ನೈತಿಕ ಮೌಲ್ಯಗಳ ಮಾಂತ್ರಿಕ ಕನಕದಾಸರು

4 years ago

ವಿಶ್ವ ಮಹಾಚೇತನ, ಕೀರ್ತನೆಗಳ ಕತೃ, ಭಕ್ತಿ ಪಂಥದ ಪ್ರಮುಖ ರೂವಾರಿ, ಕರ್ನಾಟಕ ಸಂಗೀತದ ಬುನಾದಿಗೆ ನಾಂದಿ ಹಾಡಿದವರು ಕನಕದಾಸರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಇವರೊಬ್ಬರೇ ಶೂದ್ರದಾಸರು. ಹಾಗೆಯೇ  ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಹೌದು.

ಕನಕದಾಸರದು ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ. ಇವರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು ಬೀಜ ಮಂತ್ರದಂತೆ ಬಿತ್ತರಗೊಂಡಿವೆ. ಇಂತಹ ಅನೇಕ ಮೌಲ್ಯಗಳ ಸಂದೇಶ ಹೊತ್ತ ಕನಕದಾಸರು, ‘ಹೃದಯ ಹೊಲವನು ಮಾಡಿ, ತನುವ ನೇಗಿಲು ಮಾಡಿ, ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ’ಎನ್ನುವ ಚಿಂತನೆಯ ನೆಲೆಯಲ್ಲಿ ಲೋಕದ ಒಳಿತನ್ನು ಬಯಸಿದವರು.

ಯಾವುದೇ  ಜಾತಿ, ಮತ, ಪ್ರದೇಶ, ಭಾಷೆಗೆ ಸೀಮಿತವಾಗದ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಮೇಲ್ವರ್ಗದ ಪಂಕ್ತಿಗೆ ಮಾತ್ರ ಸೀಮಿತವಾದ ಭಕ್ತಿ ಪರಂಪರೆಯಲ್ಲಿ ಇವರು ಪ್ರವೇಶಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೂ,  ಚಕ್ರವ್ಯೂಹವನ್ನು ಭೇದಿಸಿದರು.  ಅಹಂಕಾರ, ಡಾಂಭಿಕತನ, ಭಕ್ತಿ ಶೂನ್ಯತೆಯಿಂದ ಕೂಡಿ ಭೋಗ ಪ್ರವೃತ್ತಿಯಲ್ಲಿ ತೇಲಾಡುತ್ತಿದ್ದವರಿಗೆ ಕಟುವಾಗಿ ಟೀಕಿಸಿದರು. ಭಕ್ತಿ ನಿಷ್ಠೆಗಳಿಲ್ಲದೆ ಹೊರಗಿನ ಮಡಿಗೆ, ಆಚಾರಗಳಿಗೆ ಪ್ರಾಧಾನ್ಯತೆ ಕೊಡುವ ಕಪಟಿಗಳನ್ನೂ ಜರಿದರು.

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ, ಜನ್ಮ ಸಾರ್ಥಕವಿದಲ್ಲವರೆಲ್ಲ ಭಾಗವತರೆ? ಎಂಬ ಮಾತುಗಳ ಮೂಲಕ  ಡಾಂಭಿಕತೆಯನ್ನು ಹೊತ್ತು ಮೆರೆಸುವ ಮೂಢರನ್ನೂ ಖಂಡಿಸಿದರು. ಸಮಾಜದಲ್ಲಿ ಗುಣಕ್ಕಿಂತ ಕುಲವೇ ಮುಖ್ಯವೆಂದು ಬೀಗುವವರನ್ನು ಕಂಡ ಕನಕದಾಸರು, ‘ಕುಲದ ನೆಲೆಯನೇನಾದರು ಬಲ್ಲಿರಾ’ಎಂದು ಪ್ರಶ್ನಿಸುತ್ತಲೇ ಗುಣ ಮುಖ್ಯವೇ ಹೊರತು ಕುಲವಲ್ಲ ಎಂಬ ಸಂದೇಶ ಸಾರಿದರು. ಈ ಲೋಕದಲ್ಲಿ ದುರ್ಜನರ ಸಂಗ ಬೇಡ. ನೈತಿಕ ನಡವಳಿಕೆಯೇ ಬದುಕಿನ ಜೀವಾಳ. ಆದ್ದರಿಂದ ಸದಾ ಸಜ್ಜನರ ಸಂಗದಲ್ಲಿಯೇ ಬಾಳಬೇಕು’ಎಂಬ ಆಶಯವನ್ನೂ ವ್ಯಕ್ತಪಡಿಸಿ, ಕುಲ-ಕುಲಗಳ ನಡುವಿನ ಕಗ್ಗಂಟು ಆರುವ ತನಕ ಒಗ್ಗಟ್ಟು ಕನಸಿನ ಗಂಟು ಎಂದು 16ನೇ ಶತಮಾನದಲ್ಲಿಯೇ ಹೇಳಿದ್ದಾರೆ. ಆದರೆ ಅವರ ಒಗ್ಗಟ್ಟಿನ ಕನಸು ಮಾತ್ರ ನನಸಾಗದೆ ಉಳಿದಿದೆ. ಒಗ್ಗಟ್ಟಿನ ಮಂತ್ರ ಜಪಿಸಿದ ಕನಕನನ್ನೇ ಜಾತಿಗೆ ಸೀಮಿತ ಮಾಡಿದ್ದೇವೆ. ಅವರ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಎಡವಿದ್ದೇವೆ ಎಂಬುದು ಸರ್ವವಿಧಿತ.

– ಆರ್.ಎಸ್. ಮಾಲಗತ್ತಿ, ಗ್ರಾ.ಪಂ. ಸದಸ್ಯರು

Leave a Reply