ಕರ್ನಾಟಕ ಸರ್ಕಾರಕ್ಕೆ ಮಾದರಿಯಾಗಬೇಕಿದೆ ತಮಿಳುನಾಡಿನ ಕಾಮರಾಜ್ ನಾಡಾರ್ ಶಿಕ್ಷಣ ಕ್ರಾಂತಿ

3 years ago

ರಾಜಾಜಿ ಎಂದು ಕರೆಸಿಕೊಳ್ಳುತ್ತಿದ್ದ ಸಿ.ವಿ.ರಾಜಗೋಪಾಲಚಾರಿಯವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1953 ರಲ್ಲಿ ತಮಿಳುನಾಡಿನ ಸರ್ಕಾರಿ ಶಾಲೆಗಳ ಬೋಧನಾ ಸಮಯವನ್ನು ಆರುಗಂಟೆಯಿಂದ ಮೂರು ಗಂಟೆಗೆ ಕಡಿತಗೊಳಿಸಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಶಿಕ್ಷಣದ ಜೊತೆ ತಮ್ಮ ತಂದೆ ತಾಯಿಗಳ ಕುಲಕಸುಬುಗಳನ್ನು ಕಲಿಯಬೇಕೆಂದು ಆಜ್ಞೆ ಹೊರಡಿಸಿದ್ದರು. ಕುಲಂ ಕಲ್ವಿ ತಿಟ್ಟಂ ಹೆಸರಿನ ಈ ಆದೇಶದಲ್ಲಿ ಚಮ್ಮಾರನ ಮಗ ಚಮ್ಮಾರನಾಗಿ, ಕುಂಬಾರನ ಮಗ ಕುಂಬಾರನಾಗಿ, ರೈತನ ಮಗ ರೈತನಾಗಿ ಇರಬೇಕಿತ್ತು. ಇದರ ಹಿಂದೆ ಅವರೊಳಗೆ ಅಡಗಿದ್ದ ಬ್ರಾಹ್ಮಣ್ಯದ ಬುದ್ದಿ ಕ್ರಿಯಾಶೀಲವಾಗಿತ್ತು. ಇದನ್ನು ಕಾಂಗ್ರೇಸ್ ಪಕ್ಷದಲ್ಲೇ ಇದ್ದ ಕೆ.ಕಾಮರಾಜ್ ನಾಡಾರ್ ತೀವ್ರವಾಗಿ ವಿರೋಧಿಸಿದರು ಜೊತೆಗೆ ಅವಿಶ್ವಾಸ ನಿರ್ಣಯದ ಮೂಲಕ ರಾಜಾಜಿಯವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. ತಾನೊಬ್ಬ ಅವಿದ್ಯಾವಂತ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಹುದ್ದೆ ಏರಲು ನಿರಾಕರಿಸುತ್ತಿದ್ದ ಕಾಮರಾಜರು ತಮಿಳುನಾಡಿನಲ್ಲಿ ಮೇಲ್ವರ್ಗ ಮತ್ತು ಮೇಲ್ಜಾತಿಯ ಹುನ್ನಾರಗಳನ್ನು ನೋಡಿ, ಶೂದ್ರ ಮತ್ತು ತಳ ಸಮುದಾಯದ ಮಕ್ಕಳ ಅಭಿವೃದ್ಧಿಗೆ ನಾನು ಮುಖ್ಯಮಂತ್ರಿಯಾದರೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ನಿರ್ಧರಿಸಿದರು.

