ಜೆಡಿಎಸ್ ಸ್ಪರ್ಧಿಸಿರುವ ಮೂರು ಸೇರಿ ನಾಲ್ಕು ಕ್ಷೇತ್ರಗಳಲ್ಲೂ ಸೋಲಲಿದೆ: ಡಿ.ಕೆ.ಶಿವಕುಮಾರ್

2 years ago

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಅತ್ಯಧಿಕ ಸ್ಥಾನ ಗಳಿಸಲಿದೆ. ಜೆಡಿಎಸ್ ಗೆ ತಾನು ಸ್ಪರ್ಧಿಸಿರುವ ಮೂರು ಮತ್ತು ಮತ್ತೊಂದು ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಲ್ಲೂ ಸೋಲುಂಟಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.

ರಾಜ್ಯದ ಚುನಾವಣೆ ಕಾರ್ಯತಂತ್ರದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಮಗ್ರ ಮಾಹಿತಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಸಮಯದಲ್ಲೂ ಸಾಮಾಜಿಕ ನ್ಯಾಯ ತತ್ವ ಎತ್ತಿ ಹಿಡಿದಿದೆ. ಪಕ್ಷ ಒಟ್ಟು 8 ಜನ ಒಕ್ಕಲಿಗ ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಲು ಟಿಕೆಟ್ ನೀಡಿದೆ. ಕಾಂಗ್ರೆಸ್ ನಿಂದ ಒಕ್ಕಲಿಗರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದರು.

ಜೆಡಿಎಸ್ನವರು ಬೆಂಗಳೂರು ಗ್ರಾಮಾಂತರದಲ್ಲಿ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಯನ್ನು ತಮ್ಮವರು ಎಂದು ಹೇಳಿಕೊಂಡು ನಾಲ್ಕು ಕಡೆ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಖಚಿತವಾಗಿ ಹೇಳುತ್ತೇನೆ. ಜೆಡಿಎಸ್ ಚಿಹ್ನೆಯ ಮೇಲೆ ಸ್ಪರ್ಧಿಸಿರುವ ಮಂಡ್ಯ, ಹಾಸನ, ಕೋಲಾರ ಸೇರಿ ಈ ನಾಲ್ಕೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸೋಲು ಕಾಣಲಿದ್ದಾರೆ ಎಂದರು.

ಬಿಜೆಪಿಯ ಒಕ್ಕಲಿಗ ಶಾಸಕರು ಮತ್ತು ಅಭ್ಯರ್ಥಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜದ ಜನ ಮತ್ತು ಶ್ರೀ ಮಠದ ಸ್ವಾಮೀಜಿಗಳು ದಡ್ಡರಲ್ಲ. ಇವರು ದೂರದ ಬೆಟ್ಟ ತೋರಿಸುತ್ತಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳ ಕಾಲ ಸಮಾಜಕ್ಕೆ, ರಾಜ್ಯಕ್ಕೆ ಸೇವೆ ಸಲ್ಲಿಸುವ ಅವಕಾಶ ನಮಗಿದೆ. ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿದ್ದೇನೆ. ಜನರಿಗಾಗಿ ಹಾಗೂ ಸಮಾಜಕ್ಕಾಗಿ ಕೆಲಸ ಮಾಡಲು ಬದ್ಧನಿದ್ದೇನೆ. ಸಮಾಜದ ಜನ ಇದನ್ನು ಅರ್ಥ ಮಾಡಿಕೊಂಡಿರುತ್ತಾರೆ ಎಂದರು.

ಕುಮಾರಸ್ವಾಮಿ ಅವರ ಸರ್ಕಾರವನ್ನು ಪತನಗೊಳಿಸಿದ ಡಾ.ಸಿ.ಅಶ್ವತ್ಥನಾರಾಯಣ, ಸಿ.ಪಿ.ಯೋಗೇಶ್ವರ್ ಅವರು ಇಂದು ಶ್ರೀಮಠಕ್ಕೆ ಹೋಗಿದ್ದಾರೆ. ಸರ್ಕಾರ ಪತನಗೊಳ್ಳುವಾಗ ಬಿಜೆಪಿಯ ಯಡಿಯೂರಪ್ಪ ಅವರು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ವಿರುದ್ಧವಾಗಿ ಏನು ಹೇಳಿದ್ದರು ಎಂದು ಸಾರ್ವಜನಿಕವಾಗಿ ದಾಖಲೆಗಳು ಲಭ್ಯವಿದೆ. ನಾನು ಯಾವತ್ತೂ ಅವರುಗಳ ವಿರುದ್ಧ ಅಂತಹ ಭಾಷೆಯನ್ನು ಬಳಕೆ ಮಾಡಿಲ್ಲ. ಯಡಿಯೂರಪ್ಪ ಅವರ ವಿರುದ್ಧ ದೇವೇಗೌಡರು ಹೇಳಿದ ಮಾತುಗಳೂ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿವೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ಈ ಹಿಂದೆ ನಮ್ಮ ಪಕ್ಷದ ಕಾರ್ಯಕರ್ತರು ಭೋಜನಾ ವ್ಯವಸ್ಥೆ ಮಾಡಿದಾಗ ಬಿಜೆಪಿಯವರು ಕೇಸು ದಾಖಲಿಸಿದ್ದರು. ಈಗ ಬಿಜೆಪಿಯವರೇ ಊಟ ಹಾಕಿಸುತ್ತಿದ್ದಾರೆ. ಮಾಧ್ಯಮದವರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಹೋಗಿ ಊಟ ಮಾಡಿಕೊಂಡು ಬರಲಿ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಮಠದ ಸ್ವಾಮೀಜಿಗಳ ಸ್ಪರ್ಧೆಗೆ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಬೆಂಬಲ ನೀಡಲು ಸಾಧ್ಯವಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ. ಇದಕ್ಕೂ ಮೊದಲೇ ಸ್ವಾಮೀಜಿಗಳು ಸ್ಪರ್ಧಿಸುವುದಾಗಿ ಹೇಳಿದ್ದರೆ ಅದು ಬೇರೆಯ ಮಾತು. ನಮಗೆ ಸ್ವಾಮೀಜಿಯ ಬಗ್ಗೆ ಗೌರವ ಇದೆ. ಆದರೆ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ತಾವು ನಿರ್ಧಾರವನ್ನು ಬದಲಿಸಲಾಗುವುದಿಲ್ಲ ಎಂದರು.

Leave a Reply