ಬೆಳಗಾವಿ: ರಾಜ್ಯದ ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡ, ಗಣಿತ, ವಿಜ್ಞಾನ ಹಾಗೂ ಸಮಾಜ ಶಾಸ್ತ್ರವನ್ನು ಬೋಧಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮೇಲ್ಮನೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿ.ಎಂ.ಫಾರೂಕ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಿಗೆ ಧಾರ್ಮಿಕ ಬೋಧನೆ ಮಾತ್ರವಲ್ಲದೆ ಸಾಮಾಜಿಕ ಬದುಕು ಕಟ್ಟಿಕೊಳ್ಳುವ ಇತರೆ ವಿಷಯಗಳ ಕುರಿತು ಬೋಧನೆ ಮಾಡಲಾಗುವುದು ಎಂದರು.
ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರಾಯೋಗಿಕ ಆಧಾರದ ಮೇಲೆ 2 ವರ್ಷಗಳು ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ ಹಾಗೂ ಇತರೆ ವಿಷಯಗಳ ಬಗ್ಗೆ ಸತತವಾಗಿ ಬೋಧಿಸಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ ಮತ್ತು ಪದವಿಯನ್ನು ರಾಜ್ಯ, ರಾಷ್ಟ್ರೀಯ ಮುಕ್ತ ಶಾಲೆಗಳ ಮೂಲಕ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಬಿಜೆಪಿಯ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬರಗಾಲ ಹಿನ್ನೆಲೆಯಲ್ಲಿ ರಾಜ್ಯದಿಂದ ಯಾವುದೇ ಕಾರಣಕ್ಕೂ ಮೇವು ಹೊರ ರಾಜ್ಯಕ್ಕೆ ಹೋಗಬಾರದು ಎಂದು ನಿಬಂಧನೆ ಹೇರಲಾಗಿದೆ ಎಂದರು.
ಮೇವಿನ ಕೊರತೆ ಉಂಟಾಗದಂತೆ ರೈತರಿಗೆ ಮೇವಿನ ಬೀಜ ವಿತರಿಸಲು 20 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬರ ಪರಿಹಾರ ಕಾರ್ಯಗಳಿಗಾಗಿ ಪ್ರಕೃತಿ ವಿಕೋಪ ಪರಿಹಾರ ನೀತಿಯಡಿ ಪ್ರತಿ ಬರಪೀಡಿತ ತಾಲ್ಲೂಕಿಗೆ 324 ಕೋಟಿ ರೂ.ಗಳನ್ನು ರಾಜದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಗೊಳಿಸಲಾಗಿದೆ ಎಂದರು.




