ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ ಮತ್ತು ಇದೀಗ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ನೆರವೇರಿಸುವುದನ್ನು ಪ್ರಜ್ಞಾವಂತರೆಲ್ಲರು ಪ್ರತಿಭಟಿಸಬೇಕಿದೆ. ಕುವೆಂಪು ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ತೇಜಸ್ವಿಯವರು ತೆಗೆದುಕೊಂಡ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಕಲಾವಿದರು ಹಾಗೂ ಸರ್ಕಾರವು ತನ್ನ ನಿಲುವನ್ನು ಮರುಪರಿಶೀಲಿಸಬೇಕಾಗಿದೆ. ಭವಿಷ್ಯದಲ್ಲಿ ಈ ಕ್ರಮವು ಭಿನ್ನ ತಿರುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುವದರಿಂದ ಅಗತ್ಯವಾಗಿ ಯೋಚಿಸಬೇಕಾಗಿದೆ. ಒಂದು ವೇಳೆ ಇಂತದೆ ಪ್ರಸಂಗಗಳು ಮುಂದುವರೆದರೆ, ಬೆಂಗಳೂರಿನಲ್ಲಿ ಕೇವಲ ಗೋರಿಗಳು ಮಾತ್ರ ಉಳಿಯಬಹುದೇನೋ?
ಹಿರಿಯ ಕವಿ, ನನ್ನ ಹಿತೈಷಿಯೂ ಆಗಿದ್ದ, ನನಗೆ ಅಪಾರ ಗೌರವ ಕೊಡುತ್ತಿದ್ದ ಡಾ. ಸಿದ್ದಲಿಂಗಯ್ಯ ಅವರ ದೈಹಿಕ ನಿರ್ಗಮನಕ್ಕೆ ದುಃಖಿಸಬೇಕೋ ಅಥವಾ ಅದೇ ಸಿದ್ಧಲಿಂಗಯ್ಯನವರ ದಶಕಗಳ ಕಾಲದ ಒಡನಾಡಿಗಳು ಸರ್ಕಾರವನ್ನು “ದಲಿತ ಲೋಕದ ಮಹಾಕವಿ ಡಾ.ಸಿದ್ಧಲಿಂಗಯ್ಯ ಅವರ ಸ್ಮಾರಕಕ್ಕೆ ಕೂಡಲೇ ಸೂಕ್ತ ಜಾಗ ನಿಗದಿ ಮಾಡಬೇಕು ಮತ್ತು ಸಕಲ ಗೌರವಗಳೊಂದಿಗೆ ಅವರ ಅಂತಿಮ ವಿದಾಯಕ್ಕೆ ವ್ಯವಸ್ಥೆ ಮಾಡಬೇಕಾಗಿ ಕೋರಿ”ರುವ ಪತ್ರದಲ್ಲಿ “ಸ್ಮಾರಕಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಅಥವಾ ಕಲಾಗ್ರಾಮ ಇವೆರಡರಲ್ಲಿ ಒಂದು ಜಾಗ ಸೂಕ್ತವಾದುದು ಎಂಬುದು ನಮ್ಮ ಅಭಿಪ್ರಾಯವಾಗಿದೆ” ಎಂದು ಒತ್ತಾಯಿಸಿರುವುದನ್ನು ಕಂಡು ಪ್ರತಿಭಟಿಸಬೇಕೋ ಎಂಬ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ದುರಂತವೆಂದರೆ ಈ ಪತ್ರ ಬರೆದವರಲ್ಲಿ ಕೂಡ ನನಗೆ ಆತ್ಮೀಯರಿದ್ದಾರೆ.
