್ಲದಾಗಿದೆ. ಕನ್ನಡದ ಸೊಗಡೆ ಇಲ್ಲದ ಸಂವಹನ ಭಾಷೆಯನ್ನು ಉಪಯೋಗಿಸುತ್ತಿರುವವರು ಕಾಣಲು ಸಿಗುತ್ತಿದ್ದಾರೆ. ನಮ್ಮ ಭಾಷೆಯನ್ನು ನಾವೇ ಬಳಸಿದಿದ್ದರೆ ಮುಂದಿನ ಪೀಳಿಗೆಗೆ ಏನನ್ನೂ ಕೊಟ್ಟಂತಾಗುವುದಿಲ್ಲ. ಪುಸ್ತಕಗಳು ಹೆಚ್ಚು ಹೆಚ್ಚು ಪ್ರಕಟವಾಗಬೇಕು. ಪ್ರಕಟಗೊಂಡಿರುವ ಎಲ್ಲ ಪುಸ್ತಕಗಳನ್ನು ಓದುವ ಸಂಸ್ಕೃತಿ ಹೆಚ್ಚಾದಾಗ ಮಾತ್ರ ಕನ್ನಡ ಉಳಿಯುವುದು ಬೆಳೆಯುವದು ಎಂದು ಅಭಿಪ್ರಾಯ ಪಟ್ಟರು.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಜಯರಾಂ ರಾಯಪುರ (ಭಾರತೀಯ ಕಂದಾಯ ಸೇವೆ-ಆದಾಯ ತೆರಿಗೆ) ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಾಧಕನಿಗೆ ಗೌರವ ಸರ್ಮಣೆ ಮಾಡುವುದು ಸಮರ್ಪಕವಾದ ಕಾರ್ಯ. ಪ್ರತಿಯೋರ್ವ ಕಲಾವಿದ, ಸಾಹಿತಿಗೆ ಗೌರವ ಸರ್ಮಣೆ ಮಾಡುವುದು ಯೋಗ್ಯ ಕಾರ್ಯ. ಈ ಮೂಲಕ ಸಮಾಜಕ್ಕೆ ತನ್ನದೇ ರೀತಿಯಲ್ಲಿ ಜವಾಬ್ದಾರಿಗಳನ್ನು ನೀಡುತ್ತಿರುವ ಸಾಹಿತಿಗಳು ತಮ್ಮ ಸಾಧನೆಗೆ ತಾವೇ ಕನ್ನಡಿ ಹಿಡಿಯುವುದಕ್ಕೆ ಕಾರಣವಾಗುತ್ತದೆ. ಭಾಷಾ ಮಾಧ್ಯಮದ ಗೋಜಲನ್ನು ಇನ್ನೂ ಸರಿ ಪಡಿಸುವುದಕ್ಕೆ ನಮ್ಮಿಂದ ಆಗಿಲ್ಲ. ಸರಕಾರಕ್ಕೆ ಈ ಬಗ್ಗೆ ಆಸಕ್ತಿ ಇದ್ದರೂ ನ್ಯಾಯಾಂಗದಲ್ಲಿ ಅಷ್ಟಾಗಿ ಸಹಕಾರ ಸಿಗುತ್ತಿಲ್ಲ. ಸರ್ಕಾರ ಭಾಷೆ ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಮುಂದಾದಾಗ ನ್ಯಾಯಾಂಗದಲ್ಲಿ ತಡೆಯಾಗುವುದು ನಾವೆಲ್ಲಾ ಅನುಭವಿಸುತ್ತಿದ್ದೇವೆ. ಭಾಷಾ ಮಾಧ್ಯಮಗಳಿಗೆ ಸಾಂವಿಧಾನಿಕ ರಕ್ಷಣೆ ಕೊಡಲೇ ಬೇಕು. ಸರಕಾರದ ಕೆಲಸಗಳನ್ನು ಪುಷ್ಟಿಕರಿಸದೇ ಇದ್ದಾಗ ಬಹುಶಃ ಮುಂದಿನ ದಿನಗಳಲ್ಲಿ ನಮ್ಮಲ್ಲಿ ಹುದುಗಿರುವ ಕನ್ನಡ ಅಂತ್ಯದ ಆತಂಕ ಸತ್ಯವಾಗಲಿದೆ. ಇಡೀ ಭಾರತದಲ್ಲಿ ಭಾಷಾ ಗೋಜಲು ಸರಿ ಮಾಡಲು ಸಾಂವಿಧಾನಿಕ ನಿಲುವು ಜಾರಿಯಾಗಬೇಕು. ಇದಕ್ಕೆ ನ್ಯಾಯಾಂಗದಲ್ಲಿ ಅಡ್ಡಿ ಬಂದರೆ ಅದಕ್ಕೂ ಮೀರಿದ ಕಾನೂನನ್ನು ಜಾರಿಯಾಗಬೇಕು ಎಂದರು.