ಅದರಂತೆ 1954 ರ ಏಪ್ರಿಲ್ ತಿಂಗಳಲ್ಲಿ ಮುಖ್ಯಮಂತ್ರಿಯಾದರು. ವಂಶ ಪಾರಂಪರ್ಯದ ಕುಲ ಕಸುಬು ಪೋಷಿಸುವ ಕುಲಕಲ್ವಿ ಎಂಬ ಹೆಸರಿನ ಈ ಅವೈಜ್ಞಾನಿಕ ಶಿಕ್ಷಣ ಕಾಯ್ದೆಯನ್ನು. ಕಾಮರಾಜರು ಮುಖ್ಯಮಂತ್ರಿಯಾದ ತಿಂಗಳಿನಲ್ಲಿ ಅಂದರೆ, 1954 ರ ಮೇ 18 ರಂದು ಕಾಯ್ದೆಯನ್ನು ರದ್ದು ಪಡಿಸಿದರು. ಈ ನಿರ್ಧಾರದ ನಂತರ ಕಾಮರಾಜರಿಗೆ ಶಿಕ್ಷಣ ಕುರಿತಾಗಿ ಅನೇಕ ಕನಸುಗಳಿದ್ದವು. ರಾಜಾಜಿಯವರು ಶೂದ್ರರಿಗೆ ಮತ್ತು ದಲಿತರಿಗೆ ಶಿಕ್ಷಣ ನಿರಾಕರಿಸಿದ ಸಂಗತಿ ಸದಾ ಅವರ ಮನಸ್ಸನ್ನು ಕೊರೆಯುತ್ತಿತ್ತು. ಈ ಕಾರಣದಿಂದಾಗಿ ಶಿಕ್ಷಣದ ಮೂಲಕ ತಮಿಳುನಾಡಿನ ಗ್ರಾಮೀಣದ ಭಾಗದ ಮಕ್ಕಳನ್ನು ಮೇಲ್ಜಾತಿ ಮಕ್ಕಳ ಸಮಾನವಾಗಿ ನಿಲ್ಲಿಸಬೇಕು ಎಂಬುದು ಅವರ ಪರಮಗುರಿಯಾಗಿತ್ತು. 1951 ರಲ್ಲಿ ಮದ್ರಾಸ್ ರಾಜ್ಯ ಎಂದು ಕರೆಸಿಕೊಳ್ಳುತ್ತಿದ್ದ ತಮಿಳುನಾಡಿನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಅಲ್ಲಿನ ಜನಸಂಖ್ಯೆಯಲ್ಲಿ ಕೇವಲ ಶೇಕಡ ಇಪ್ಪತ್ತು ಮಂದಿ ಮಾತ್ರ ಶಿಕ್ಷಿತರಾಗಿದ್ದು ಉಳಿದ ಎಂಬತ್ತರಷ್ಟು ಮಂದಿ ಅನಕ್ಷರಸ್ತರಾಗಿದ್ದರು.

ವೈಯಕ್ತಿಕ ಬದುಕಿನ ಜಂಜಾಟ ಮತ್ತು ಕುಟುಂಬದ ಬಡತನದಿಂದಾಗಿ ವಿದ್ಯೆಯಿಂದ ವಂಚಿತರಾಗಿದ್ದ ಕಾಮರಾಜರಿಗೆ ತಮ್ಮ ಸುಧೀರ್ಘವಾದ ರಾಜಕಾರಣದ ಅನುಭವದಲ್ಲಿ ಶಿಕ್ಷಣದ ಮಹತ್ವ ಏನೆಂಬುದು ಅರಿವಾಗಿತ್ತು. ಆದ್ದರಿಂದ ಅವರು ಈ ನಾಡಿನ ಯಾವೊಂದು ಮಗುವು ನನ್ನ ರೀತಿಯಲ್ಲಿ ಶಿಕ್ಷಣದಿಂದ ವಂಚಿತವಾಗಬಾರದು ಎಂದು ನಿರ್ಧರಿಸಿ ತಮ್ಮ ಸರ್ಕಾರದ ಯೋಜನೆಗಳಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆಯನ್ನು ನೀಡಿದರು. ಏಕೆಂದರೆ ಅಲ್ಲಿಯವರೆಗಿನ ಸರ್ಕಾರಗಳು ಶೇಕಡ ಐದರಷ್ಟು ಆದಾಯವನ್ನು ಮಾತ್ರ ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಸಂಗತಿ ಅವರ ಗಮನಕ್ಕೆ ಬಂದಿತ್ತು. ದಲಿತ ಕುಟುಂಬದ ಮಕ್ಕಳಿಗೆ ಮತ್ತು ಆರ್ಥಿಕವಾಗಿ ತಿಂಗಳಿಗೆ ನೂರು ರೂಪಾಯಿ ಒಳಗೆ ಸಂಪಾದಿಸುವ ಕುಟುಂಬದ ಮಕ್ಕಳಿಗೆ ಮಾತ್ರ ಶುಲ್ಕ ವಿನಾಯಿತಿ ನೀಡಲಾಗಿತ್ತು. ಆದರೆ, ಗ್ರಾಮಗಳಲ್ಲಿ ಕೇವಲ ಒಂದು ಅಥವಾ ಇಬ್ಬರು ವಿದ್ಯಾರ್ಥಿಗಳು ಮಾತ್ರ ಈ ಅವಕಾಶ ಪಡೆಯುತ್ತಿದ್ದರು. ಕಾಮರಾಜರು ಈ ನಿಯಮವನ್ನು ಸಡಿಲಿಸಿ ಗ್ರಾಮಾಂತರ ಮತ್ತು ಪಟ್ಟಣಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವರ್ಗದ ಮತ್ತು ಜಾತಿಯ ಮಕ್ಕಳು ಉಚಿತವಾಗಿ ಹತ್ತನೆಯ ತರಗತಿವರೆಗೆ ಶಿಕ್ಷಣ ಕಲಿಯುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡರು.

ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾಗಿದ್ದ ಭಾರತದ ಸಂವಿಧಾನದಲ್ಲಿದ್ದ ದೇಶದ ಮಕ್ಕಳಿಗೆ ಹದಿನಾಲ್ಕನೆಯ ವಯಸ್ಸಿನವರೆಗೆ ಉಚಿತ ಶಿಕ್ಷಣ ನೀಡುವುದು ಕಡ್ಡಾಯ ಮಾಡುವುದು ಹಾಗೂ ಇದರ ಆರ್ಥಿಕ ಸಂಪನ್ಮೂಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನವಾಗಿ ಭರಿಸಬೇಕು ಎಂಬ ಮಹತ್ವದ ಅಂಶವನ್ನು ಕಾಮರಾಜ್ ಅವರು ಗಮನಿಸಿದ್ದರು. ಜೊತೆಗೆ ದೇಶದ ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಪ್ರಧಾನಿ ನೆಹರೂ ಅವರ ಮನವೊಲಿಸಿದ್ದರು. ಕೇಂದ್ರ ಸರ್ಕಾರದಿಂದ ಬರುವ ಧನ ಸಹಾಯದ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಧಿಕಾರಿಗಳ ಜೊತೆ ಚರ್ಚಿಸಿದರು. ರಾಜ್ಯದ ವರಮಾನದ ಸ್ಥಿತಿಗತಿ ಆಶಾದಾಯಕವಾಗಿರಲಿಲ್ಲ. ಹಾಗಾಗಿ ಅವರು ತಮ್ಮ ಕನಸಿನ ಶಿಕ್ಷಣ ಯೋಜನೆಗೆ ಸ್ಥಳಿಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಬೋರ್ಡ್ ಗಳ ಸಹಭಾಗಿತ್ವ ಪಡೆಯಲು ನಿರ್ಧರಿಸಿದರು. ಇದಕ್ಕೂ ಮೊದಲು ರಾಜ್ಯದ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿದರು.