ಮೊದಲನೆಯದಾಗಿ 2013 ಡಿಸೆಂಬರ್ 23ರಂದು ಹಿರಿಯ ವಿಮರ್ಶಕ, ಕವಿ, ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರವನ್ನು ಜಾತ್ಯತೀತ ನೆಲೆಯಲ್ಲಿ, ಬೌದ್ಧಿಕ ಹಿನ್ನೆಲೆಯಲ್ಲಿ ಕಟ್ಟಿದ ಜಿ.ಎಸ್.ಶಿವರುದ್ರಪ್ಪ ಕಾಲವಶರಾದರು. ಅವರು ಕನ್ನಡ ಅಧ್ಯಯನ ಕೇಂದ್ರದಲ್ಲಿ ಮಾಡಿದ ಕೆಲಸಗಳು, ಸಾಹಿತ್ಯ ವಾರ್ಷಿಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ, ವಿಮರ್ಶಾ ಕ್ಷೇತ್ರಕ್ಕೆ, ಹಳಗನ್ನಡ ಸಾಹಿತ್ಯ ಅಧ್ಯಯನ, ಸಂಶೋಧನೆಗೆ ನೀಡಿದ ಕೊಡುಗೆ ಅನುಪಮವಾದುದು. ಅವರ ಕೆಲಸದ ಕುರಿತು ನನಗೆ ಇಂದಿಗೂ ಅಪಾರ ಗೌರವವಿದೆ.
ಜಿಎಸ್ಸೆಸ್ ಕಾಲವಶವಾದ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಆಪ್ತರಾಗಿದ್ದ ಕೆಲವರು ಬೆಂಗಳೂರಿನ ಕಲಾಗ್ರಾಮದಲ್ಲಿ ಜಿ.ಎಸ್.ಶಿವರುದ್ರಪ್ಪನವರ ಅಂತ್ಯ ಸಂಸ್ಕಾರ ಮಾಡುವ ಐಡಿಯಾ ಕೊಟ್ಟರು. ಎಲ್ಲ ಸರ್ಕಾರಗಳೂ ಕೆಲವು ವಿಶೇಷ ಸಂದರ್ಭದಲ್ಲಿ ವ್ಯಕ್ತಿ ಎಷ್ಟೇ ಜಾತ್ಯತೀತನಾಗಿದ್ದರೂ ವ್ಯಕ್ತಿಯ ಜಾತಿಯಿಂದ ಲಾಭ ಮಾಡಿಕೊಳ್ಳಲು ಯತ್ನಿಸುತ್ತವೆ. ಇದೇ ಕಾರಣಕ್ಕೆ ಜಿ.ಎಸ್.ಶಿವರುದ್ರಪ್ಪನವರ ಅಂತ್ಯ ಸಂಸ್ಕಾರವನ್ನು ಕಲಾಗ್ರಾಮದಲ್ಲಿ ನೆರವೇರಿಸಲು ವೇದಿಕೆ ಸಿದ್ಧವಾಯಿತು.
ಅಂದು ಕಲಾಗ್ರಾಮ ಗಣ್ಯ ವ್ಯಕ್ತಿಗಳ ಚಿತಾಗಾರವಾಗಬಾರದು ಎಂದು ನಾನು ಅಭಿಪ್ರಾಯಪಟ್ಟೆ. “ಕಲಾಗ್ರಾಮ ಚಿತಾಗಾರವೇ? ಎಂದು ಪ್ರಶ್ನಿಸಿ, ಜಿ.ಎಸ್.ಎಸ್. ಅವರು ತಮ್ಮನ್ನು ಯಾವುದೇ ವಿಧಿವಿಧಾನಗಳಿಗೂ ಒಳಪಡಿಸದೆ, ಅಗ್ನಿಸ್ಪರ್ಶದ ಮೂಲಕ ಸಂಸ್ಕಾರವನ್ನು ಮಾಡಿ, ಬೂದಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸುವಂತೆ ಬಯಸಿದ್ದಾರೆ. ಆದರೆ ಅವರ ಅಂತಿಮ ಸಂಸ್ಕಾರವನ್ನು ಬೆಂಗಳೂರು ವಿವಿ ಸಮೀಪದ ಕಲಾಗ್ರಾಮದಲ್ಲಿ ನೆರವೇರಿಸಲು ನಿರ್ಧರಿಸಿರುವ ಕ್ರಮ ಸರಿಯಾದುದಲ್ಲ. ಕಲಾ ಹಾಗೂ ಬೋಧನಾ ಕೇಂದ್ರದಲ್ಲಿ ಶವಸಂಸ್ಕಾರವನ್ನು ಮಾಡುವುದು ಸರಿಯಲ್ಲ. ಇದು ಕೆಟ್ಟ ಪರಂಪರೆಯೊಂದಕ್ಕೆ ನಾಂದಿ ಹಾಡಿದಂತಾಗುತ್ತದೆ. ಕುವೆಂಪುರವರ ಅಂತ್ಯ ಸಂಸ್ಕಾರವನ್ನು ಮೈಸೂರು ವಿ.ವಿ.ಯ ಆವರಣದಲ್ಲಿ ಮಾಡಬೇಕೆಂಬ ಕೂಗು ಎದ್ದಾಗ ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಅದನ್ನು ನಿರಾಕರಿಸಿ, ಕುಪ್ಪಳಿಯ ಕವಿಶೈಲದಲ್ಲಿ ಅಂತಿಮ ಸಂಸ್ಕಾರ ಮಾಡಬೇಕೆಂದು ತಿಳಿಸಿದರು. ಇದರ ಹಿಂದೆ ಶಿಕ್ಷಣಕೇಂದ್ರವನ್ನು ಗಣ್ಯವ್ಯಕ್ತಿಗಳ ಸಮಾಧಿಯಾಗದಂತೆ ಕಾಪಾಡಬೇಕಾದ ಸಾಮಾಜಿಕ ಜವಾಬ್ದಾರಿ ಇತ್ತು. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಜಿಎಸ್‌ಎಸ್‌ಗೆ ನಿಜವಾದ ಗೌರವ ಸಲ್ಲಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದೆ.
ಅನಂತರ ಸರ್ಕಾರದೊಡನೆ ಆಪ್ತರಾಗಿರುವವರೊಂದಿಗೆ ನಾನು ಕರೆ ಮಾಡಿ ಮಾತಾಡಿದೆ. ನೀವೆಲ್ಲ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತೀರಿ ಎಂದು ಅವರಿಗೆ ವಿವರಿಸಲು ಪ್ರಯತ್ನಿಸಿದೆ. ಆದರೆ, ಎಲ್ಲವೂ ವಿಫಲವಾಗಿ ಕಲಾಗ್ರಾಮದಲ್ಲಿ ಜಿಎಸ್ಸೆಸ್ ಅಂತ್ಯ ಸಂಸ್ಕಾರ ಮಾಡಲಾಯಿತು. ಸಂಸ್ಕಾರದ ನಂತರ ಸರ್ಕಾರ ನಿದ್ದೆಗೆ ಜಾರಿತು.
ಮತ್ತೊಮ್ಮೆ ಕಲಾಗ್ರಾಮ ಸ್ಮಶಾನವಾಗಿದ್ದು ಕಾದಂಬರಿಕಾರ, ವಿಮರ್ಶಕ, ಅನುವಾದಕ ಯು.ಆರ್.ಅನಂತಮೂರ್ತಿಯವರು ಕಾಲವಶರಾದ ಸಮಯದಲ್ಲಿ. ಆಗಸ್ಟ್ 23, 2014ರಂದು ಅನಂತಮೂರ್ತಿಯವರ ಸಂಸ್ಕಾರವನ್ನು ಇದೇ ಕಲಾಗ್ರಾಮದಲ್ಲಿ ನೆರವೇರಿಸಿತು. ಆಗ ಕೂಡ ನಾನು ಮತ್ತೊಮ್ಮೆ ಸರ್ಕಾರದ ಈ ನಡೆಯನ್ನು ವಿರೋಧಿಸಿದೆ. ಕಡೆಗೆ ನಿರ್ದೇಶಕ ಪ್ರಸನ್ನ ಅವರು ಪ್ರಾಯಶಃ ಮೈಸೂರಿನಲ್ಲಿ ಕಲಾಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸುವುದು ತಪ್ಪು ಎಂದು ಮಾಧ‍್ಯಮಗಳಿಗೆ ಹೇಳಿಕೆ ನೀಡಿದರು.