ವಿವಿಧ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಅವರು ಮಾತನಾಡಿ ಸಾಹಿತ್ಯ ಕೃಷಿಯಲ್ಲಿ ತೊಡಗಿದವರಿಗೆ ದಿಟ್ಟತನ ಇರಬೇಕು. ಸಕಲ ಜೀವರಾಶಿಗಳ ಏಳಿಗೆಯ ಕುರಿತು ಚಿಂತನೆಗಳಿರುವ ಸೃಜನಶೀಲ ದಿಟ್ಟತನದ ಸಾಹಿತ್ಯ ರಚನೆಯಾಗಬೇಕು. ದೆಹಲಿಯ ಪಾರ್ಲಿಮೆಂಟ್ನಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಯವರಿಗಿಂತ ಮೊದಲು ಕನ್ನಡವನ್ನು ಮಾತನಾಡುವ ಮೂಲಕ ಕನ್ನಡದ ಮಹತ್ವವನ್ನು ಸ್ಥಳೀಯ ಭಾಷೆಯ ಮಹತ್ವವನ್ನು ಸಾರಿದವರು ಕನ್ನಡಿಗರು. ಕನ್ನಡ ಶಾಸ್ತ್ರೀಯ ಭಾಷೆಯಾಗಿದ್ದರೂ ಸೂಕ್ತ ಅನುದಾನ ಪಡೆಯುವಲ್ಲಿ ಆಗಿರುವ ತೊಡಕುಗಳನ್ನು ನಿವಾರಣೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿಯವರು ನೇತೃತ್ವ ವಹಿಸ ಬೇಕು ಎಂದು ವಿನಂತಿಸಿದರು.

ದತ್ತಿ ಪ್ರಶಸ್ತಿಗೆ ೨೮೦೦ ಪುಸ್ತಕಗಳು ಆಯ್ಕೆಗೆ ಬಂದಿದ್ದವು. ಅದರಲ್ಲಿ ೪೯ ವಿವಿಧ ದತ್ತಿ ವಿಭಾಗಕ್ಕಾಗಿ ೫೪ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದ್ದು ಎಲ್ಲಾ ಪುರಸ್ಕೃತರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ.ಚಂದ್ರಶೇಖರ ದಾಮ್ಲೆ, ಕಾವ್ಯ ಕಡಮೆ ಮತ್ತು ಬನ್ನೂರು. ಕೆ.ರಾಜು ತಮ್ಮ ಮನದಾಳದ ನುಡಿಗಳನ್ನು ಹಂಚಿ ಕೊಂಡರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜ ಅವರು ವಂದಿಸಿದರು. ಗೌರವ ಕೋಶಾಧ್ಯಕ್ಷರಾದ ಡಾ. ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರಪಂಚದಲ್ಲಿ ಯಾವ ಗಿಡಕ್ಕೆ ಹಣ್ಣು ಬಿಡುವುದೋ ಅದಕ್ಕೆ ಕಲ್ಲು ಹೊಡೆಯುವವರೇ ಜಾಸ್ತಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಭಿಮಾನದ ಸಂಸ್ಥೆ. ನಮ್ಮ ಹಿರಿಯರು ಸಾಕಷ್ಟು ಮುಂದಾಲೋಚನೆ ಇಟ್ಟುಕೊಂಡೆ ಕನ್ನಡ ಸಾಹಿತ್ಯ ಪರಿಷತ್ತು ಅಸ್ಥಿತ್ವಕ್ಕೆ ತಂದಿರುವುದು. ಅದಕ್ಕೆ ೧೦೮ ವರ್ಷವಾದರೂ ಯಾವುದೇ ಹಿಂಜರಿಕೆಯಿಲ್ಲದೆ ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಅಜರಾಮರ ಸಂಸ್ಥೆ. ಕನ್ನಡ ಸಾಹಿತ್ಯ ಪರಿಷತ್ತು ಎಂದೂ ಸಾವಿರದ, ಸಾವ ಬಾರದ ಚಿರಂಜೀವಿ ಸಂಸ್ಥೆ.. ಇಂತಹ ಸಂಸ್ಥೆಯ ವಿರುದ್ಧ ನಿರ್ಮಲಾ ಯಲಿಗಾರ್ ತಮ್ಮ ಸಿಬ್ಬಂದಿಗಳ ಜೊತೆಗೆ ಮೌನ ಆಚರಣೆ ಮಾಡುವ ಮೂಲಕ ಸಮಸ್ತ ಕನ್ನಡಿಗರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಮಾನ ಮಾಡಿದವರ ವಿರುದ್ಧ ಮೌನ ವಹಿಸುವ ಪ್ರಮೇಯವೇ ಇಲ್ಲ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಕನ್ನಡ ಸಾಹಿತ್ಯ ಪರಿಷತ್ತು ಭಿನ್ನಾಭಿಪ್ರಾಯಗಳನ್ನು ಸದಾ ಗೌರವಿಸುತ್ತಲೇ ಬಂದಿದೆ. ಸಲಹೆ ಸೂಚನೆ ನೀಡಲು ಇಲ್ಲಿ ಸರ್ವರಿಗೂ ಸ್ವಾಗತವಿದೆ. ಆದರೆ ಪ್ರತಿಭಟನೆಯ ರೀತಿ ಸಮರ್ಪಕವಾಗಿರ ಬೇಕು. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲವೇ ಇಲ್ಲ. ಭಾಷೆ, ನಾಡು-ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿ ರಕ್ಷಣೆಯ ಜವಾಬ್ದಾರಿ ಹೊಂದಿದ ಕನ್ನಡಿಗರ ಸ್ವಾಭಿಮಾನದ ಪರಿಷತ್ತಿಗೆ ಅವಮಾನ ಮಾಡಿದವ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗಿದೆಯೇ ಹೊರತು ಯಾವುದೇ ವೈಯಕ್ತಿಕ ಅಥವಾ ಇನ್ನಾವುದೋ ಕಾರಣಕ್ಕೆ ಅಲ್ಲ.
ಕೆಲವು ಸತ್ಯ ಸಂಗತಿಗಳನ್ನು ಮರೆಮಾಚಿ ಅನಾವಶ್ಯಕ ಪ್ರಚಾರ ಗಿಟ್ಟಿಸಿಕೊಳ್ಳುವುದರ ಜೊತೆ ಅನುಕಂಪದ ಗೀಳನ್ನು ಮುಂದಿಟ್ಟುಕೊಳ್ಳುವವರ ವಿರುದ್ಧ ಸುಮ್ಮನೆ ಕುಳಿತರೆ ಇದು ಕನ್ನಡಕ್ಕೆ ಮಾಡುವ ಅನ್ಯಾಯವಾದಂತೆ. ವಿಷಯಗಳನ್ನು ತಿರುಚಿ, ಸತ್ಯಾಂಶ ಮರೆಮಾಚುವ, ಸುಳ್ಳುಗಳನ್ನೇ ಸತ್ಯವೆಂದು ಸಾಧಿಸುವ ಪ್ರವೃತ್ತಿ ಇಲ್ಲಿ ಕೂಡ ಕಂಡು ಬರುತ್ತಿದ್ದು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಬದ್ದವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ, ಕ್ರಮ ಕೈಗೊಳ್ಳಲು ಹಿಂಜರೆಯುವುದಿಲ್ಲ ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾನೂನಾತ್ಮಕವಾದ ಹೆಜ್ಜೆಯನ್ನು ಇಟ್ಟಿದೆ ಎನ್ನುವ ಸ್ಪಷ್ಟನೆಯನ್ನು ಮಹೇಶ ಜೋಶಿ ನೀಡಿದರು.

Leave a Reply