ಚಂದ್ರಯಾನ 3: ಏನಿದು ವಿಜ್ಞಾನಿಗಳೇ?

3 years ago

#Chandrayaan3 #scientists #shashikanthyadahalli

ಕಳೆದ ವಾರ ನಡೆದ  ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು “ಈಗ ಮೌಢ್ಯ ಎನ್ನುವುದು ಹೆಚ್ಚಾಗಿರುವುದು ವಿದ್ಯಾವಂತರಲ್ಲಿ” ಎಂದು ಹೇಳಿದರು. ವಿಜ್ಞಾನಿಗಳಲ್ಲೂ ಈ ಮೌಢ್ಯಾಚರಣೆ ನಂಬಿಕೆ ಅತಿಯಾಗಿರುವುದಕ್ಕೆ ಇಸ್ರೋದ ಕೆಲವು ವಿಜ್ಞಾನಿಗಳು ಸಾಕ್ಷಿಯಾಗಿದ್ದಾರೆ. ಜುಲೈ 14ರಂದು ಇಸ್ರೋ ತಯಾರಿಸಿದ ಉಪಗ್ರಹ ಚಂದ್ರಯಾನ 3 ರ ಉಡಾವಣೆ ಇದ್ದು ಎರಡು ದಿನ ಮುಂಚೆಯೇ ಈ ವಿಜ್ಞಾನಿಗಳು ಉಪಗ್ರಹದ ಮಾದರಿಯನ್ನು ತಿರುಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ತಿಮ್ಮಪ್ಪನಿಗೆ ತೋರಿಸಿ ಚಂದ್ರಯಾನವನ್ನು ಯಶಸ್ವಿಗೊಳಿಸು ದೇವರೇ ಎಂದು ಪೂಜೆ ಮಾಡಿ ಬೇಡಿಕೊಂಡಿದ್ದಾರೆ.

ಯಾರಿಗೆ ತಮ್ಮ ಕೆಲಸದಲ್ಲಿ ಅನುಮಾನ ಇರುವುದೋ, ಯಾರಿಗೆ ತಮ್ಮ ಪರಿಣಿತಿಯಲ್ಲಿ ಸಂದೇಹ ಇರುವುದೋ ಅವರು ದೇವರ ಮೊರೆ ಹೋಗುತ್ತಾರೆ. ಕಾಪಾಡಪ್ಪಾ ಎಂದು ಅಂಗಲಾಚುತ್ತಾರೆ. ಈ ವಿಜ್ಞಾನಿಗಳಿಗೂ ತಮ್ಮ ವೈಜ್ಞಾನಿಕ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲವಾ? ಉಪಗ್ರಹದ ಉಡಾವಣೆಯಲ್ಲಿ ತಾಂತ್ರಿಕ ತೊಂದರೆಯಾದರೆ ತಿಮ್ಮಪ್ಪ ದೇವರು ಬಂದು ರಿಪೇರಿ ಮಾಡುತ್ತಾರಾ?

2019 ರಲ್ಲಿ ಕೂಡಾ ಹೀಗೆ ಆಗಿತ್ತು. ಇಸ್ರೋದ ಅಧ್ಯಕ್ಷರೇ ತಿರುಪತಿಗೆ ಹೋಗಿ ಪೂಜೆ ಪುರಸ್ಕಾರ ಮಾಡಿಸಿ ಚಂದ್ರಯಾನ  ಯಶಸ್ವಿಯಾಗಲಿ ಎಂದು ಬೇಡಿಕೊಂಡು ಬಂದಿದ್ದರು. ಆದರೆ ಅವರ ಬೇಡಿಕೆಯನ್ನು ಆ ದೇವರೂ ಈಡೇರಿಸಲಿಲ್ಲ. ಕೊನೆಯ ಲ್ಯಾಂಡಿಂಗ್ ಹಂತದಲ್ಲಿ ಉಪಗ್ರಹ ಸಂಪರ್ಕವನ್ನೇ ಕಳೆದುಕೊಂಡು ಚಂದ್ರಯಾನ ಅಸಫಲವಾಯ್ತು. ದೇವರಿಗೆ ಉಪಗ್ರಹ ಉಡಾವಣಾ ತಾಂತ್ರಿಕತೆ ಗೊತ್ತಿದ್ದರೆ ಚಂದ್ರನ ಮೇಲೆ ಹೋಗಿ ರಿಪೇರಿ ಮಾಡಬಹುದಾಗಿತ್ತೋ ಏನೋ? ಆದರೆ ವಿಜ್ಞಾನಿಗಳ ಅವೈಜ್ಞಾನಿಕ ನಂಬಿಕೆಯಂತೂ ಜಗಜ್ಜಾಹೀರಾಯ್ತು.

ಭಾರತದ ಸಂವಿಧಾನ 51 ಎ ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಆದರೆ ಈ ವಿಜ್ಞಾನಿಗಳು ಸಂವಿಧಾನಕ್ಕೆ ಅತೀತರೇ. ತಮ್ಮ ವ್ಯಕ್ತಿಗತ ನಂಬಿಕೆ ಆಚಾರಗಳನ್ನು ತಮ್ಮ ಮನೆಯೊಳಗೆ ಇಲ್ಲವೇ ಮನದೊಳಗೆ ಇಟ್ಟುಕೊಳ್ಳಲಿ. ಆದರೆ ವೈಜ್ಞಾನಿಕ ಸಾಧನೆಗಳಲ್ಲಿ ಬಳಸದಿರಲಿ. ದೇಶವಾಸಿ ಜನರಿಗೆ ತಪ್ಪು ಸಂದೇಶ ಸಾರದಿರಲಿ. ವೈಜ್ಞಾನಿಕ ಸಾಧನೆಯ ಸಾಮರ್ಥ್ಯದ ಮೇಲೆಯೇ ಚಂದ್ರಯಾನ-3 ಯಶಸ್ವಿಯಾಗಲಿ.

– ಶಶಿಕಾಂತ ಯಡಹಳ್ಳಿ

Leave a Reply