ಸ್ವಾತಂತ್ರ್ಯ ಹೋರಾಟಗಾರ್ತಿ ಝಲ್ಕರಿಬಾಯಿಯವರ ಜನ್ಮದಿನ

4 years ago

ಇಂದು ಇತಿಹಾಸಕಾರರು ಮರೆತು ಹೋಗಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ಝಲ್ಕರಿಬಾಯಿಯವರ ಜನ್ಮದಿನ.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನೆನಪು ಮಾಡಿಕೊಳ್ಳುವಾಗಲೆಲ್ಲ ಇತಿಹಾಸಕಾರರು ಕೇವಲ ಮೇಲ್ಜಾತಿಯ ಹೋರಾಟಗಾರರನ್ನು ಮಾತ್ರ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಬ್ರಿಟಿಷರ ವಿರುದ್ಧ ಭಾರತೀಯರು ನಡೆಸಿದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ತಳಸಮುದಾಯಗಳು ಮಹತ್ವದ ಪಾತ್ರ ವಹಿಸಿದ್ದನ್ನು ಮರೆಮಾಚುತ್ತಾರೆ. ಇತಿಹಾಸಕಾರರು ಮೇಲ್ಜಾತಿಗೆ ಸೇರಿದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಗೆ ಮೀಸಲಿಟ್ಟಿರುವ  ಸಾವಿರಾರು ಪುಟಗಳ ಚರಿತ್ರೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವೀರಯೋಧೆ ಝಲ್ಕರಿಬಾಯಿಯವರಿಗೆ ಕೆಲವು ಪುಟಗಳನ್ನು ಕೂಡ ಮೀಸಲಾಗಿಟ್ಟಿಲ್ಲ. ಯಾಕೆಂದರೆ ಮೇಲ್ಜಾತಿಯ ಇತಿಹಾಸಕಾರರ ಪ್ರಕಾರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಮೇಲ್ಜಾತಿಗಳು ಬ್ರಿಟಿಷರ ವಿರುದ್ದ ನಡೆಸಿ ಗಳಿಸಿದ ಸ್ವಾತಂತ್ರ್ಯದ ಹೋರಾಟ. ಈ ಇತಿಹಾಸಕಾರರ ಪ್ರಕಾರ ನಮ್ಮ ದೇಶದ ತಳಸಮುದಾಯಗಳಿಗೆ ಶೋಷಣೆಯನ್ನು ಅನುಭವಸುವುದರ ಹೊರತು ಬೇರೆ ಚರಿತ್ರೆಯೇ ಇಲ್ಲ. ಆದರೆ ಚರಿತ್ರೆಯ ಸತ್ಯಗಳನ್ನು ಹೆಚ್ಚುಕಾಲ ಬಚ್ಚಿಡುವುದಕ್ಕೆ ಸಾಧ್ಯವಿಲ್ಲ.

ಸಿಪಾಯಿದಂಗೆಯ ವೀರಯೋಧರಲ್ಲಿ ಒಬ್ಬರಾಗಿರುವ ಝಲ್ಕರಿಬಾಯಿಯ ಬಗ್ಗೆ ಇವತ್ತಿಗೂ ಬುಂದೇಲಖಂಡ ಪ್ರಾಂತದಲ್ಲಿ ಅಪಾರವಾದ ಗೌರವ ಇದೆ. ಝಾನ್ಸಿ ಬಳಿಯ ಭೋಜ್ಲಾ ಗ್ರಾಮದಲ್ಲಿ 1830ರ ನವೆಂಬರ್ 22ರಂದು ಹುಟ್ಟಿದ ಝಲ್ಕರಿಬಾಯಿ ದಲಿತ ಸಮುದಾಯವಾದ ಕೋರಿ ಜಾತಿಗೆ ಸೇರಿದವರು. ಝಾನ್ಸಿಯ ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪುರಾಣ್ ಸಿಂಗ್‌ರನ್ನು ಮದುವೆಯಾಗುವ ಮೂಲಕ ರಾಣಿ ಲಕ್ಷ್ಮೀಬಾಯಿಯ ಸಂಪರ್ಕಕ್ಕೆ ಬಂದರು. ತಮ್ಮ ತೀಕ್ಷ್ಣ ಬುದ್ದಿಮತ್ತೆಯ ಕಾರಣಕ್ಕೆ ಲಕ್ಷ್ಮೀಬಾಯಿಗೆ ಬಹಳ ಬೇಗ ಹತ್ತಿರವಾದ ಈಕೆ ರಾಣಿ ಲಕ್ಷ್ಮೀಬಾಯಿಗೆ ಹಲವು ಬಗೆಯಲ್ಲಿ ನೆರವಾದವರು, ಎಷ್ಟೋ ಸಂದರ್ಭಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳವಾಗ ರಾಣಿ ಝಲ್ಕರಿಬಾಯಿಯ ಸಲಹೆ ಪಡೆಯುತ್ತಿದ್ದರು. ಮುಂದೆ ಝಾನ್ಸಿಯ ಸೈನ್ಯದಲ್ಲಿದ್ದ ಮಹಿಳಾ ಘಟಕ ‘ದುರ್ಗಾ ದಳ್’ದ ನೇತೃತ್ವ ವಹಿಸಿಕೊಂಡು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷ್ಮೀಬಾಯಿಯಷ್ಟೇ ತೀವ್ರವಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರು. ಲಕ್ಷ್ಮೀಬಾಯಿಗೆ ಅಪಾರವಾಗಿ ನೆರವಾದ ಈ ತಳಸಮುದಾಯದ ಯೋಧೆಯ ಪರಾಕ್ರಮವನ್ನು ಇಂದಿಗೂ ಅಲ್ಲಿನ ಜನಪದರು ತಮ್ಮ ಹಾಡುಗಳಲ್ಲಿ, ಲಾವಣಿಗಳಲ್ಲಿ, ನಾಟಕಗಳಲ್ಲಿ, ಕಾವ್ಯದಲ್ಲಿ ಹಾಡುತ್ತಾ ಬಂದಿದ್ದಾರೆ. ಆ ಮೂಲಕ ಮರೆಗೆ ಸರಿಯಬಹುದಾಗಿದ್ದ ದಲಿತ ನಾಯಕಿಯ ನೆನಪನ್ನು ಇವತ್ತಿನವರೆಗು ಉಳಿಸಿಕೊಂಡು ಬಂದಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಈ ವೀರಯೋಧೆ, ಸ್ವಾತಂತ್ರ್ಯ ಹೋರಾಟಗಾರ್ತಿ ಝಲ್ಕರಿಬಾಯಿಗೆ ಆಕೆಯ ಹುಟ್ಟುಹಬ್ಬದಂದು ಗೌರವಪೂರ್ವಕ ನಮನಗಳು.

ಜೈ ಭೀಮ್.

  • ವಿ.ಎಲ್.ನರಸಿಂಹಮೂರ್ತಿ

Leave a Reply