ಕೆ. ಕಾಮರಾಜರು ಮುಖ್ಯಮಂತ್ರಿಯಾದ ನಂತರ 1957 ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಅಂದಿನ ಮದ್ರಾಸ್ ರಾಜ್ಯದ ಆರು ಸಾವಿರ ಗ್ರಾಮಗಳಲ್ಲಿ ಕನಿಷ್ಠ ಪ್ರಾಥಮಿಕ ಶಾಲೆಯೂ ಇಲ್ಲದಿರುವ ವರದಿಯನ್ನು ನೋಡಿ ಕಾಮರಾಜರು ತಬ್ಬಿಬ್ಬಾದರು. ರಾಜ್ಯದ ವರಮಾನದ ಜೊತೆಗೆ ಖರ್ಚು ವೆಚ್ಚಗಳ ಮೇಲೆ ಮಿತಿಹಾಕಿಕೊಳ್ಳಲು ನಿರ್ಧರಿಸಿ ಮುನ್ನೂರು ಜನಸಂಖ್ಯೆ ಇರುವ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಇರುವುದು ಕಡ್ಡಾಯ ಎಂಬ ಆಜ್ಞೆಯನ್ನು ಹೊರಡಿಸಿದರು. ಸ್ಥಳ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳಿಯ ಸಂಸ್ಥೆಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳುಳ್ಳುವಂತೆ ಪ್ರೇರೇಪಿಸಿದರು. ಇದರಿಂದಾಗಿ ಇಡೀ ರಾಜ್ಯದಲ್ಲಿ ಒಟ್ಟು 4267ಪ್ರಾಥಮಿಕ ಶಾಲೆಗಳು ಪ್ರಾರಂಭಗೊಳ್ಳುವುದರ ಜೊತೆಗೆ ನಿರುದ್ಯೋಗಿಗಳಾಗಿ ಕಾಲ ಕಳೆಯುತ್ತಿದ್ದ 6076 ಪದವೀಧರರನ್ನು ಶಿಕ್ಷಕರನ್ನಾಗಿ ನೇಮಕ ಮಾಡಿಕೊಂಡರು. ಕಾಮರಾಜ್ ಅವರ ಈ ಯೋಜನೆ ಏಕಕಾಲದಲ್ಲಿ ಶಿಕ್ಷಣದ ಸಮಸ್ಯೆಯನ್ನು ನೀಗಿಸುವುದರ ಜೊತೆಗೆ ನಿರುದ್ಯೋಗದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿತು.

ತಮಿಳುನಾಡಿನ ಇತಿಹಾಸದಲ್ಲಿ ಕಾಮರಾಜರ ಸಾಧನೆಗಳು ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ತೆಗೆದುಕೊಂಡ ಹಲವು ನಿರ್ಧಾರಗಳಿಂದಾಗಿ ಅಲ್ಲಿನ ಜನತೆ ಅವರನ್ನು ಸದಾ ಕೃತಜ್ಞತಾ ಮನೋಭಾವದಿಂದ ಸ್ಮರಿಸುತ್ತಾರೆ
ಮುಖ್ಯಮಂತ್ರಿ ಕಾಮರಾಜರು 1957 ರಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಇಡೀ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೆ ತಂದರು. ಅತ್ಯಂತ ವ್ಯವಸ್ಥಿತವಾಗಿ 1957 ರಿಂದ 1961 ರ ವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಿಂದ ಹಿಡಿದು ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ವಿಸ್ತರಿಸಿದರು. 1957 ರಲ್ಲಿ ಎಂಟು ಸಾವಿರದ ಇನ್ನೂರು ಶಾಲೆಗಳ ಎರಡು ಲಕ್ಷ ಮುವತ್ತು ಸಾವಿರ ವಿದ್ಯಾರ್ಥಿಗಳಿಗೆ ಪ್ರಾರಂಭವಾದ ಮಧ್ಯಾಹ್ನದ ಊಟದ ಯೋಜನೆ 1961 ರ ವೇಳೆಗೆ ಮದ್ರಾಸ್ ರಾಜ್ಯದ 27 ಸಾವಿರ ಶಾಲೆಗಳ 12 ಲಕ್ಷದ 65 ಸಾವಿರ ವಿದ್ಯಾರ್ಥಿಗಳಿಗೆ ತಲುಪಿತ್ತು. ನಗರಗಳ ಪ್ರತಿಷ್ಠಿತ ಖಾಸಾಗಿ ವಿದ್ಯಾಸಂಸ್ಥೆಗಳನ್ನು ಹೊರತು ಪಡಿಸಿ, ಶೇಕಡ 97 ರಷ್ಟು ಭಾಗದ ಶಾಲಾ ವಿದ್ಯಾರ್ಥೀಗಳು ಈ ಯೋಜನೆಯ ಫಲಾನುಭವಿಗಳಾಗಿದ್ದರು.

ಇದರಿಂದಾಗಿ ಏಕಕಾಲದಲ್ಲಿ ಶಾಲೆಗೆ ಶಿಕ್ಷಣಕ್ಕಾಗಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ನಿಧಾನವಾಗಿ ಶಿಕ್ಷಣದಲ್ಲಿ ಗುಣ ಮಟ್ಟವು ಹೆಚ್ಚಾಯಿತು. ಶಾಲೆಗಳಲ್ಲಿ ವ್ಯಾಯಾಮ ಶಿಕ್ಷಕರು, ಕರಕುಶಲ ಕಲೆ ಹೇಳಿಕೊಡುವ ಶಿಕ್ಷಕರ ಜೊತೆಗೆ ತಮಿಳು ಭಾಷಾ ಪಂಡಿತರನ್ನು ಕಾಮರಾಜರು ನೇಮಕ ಮಾಡಿಕೊಂಡರು. ತಮಿಳುನಾಡಿನ ಶಿಕ್ಷಣ ಪದ್ಧತಿಯನ್ನು ಉನ್ನತೀಕರಿಸಲು ಆರ್ಕಾಟ್ ಲಕ್ಷ್ಮಣಸ್ವಾಮಿ ಮೊದಲಿಯಾರ್ ಎಂಬ ಶಿಕ್ಷಣ ತಜ್ಞರನ್ನು ನೇಮಕ ಮಾಡಿ ಅವರಿಂದ ವರದಿಯನ್ನು ಪಡೆದಿದ್ದರು. ಜೊತೆಗೆ ಆರು ವರ್ಷ ತುಂಬಿದ ಮಕ್ಕಳನ್ನು ಶಾಲೆಗೆ ಕಳಿಸುವುದು ಕಡ್ಡಾಯ ಎಂಬ ಆಜ್ಞೆಯನ್ನು ಹೊರಡಿಸಿದರು. ಕಾಮರಾಜರು ಹಮ್ಮಿಕೊಳ್ಳುತ್ತಿದ್ದ ಪ್ರತಿಯೊಂದು ಯೋಜನೆಯೂ ಸಹ ಜನಪರವಾಗಿದ್ದ ಕಾರಣ ಯಾರೊಬ್ಬರೂ ಅವರ ನಡೆಗಳನ್ನು ಸಂಶಯದಿಂದ ನೋಡುತ್ತಿರಲಿಲ್ಲ. ಪ್ರಧಾನಿಯಾಗಿದ್ದ ನೆಹರೂ ಅವರು ಪಂಚವಾರ್ಷಿಕ ಯೋಜನೆಯಲ್ಲಿ ವಿದ್ಯಾರ್ಥಿಗಳ ಕರಕುಶಲ ಕಲೆಗಳ ತರಬೇತಿಗಾಗಿ ಮೀಸಲಾಗಿ ಇಟ್ಟಿದ್ದ ಹಣವನ್ನು ಕಾಮರಾಜರ ಕನಸಿನ ಯೋಜನೆಗೆ ಬಳಸಿಕೊಳ್ಳಲು ಅನುಮತಿ ನೀಡಿದರು

ಕಾಮರಾಜರ ಈ ದೂರದೃಷ್ಟಿಯ ಯೋಜನೆಯ ಫಲವಾಗಿ ಇಂದು ದಕ್ಷಿಣ ಭಾರತದಲ್ಲಿ ತಮಿಳುನಾಡು ಅತ್ಯಂತ ಸಂವೃದ್ಧಿಯ ರಾಜ್ಯವಾಗಿ ಬೆಳೆದು ನಿಂತಿದೆ.

( ಮಂಡ್ಯದ ಸಂಕಥನ ಪ್ರಕಾಶನ ಸಂಸ್ಥೆಯಿಂದ ಪ್ರಕಟಣೆಗೆ ಸಿದ್ಧವಾಗುತ್ತಿರುವ ‘ ದಕ್ಷಿಣದ ಗಾಂಧಿ ಕಾಮರಾಜ ನಾಡಾರ್’ ಕೃತಿಯ ಅಧ್ಯಾಯದಿಂದ ಆಯ್ದಕೊಂಡ ಭಾಗ)

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply