ಕರ್ನಾಟಕದಲ್ಲಿ ಜಂಗಲ್ ರಾಜ್ಯ ಶುರುವಾಗಿದೆ: ಬಸವರಾಜ ಬೊಮ್ಮಾಯಿ

3 years ago

#Jungle #state #begun #Karnataka #BasavarajaBommai

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನ ಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸುತ್ತಿರುವ ಬಿಜೆಪಿ ವಿಧಾನಸೌಧದಿಂದ ರಾಜಭವನದವರೆಗೆ ಮೆರವಣಿಗೆಯಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಾಡುಹಗಲೇ ಜನನಿಬಿಡ ಪ್ರದೇಶದಲ್ಲಿ ಹತ್ಯೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಆನಂತರ ಮೆರವಣಿಗೆಯಲ್ಲಿ ತೆರಳಿದ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಜಂಗಲ್ ರಾಜ್ಯ ಶುರುವಾಗಿದೆ. ಜನಸಾಮಾನ್ಯರು ಭಯ, ಭೀತಿ ಇಲ್ಲದೆ ಓಡಾಡುವಂತಿಲ್ಲ. ಜೈನ ಮುನಿ ಕೊಲೆಯಾಗಿದೆ, ನಮ್ಮ ಕಾರ್ಯಕರ್ತನ ಕೊಲೆಯಾಗಿದೆ. ಇಬ್ಬರು ಟೆಕ್ಕಿಗಳ ಕೊಲೆ ಮಾಡಿ ಆ ವ್ಯಕ್ತಿ ತನ್ನ ಇನ್ ಸ್ಟಾ ಗ್ರಾಂನಲ್ಲಿ ಹಾಕುತ್ತಾನೆ. ಕೊಲೆಗಡುಕರಿಗೆ ಯಾವುದೇ ಭಯ ಇಲ್ಲ. ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವ್ಯವಹಾರ ತಡೆಯಲು ಹೋಗಿದ್ದ ಪೊಲೀಸ್ ಅಧಿಕಾರಿಯನ್ನೇ ಕೊಲೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸರ್ಕಾರದ ಮುಂದೆ ತಲೆಬಾಗಿ ಅವರ ಮುಂದೆ ನಿಂತಿದ್ದಾರೆ. ಹೀಗಾಗಿ ಕೊಲೆಗಡುಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ದಪ್ಪ ಚರ್ಮದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಕಾನೂನು ಸುವ್ಯವಸ್ಥೆ ಕಲ್ಪಿಸಲು ಡಿಜಿ ಐಜಿಯನ್ನು ಕರೆಸಿಕೊಂಡು ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇವೆ. ಅವರು ಹಿರಿಯ ಅಧಿಕಾರಿಗಳನ್ನು ಕರೆಯಿಸಿಕೊಂಡು ಮಾತನಾಡುವುದಾಗಿ ಹೇಳಿದ್ದಾರೆ. ರಾಜ್ಯಪಾಲರು ಯಾವ ಸೂಚನೆ ನೀಡುತ್ತಾರೆಯೋ ಅದನ್ನು ನೊಡಿಕೊಂಡು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

Leave a Reply