ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಂಡಿಲ್ಲ: ಜಿ.ಟಿ.ದೇವೇಗೌಡ

3 years ago

#BJP #chosen #Leader #Opposition #GTDeveGowda

ಬೆಂಗಳೂರು: ಬಿಜೆಪಿ ನಾಯಕರ ಧೋರಣೆಯಿಂದ ಬೇಸತ್ತು ಪಕ್ಷ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿ ಆಯ್ಕೆಯಾಗಿರುವ ಲಕ್ಷ್ಮಣ ಸವದಿ ಇದೀಗ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ.

ಇಲ್ಲಿಯವರೆಗೆ ಪ್ರತಿ ಪಕ್ಷ ನಾಯಕನ ಆಯ್ಕೆ ಮಾಡಲಾಗದ ಬಿಜೆಪಿ ಧೋರಣೆಯ ಬಗ್ಗೆ ವ್ಯಂಗ್ಯ ಮಾಡಿರುವ ಅವರು ಸ್ವಲ್ಪ ದಿನ ತಟಸ್ಥವಾಗಿರಿ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ಆರಂಭದಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡುತ್ತಾರೆ. ನಂತರ ಎರವಲು ಸೇವೆಯ ಮೇಲೆ ವಿಪಕ್ಷ ನಾಯಕನ ಸ್ಥಾನ ಬಿಟ್ಟುಕೊಡುತ್ತಾರೆ ಎಂದು ಲೇವಡಿ ಮಾಡಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಏಕೆ ಕೆಳಗಿಳಿಸಿದರು ಎಂದು ಗೊತ್ತಿಲ್ಲ. ಬಹುಶಃ ಲಕ್ಷ್ಮಣ್ ಸವದಿ ಅವರಿಗೆ ಮಾಹಿತಿ ಇರಬಹುದು. ಇನ್ನು ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಂಡಿಲ್ಲ ಎಂದು ಲೇವಡಿ ಮಾಡಿದರು.

ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿಯವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿಷಯ ಕುರಿತು ನನಗಿಂತಲೂ ಜಿ.ಟಿ.ದೇವೇಗೌಡ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಆದರೆ ಅದನ್ನು ಹೇಳುತ್ತಿಲ್ಲ ಎಂದು ತಿರುಗೇಟು ನೀಡಿದರು.

ಇನ್ನು ಸ್ವಲ್ಪ ದಿನ ಸುಮ್ಮನಿರಿ. ವಿರೋಧ ಪಕ್ಷದ ನಾಯಕನ ಸ್ಥಾನ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಬಿಜೆಪಿಯಲ್ಲಿ ಕಚ್ಚಾಡುತ್ತಿದ್ದು, ಯಾರಿಗೂ ವಿಪಕ್ಷ ನಾಯಕನ ಸ್ಥಾನ ಸಿಗುವುದಿಲ್ಲ. ಹೀಗಾಗಿಯೇ ಸದನದಲ್ಲಿ ವಿಪಕ್ಷ ನಾಯಕನ ಕುರ್ಚಿಯ ಮೇಲೆ ಯಾರೂ ಕುಳಿತುಕೊಳ್ಳುತ್ತಿಲ್ಲ. ಕುಮಾರಸ್ವಾಮಿಯವರೇ ವಿರೋಧ ಪಕ್ಷದ ನಾಯಕನಾಗಿ ಒಳ್ಳೆಯ ಕೆಲಸ ಮಾಡುತ್ತಾರೆ. ಆ ಮೇಲೆ ಬಿಜೆಪಿಯವರಿಗೆ ಬಿಟ್ಟುಕೊಡುತ್ತಾರೆ. ಎರವಲು ಸೇವೆಯ ಮೇಲೆ ವಿಪಕ್ಷ ನಾಯಕನ ಸ್ಥಾನ ಹಂಚಿಕೆಯಾಗಲಿದೆ ಎಂದು ಲೇವಡಿ ಮಾಡಿದರು.

ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಯಿಂದ ಆಚೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು. ಅದಕ್ಕೆ ಸವದಿ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾದರು.

Leave a Reply