ಕರ್ನಾಟಕವನ್ನು ಬಿಜೆಪಿ ಸುಭದ್ರಕೋಟೆ ಎಂದು ಸಾಬೀತು ಮಾಡಲಾಗುವುದು: ವಿಜಯೇಂದ್ರ

2 years ago

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವ ಮೂಲಕ ಕರ್ನಾಟಕ ಬಿಜೆಪಿಗೆ ಭದ್ರಕೋಟೆ ಮಾತ್ರವಲ್ಲದೆ ಸುಭದ್ರ ಕೋಟೆ ಎಂಬುದನ್ನು ಸಾಬೀತು ಮಾಡುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಯಾವಾಗಲೂ ಭದ್ರಕೋಟೆ. ಇದನ್ನು ಈ ಬಾರಿ ಸುಭದ್ರ ಕೋಟೆಯನ್ನಾಗಿ ಪರಿವರ್ತನೆ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದರು.

ನಮ್ಮ ಸೌಭಾಗ್ಯ ಎಂದರೆ ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗುವ ಸಂದರ್ಭದಲ್ಲಿ ನಮಗೆ ಜವಾಬ್ದಾರಿ ಸಿಕ್ಕಿದೆ. ಅಂತಹ ಕಾಲಘಟ್ಟದಲ್ಲಿ ನಾವು ಅಧಿಕಾರ ತೆಗೆದುಕೊಂಡಿದ್ದೇವೆ. ಪಕ್ಷ ಯಾವ ಸೂಚನೆಯನ್ನು ನೀಡುತ್ತದೆಯೋ ಅದರಂತೆ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಹೇಳಿದರು.

ಪಕ್ಷದ ವರಿಷ್ಠರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವಿಟ್ಟುಕೊಂಡು ಜವಾಬ್ದಾರಿಯನ್ನು ನೀಡಿದ್ದೇವೆ. ಯಾವ ಕಾಲಘಟ್ಟದಲ್ಲಿ ಹೊಣೆಗಾರಿಕೆ ಸಿಕ್ಕಿದೆ ಎಂಬುದು ಬಹಳ ಮುಖ್ಯ. ಅದನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಕನಸನ್ನು ನನಸು ಮಾಡುವ ಗುರಿ ತಮ್ಮ ಮುಂದೆ ಇದೆ ಎಂದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಶತಕೋಟಿ ಭಾರತೀಯರ ಕನಸಾಗಿತ್ತು. ಅದು ಇಂದು ನನಸಾಗುವ ಹಂತಕ್ಕೆ ಬಂದಿದೆ. ಮೋದಿಯವರ ಕಾಲಘಟ್ಟದಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇಂತಹ ಕಾಲಘಟ್ಟದಲ್ಲಿ ನಾನು ಪಕ್ಷದ ಸಾರಥ್ಯ ವಹಿಸಿಕೊಂಡಿರುವುದು ಪೂರ್ವಜನ್ಮದ ಪುಣ್ಯ. ಕಾರ್ಯಕರ್ತರ ಪರಿಶ್ರಮದಿಂದ ಈ ಬಾರಿ ನಾವು ಹೆಚ್ಚಿನ ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದರು.

ನಂತರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.

ದೇಶದ ಬಡಜನರು, ಸಾಮಾನ್ಯ ಜನರು, ರೈತರು ಸೇರಿದಂತೆ ಅನೇಕ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಪ್ರಧಾನಿ ಮೋದಿ ಅವರು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಪಿಎಂ ಕೃಷಿ ಸಮ್ಮನ್ ಯೋಜನೆ, ಪಿಎಂ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷ ಭೀಮ ಯೋಜನೆ, ಆಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಸ್ವಸಹಾಯ ಗುಂಪುಗಳಿಗೆ ಸಾಲ ಯೋಜನೆ, ಪಿಎಂ ವಿದ್ಯಾರ್ಥಿ ವೇತನ, ಆಯುಷ್ ಮಾನ್ ಕಾರ್ಡ್ ವಿತರಣೆ, ಜಲ್ ಜೀವನ್ ಮಿಷನ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಈ ಯೋಜನೆಗಳ ಬಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅದೇಷ್ಟೋ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಯೋಜನೆಗಳನ್ನ ಸದುಪಯೋಗ ಕೂಡ ಪಡಿಸಿಕೊಳ್ಳುತ್ತಿಲ್ಲ. ಇದರ ಬಗ್ಗೆ ಜನತೆಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ವಿಜಯೇಂದ್ರ ಸೂಚನೆ ನೀಡಿದರು.

ರಾಜ್ಯದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಬಳಿ ಎರಡು ವಾಹನಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹೇಗೆ ಯೋಜನೆಗಳನ್ನು ಪಡೆಯಬಹುದು ಎನ್ನುವುದನ್ನು ತಿಳಿಸಿಕೊಡಬೇಕು ಎಂದರು.

Leave a Reply