ಅನಂತರ ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಚಂದ್ರಶೇಖರ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಗೋವಿಂದೇಗೌಡ ಮತ್ತು ನಾನು ಭಾಗವಹಿಸಿದ ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ “ಸರ್ಕಾರ ವರ್ಸಸ್ ಸಂಸ್ಕಾರ” ಹೆಸರಿನಲ್ಲಿ ಪ್ರಸಾರವಾದ ಲೈವ್ ಡಿಬೇಟ್ ನಲ್ಲಿ ಕೂಡ ಈ ಕುರಿತು ಎಲ್ಲರೂ ಕಲಾಗ್ರಾಮದಲ್ಲಿ ಗಣ್ಯವ್ಯಕ್ತಿಗಳ ಅಂತ್ಯ ಸಂಸ್ಕಾರ ನಡೆಸಬಾರದು ಎಂದೇ ಅಭಿಪ್ರಾಯಪಟ್ಟಿದ್ದರು.
ಅನಂತರ ಸರ್ಕಾರ ಮತ್ತೊಮ್ಮೆ ನಿದ್ದೆಗೆ ಜಾರಿತು. ಇವೆಲ್ಲದರ ನಡುವೆ ಸರ್ಕಾರದ ಜೊತೆಗೆ, ಗಣ್ಯರನ್ನು ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲು ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸಿದ್ದವರು ಕುಂಭಕರ್ಣ ನಿದ್ದೆಗೆ ಜಾರಿದರು. ಅದಾದ ನಂತರ ಕೆಲವು ದಿನಗಳ ಹಿಂದೆ ಕಲಾಗ್ರಾಮದಲ್ಲಿ ಕವಿ, ಕಾದಂಬರಿಕಾರರ ಸ್ಮಶಾನದ ಸ್ಥಳದಲ್ಲಿ ಸ್ವಚ್ಛತೆ ಅಭಿಯಾನ ಕೂಡ ನಡೆಯಿತು. ಸರ್ಕಾರ ಇವೆಲ್ಲವುಗಳಿಗೂ ಕಿವುಡಾಗಿದೆ. ಇದೀಗ ಡಾ.ಸಿದ್ದಲಿಂಗಯ್ಯನವರನ್ನು ಇದೇ ಕಲಾಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲು ವೇದಿಕೆ ಸಿದ್ಧವಾಗಿದೆ.
ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತನ ತಂದಕವಿ. ಅವರ ಕವಿತೆಗಳು ಕತ್ತಲ ಲೋಕದಂತಿದ್ದ ದಲಿತರ ಬದುಕು, ನೋವು, ಅಸಹನೆಗಳಿಗೆ ದನಿ ನೀಡಿದವು. ಕಾವ್ಯದಲ್ಲಿರುವ ಆಕ್ರೋಶ ಮತ್ತು ಅವರು ಕಂಡುಕೊಂಡ ಹೊಸ ಲಯ, ದಲಿತ, ಬಂಡಾಯ ಚಳವಳಿ ಮತ್ತು ಜನ್ನಿ, ಪಿಚ್ಚಳ್ಳಿ ಶ್ರೀನಿವಾಸ್ ಮೊದಲಾದ ಗಾಯಕರು ಸಿದ್ದಲಿಂಗಯ್ಯನವರಿಗೆ ಸ್ಟಾರ್ ಪಟ್ಟವನ್ನು ಒದಗಿಸಿಕೊಟ್ಟವು.
ಅವರು ಅಂಬೇಡ್ಕರ್ ವಾದಿಯಾಗಿ, ಕವಿಯಾಗಿ, ಗ್ರಾಮದೇವತೆಗಳು ಒಂದು ಅಧ್ಯಯನದ ಮೂಲಕ ಸಂಶೋಧಕರಾಗಿ, ಬೆಂಗಳೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ವಿಧಾನಪರಿಷತ್ ನಲ್ಲಿ ಕನ್ನಡ, ದಲಿತರು, ಇನ್ನಿತರ ಸಮಸ್ಯೆಗಳ ಕುರಿತು ಎತ್ತಿರುವ ಪ್ರಶ‍್ನೆಗಳು, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನೇಕ ಕೆಲಸಗಳನ್ನು ನಿರ್ವಹಿಸಿದ್ದಾರೆ. ಅದರಲ್ಲೂ ದಲಿತ ಲೋಕಕ್ಕೆ ಅವರು ತಮ್ಮ ಕವಿತೆಗಳು, ಭಾಷಣಗಳು, ಆತ್ಮಕತೆಯ ಮೂಲಕ ನೀಡಿರುವ ಆತ್ಮಸ್ಥೈರ್ಯ ಅನುಪಮವಾದುದು.
