ಜ್ಞಾನಭಾರತಿ ಉಲ್ಲಾಳ್ ಪಾರಿತೋಷಕ ನಾಟಕ ಸ್ಪರ್ಧೆಗೆ ಮರುಚಾಲನೆ ಅಗತ್ಯ: ಶೂದ್ರ ಶ್ರೀನಿವಾಸ್

3 years ago

ರಂಗಭೂಮಿ ಸಮಾಜದ ಕೈಗನ್ನಡಿ, ಪರಿವರ್ತನೆಗೆ ಪ್ರೇರಕ

ಬೆಂಗಳೂರು: ಕಾಲೇಜು ರಂಗಭೂಮಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ ದಶಕದಲ್ಲಿ ನಡೆಯುತ್ತಿದ್ದ ಜ್ಞಾನಭಾರತಿ ಉಲ್ಲಾಳ್ ಪಾರಿತೋಷಕ ನಾಟಕ ಸ್ಪರ್ಧೆ ಮಹತ್ವವಾದುದು. ಇತ್ತೀಚೆಗೆ ನಾನಾ ಕಾರಣಗಳಿಂದ ನಿಂತಿದ್ದು ಉಲ್ಲಾಳ್ ನಾಟಕ ಸ್ಪರ್ಧೆಗೆ ಮರುಚಾಲನೆ ನೀಡಬೇಕೆಂದು ಲೇಖಕ ಮತ್ತು ಸಂಸ್ಕøತಿ ಚಿಂತಕ ಶೂದ್ರ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘ ಮತ್ತು ಸಂಸ ಥಿಯೇಟರ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಯುವರಂಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಮಹತ್ವದ ನಟರು ಮತ್ತು ನಿರ್ದೇಶಕರು ನಾಟಕ ಸ್ಪರ್ಧೆಯಿಂದ ಹೊರಹೊಮ್ಮಿದ್ದಾರೆ. ಎಂಇಎಸ್ ಕಾಲೇಜಿನವರು ಪ್ರದರ್ಶಿಸಿದ ನನ್ನ ‘ಗಾಂಧಾರಿ’ ನಾಟಕಕ್ಕೆ ಉಲ್ಲಾಳ್ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತ್ತು. ಉಲ್ಲಾಳ್ ನಾಟಕೋತ್ಸವ ಹಲವು ಜನಪರ ಚಳವಳಿಗಳಿಗೂ ಕಾರಣವಾಗಿದೆ ಎಂದರು.

ರಂಗಭೂಮಿಯು ಸಾಹಿತ್ಯವನ್ನು ಓದಲು ಪ್ರೇರೇಪಿಸುತ್ತದೆ. ರಂಗಭೂಮಿ ಸಮಾಜದ ಕೈಗನ್ನಡಿ, ಪರಿವರ್ತನೆಗೆ ಪ್ರೇರಕವಾಗಿದೆ. ಎಲ್ಲರನ್ನೂ ಒಳಗೊಳ್ಳುವ ಶಕ್ತಿ ರಂಗಭೂಮಿಗಿದೆ. ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು ಎಂದು ಕರೆ ನಿಡಿದರು.

ಸರ್ಕಾರಿ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಗ್ರಂಥಾಲಯದಲ್ಲಿ ಕನ್ನಡವಷ್ಟೇ ಅಲ್ಲ ಜಾಗತಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಅವಕಾಶವಾಯಿತು ಎಂದರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘಕ್ಕೆ ಒಂದು ಸಾಂಸ್ಕøತಿಕ ಮತ್ತು ಸಾಹಿತ್ಯಕ ಮಹತ್ವವಿದ್ದು, ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಬೆಳೆಸುವಲ್ಲಿ ಯುವರಂಗ ಶಿಬಿರವನ್ನು ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಟಿ.ಶ್ರೀನಿವಾಸ ನಾಯಕ ಮಾತನಾಡಿ, ಭಾರತದಲ್ಲೇ ಅತ್ಯಂತ ಸಶಕ್ತವಾದ ರಂಗಭೂಮಿ ಕನ್ನಡ ರಂಗಭೂಮಿಯಾಗಿದೆ. ಇಲ್ಲಿ ಹೆಚ್ಚು ಹೆಚ್ಚು ನಾಟಕಗಳು ಪ್ರಯೋಗಗೊಳ್ಳುತ್ತಿವೆ. ಇಲ್ಲಿನವರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಧ್ಯಯನ ಮಾಡಿ ಬಂದವರಾಗಿದ್ದಾರೆ ಎಂದರು.

ರಂಗ ಸಂಘಟಕ ಮತ್ತು ಸಂಸ ಥಿಯೇಟರ್ ಸಂಸ್ಥಾಪಕ ಸಂಸ ಸುರೇಶ್, ನಾಟಕ ನಿರ್ದೇಶಕ ಮತು ನಟ ಪ್ರದೀಪ್ ತಿಪಟೂರು ಅವರು ಉಪಸ್ಥಿತರಿದ್ದರು. ಡಾ. ಬಿ.ಸಿ.ನಾಗೇಂದ್ರಕುಮಾರ್ ಸ್ವಾಗತಿಸಿದರು. ಕನ್ನಡ ಸಂಘದ ಸಂಚಾಲಕ ಡಾ.ರುದ್ರೇಶ್ ಅದರಂಗಿ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಯುವರಂಗ ಶಿಬಿರದಲ್ಲಿ ಭಾಗವಹಿಸಿ ಲೋರ್ಕಾ ಅವರು ರಚಿಸಿರುವ, ಕೆ.ಎನ್.ವಿಜಯಲಕ್ಷ್ಮಿ ಅವರು ಅನುವಾದಿಸಿರುವ ‘ಚಮ್ಮಾರನ ಚಾಲೂಕಿ ಹೆಂಡತಿ’ ನಾಟಕ ತರಬೇತಿಯನ್ನು ಪಡೆಯುತ್ತಿದ್ದಾರೆ.

Leave a Reply