ಜೊತೆಗೆ, ತಮ್ಮನ್ನೇ ತಾವು ಗೇಲಿ ಮಾಡಿಕೊಳ್ಳುವ ಮತ್ತು ಓರಗೆಯವರನ್ನು ಲಘುಶೈಲಿಯಲ್ಲಿ ಮಂಡಿಸುವ ಕ್ರಮದಿಂದಾಗಿ ಅವರಲ್ಲಿದ್ದ ಗಂಭೀರ ಅಂಬೇಡ್ಕರ್ ವಾದಿ ಮತ್ತು ಸಂಶೋಧಕ ಕಾಣೆಯಾದ ಎಂದೇ ನನಗನಿಸುತ್ತದೆ. ಇರಲಿ ಇದೀಗ ಇವರ ಅಂತ್ಯ ಸಂಸ್ಕಾರದ ವಿಚಾರ ಚರ್ಚೆಯಲ್ಲಿದೆ. ಕನ್ನಡದಲ್ಲಿ ಪ್ರಾಯಶಃ ಅಂತ್ಯಸಂಸ್ಕಾರ ಕುರಿತು ಚರ್ಚೆ ಆರಂಭವಾಗಿದ್ದು ಯು.ಆರ್.ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಮತ್ತು ಅದೇ ಕಾದಂಬರಿ ಚಲನಚಿತ್ರವಾದಾಗ ಎನಿಸುತ್ತದೆ. ದುರಂತವೆಂದರೆ, ಈ ಕಾದಂಬರಿಯನ್ನು ಪಠ್ಯ ಪುಸ್ತಕವಾಗಿಸಿದವರು, ಬರೆದವರು, ಬೋಧಿಸಿದವರ ಅಂತ್ಯ ಸಂಸ್ಕಾರ ಕೂಡ ಚರ್ಚಾರ್ಹ ಸಂಗತಿಯಾಗಿದೆ.
ಸರ್ಕಾರಿ ಸಂಸ್ಥೆಯಾದ ಕಂಠೀರವ ಸ್ಟುಡಿಯೋ, ಕಲಾಗ್ರಾಮ ಸೇರಿದಂತೆ ಇನ್ನಿತರ ಸಂಸ್ಥೆಗಳಲ್ಲಿ ಗಣ್ಯರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಅವಕಾಶ ನೀಡಬಾರದು. ಇಲ್ಲವಾದಲ್ಲಿ ಸರ್ಕಾರಿ ಸಂಸ್ಥೆಗಳ ಹೆಸರುಗಳನ್ನು ಗಣ್ಯ ವ್ಯಕ್ತಿಗಳ ಚಿತಾಗಾರ ಎಂದು ಹೆಸರು ಬದಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.
ಡಾ.ಜಿ.ಎಸ್.ಶಿವರುದ್ರಪ್ಪ, ಪ್ರೊ.ಯು.ಆರ್.ಅನಂತಮೂರ್ತಿ ಮತ್ತು ಡಾ.ಸಿದ್ದಲಿಂಗಯ್ಯನವರ ಕುರಿತು ನನಗೆ ಅಪಾರ ಗೌರವವಿದೆ. ಅವರ ಸಾಹಿತ್ಯ ಕೃತಿಗಳು, ಭಾಷಣಗಳು, ಸಂಪಾದಿತ ಕೃತಿಗಳನ್ನು ಓದಿರುವ ಪರಿಣಾಮದಿಂದಲೇ ನಾನು ವಿಮರ್ಶಾತ್ಮಕ ಗುಣವನ್ನು ಬೆಳೆಸಿಕೊಂಡಿದ್ದೇನೆ. ನನ್ನ ಅಭಿಪ್ರಾಯಗಳನ್ನು ಜಾತಿ ಮತ್ತು ಇನ್ನಿತರ ಪೂರ್ವಾಗ್ರಹಗಳಿಂದ ಪರಿಗಣಿಸದೇ ಸಮಚಿತ್ತದಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಮತ್ತೊಮ್ಮೆ ಇಂತಹ ಲೇಖನ ಬರೆಯುವ ಅವಸ್ಥೆ ಬಾರದಿರಲಿ.
- ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ



