ಬೆಂಗಳೂರು: ಅಚ್ಚರಿಯ ಹಾಗೂ ಕ್ಷೀಪ್ರ ರಾಜಕೀಯ ಬೆಳವಣಿಗೆ ಒಂದರಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ನ ಭಿನ್ನಮತದ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಮೂಲಕ ಚುನಾವಣೆ ಅಖಾಡಕ್ಕೆ ಭರ್ಜರಿ ರಂಗು ಬಂದಂತಾಗಿದೆ.
ಫೆಬ್ರವರಿ 27ರಂದು ನಡೆಯುತ್ತಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ನಾರಾಯಣ ಸಾ ಬಾಂಡಗೆ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಪ್ರಮುಖರೊಂದಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ಹಿರಿಯ ನಾಯಕ ಕುಪೇಂದ್ರ ರೆಡ್ಡಿ ಅವರೊಂದಿಗೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರೊಂದಿಗೆ ತೆರಳಿ ಕುಪೇಂದ್ರ ರೆಡ್ಡಿ ಅವರ ನಾಮಪತ್ರ ಸಲ್ಲಿಸಿದರು.
ವಿಧಾನಸಭೆಯಲ್ಲಿ ಹೊಂದಿರುವ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಧ್ಯತೆಯಿದೆ. ಇದಕ್ಕಾಗಿ ಪಕ್ಷದ ಹಿರಿಯ ನಾಯಕ ಅಜಯ್ ಮಾಕೇನ್ ಅವರನ್ನು ಕಣಕ್ಕಿಳಿಸಿದೆ. ಸದ್ಯ ರಾಜ್ಯಸಭೆ ಸದಸ್ಯತ್ವ ದಿಂದ ನಿವೃತ್ತರಾಗುತ್ತಿರುವ ಜಿ.ಸಿ ಚಂದ್ರಶೇಖರ್ ಮತ್ತು ನಾಸಿರ್ ಹುಸೇನ್ ಅವರಿಗೆ ಮರು ಆಯ್ಕೆಯಾಗಲು ಅವಕಾಶ ನೀಡಿದೆ.
ರಾಜ್ಯಸಭೆ ಸದಸ್ಯರಾಗಲು ಪ್ರತಿಯೊಬ್ಬ ಅಭ್ಯರ್ಥಿಗೆ 46 ಶಾಸಕರ ಮತಗಳ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡ ನಂತರ ಹೆಚ್ಚುವರಿ ಮತಗಳು ಉಳಿಯಲಿವೆ.
ವಿಧಾನಸಭೆಯಲ್ಲಿ ಜೆಡಿಎಸ್ ಹೊಂದಿರುವ ಸಂಖ್ಯಾಬಲದಲ್ಲಿ ಒಬ್ಬ ಸದಸ್ಯನ್ನು ಕೂಡ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ದಿಡೀರ್ ನಿಲುವು ಬದಲಾಯಿಸಿದ ಜೆಡಿಎಸ್ ನಾಯಕತ್ವ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ಅನುದಾನ ಹಂಚಿಕೆ ಸೇರಿದಂತೆ ಹಲವು ಕಾರಣಗಳಿಂದ ಕಾಂಗ್ರೆಸ್ ಒಡೆದ ಮರೆಯಾಗಿದೆ. ಹಲವು ಶಾಸಕರು ನಾಯಕತ್ವದ ವಿರುದ್ಧ ತಿರುಗಿ ಬಿದ್ದರೆ, ಇಂತಹ ಬಂಡಾಯದ ಲಾಭ ಪಡೆಯಬಹುದು ಎಂಬ ಲೆಖ್ಖಾಚಾರದಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ತನ್ನ ಎಲ್ಲ ಮತಗಳನ್ನು ವರ್ಗಾಯಿಸಲಿದೆ ಎಂದು ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿಳಿಸಿದ್ದರು.
ಕುಮಾರಸ್ವಾಮಿ ನೀಡಿದ ಆಹ್ವಾನ ಕುರಿತು ಬಿಜೆಪಿ ಚಿಂತಕರ ಚಾವಡಿ ಹಲವು ಸುತ್ತಿನ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂಬ ನಿಲುವಿಗೆ ಬಂದಿತು. ಒಂದು ವೇಳೆ ಜೆಡಿಎಸ್ ಆಡಳಿತ ಪಕ್ಷ ಕಾಂಗ್ರೆಸ್ಸಿನಲ್ಲಿರುವ ಒಡಕಿನ ಲಾಭ ಲಾಭ ಪಡೆಯುವುದಾದರೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಬಿಜೆಪಿಯ ಹೆಚ್ಚುವರಿ ಮತಗಳನ್ನು ಅವರಿಗೆ ವರ್ಗಾಯಿಸಬಹುದು ಎಂಬ ನಿರ್ಧಾರ ಕೈಗೊಂಡು ಕುಮಾರಸ್ವಾಮಿ ಅವರಿಗೆ ಮಾಹಿತಿ ರವಾನಿಸಲಾಯಿತು.
ಬಿಜೆಪಿಯಿಂದ ಹೆಚ್ಚುವರಿ ಮತಗಳು ದೊರಕಲಿವೆ ಎಂಬ ಖಾತ್ರಿ ಸಿಗುತ್ತಿದ್ದಂತೆ ರಂಗ ಪ್ರವೇಶಿಸಿದ ಕುಮಾರಸ್ವಾಮಿ, ಕಾಂಗ್ರೆಸ್ಸಿನಲ್ಲಿರುವ ಒಡಕಿನ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದಾರೆ.
ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವ ಭರವಸೆ ನೀಡಿದ್ದಾರೆ. ಇದರೊಂದಿಗೆ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಅವರ ಮತವನ್ನು ಜೆಡಿಎಸ್ ನಂಬಿಕೊಂಡಿದೆ. ಇದನ್ನು ಹೊರತುಪಡಿಸಿ ಬೇಕಿರುವ ಇತರೆ ಮೂರು ಮತಗಳ ಕೊರತೆ ನೀಗಿಸಿಕೊಳ್ಳಲು ಕಾಂಗ್ರೆಸ್ಸಿನಲ್ಲಿರುವ ಭಿನ್ನಮತದ ಲಾಭ ಪಡೆಯಲು ಲೆಕ್ಕಾಚಾರ ಹಾಕಲಾಗಿದೆ.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮ ತಂತ್ರಗಾರಿಕೆ ಏನು ಎಂಬುದನ್ನು ನೋಡಬೇಕಾದರೆ ಈ ತಿಂಗಳ 27ರವರೆಗೆ ಕಾಯಬೇಕು. ಒಂದು ಮಾತ್ರ ಖಚಿತ ನಮ್ಮ ಮೂವರು ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ವಿಫಲವಾಗಿರುವುದಕ್ಕೆ ಬಿಜೆಪಿ ಜೊತೆ ಹೋಗಿದ್ದು, ಎರಡು ಪಕ್ಷಗಳು ಒಟ್ಟಿಗೆ ಸೇರಿ ಹೊಸ ನಂಟಸ್ತಿಕೆ ಮಾಡುತ್ತಿವೆ. ಅಲ್ಲಿರುವಂತವರು ಅವರ ಆತ್ಮಸಾಕ್ಷಿ ಮತವನ್ನು ನಮಗೆ ಕೊಡುತ್ತಾರೆ ಎಂಬ ಭರವಸೆ ಇದೆ. ಮತದಾನದ ನಂತರ ಎಷ್ಟು ಮತಗಳು ಬರಲಿವೆ ಎಂಬುದನ್ನು ತಿಳಿಸುತ್ತೇವೆ ಎಂದರು.
ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಜಯ್ ಮಾಕೇನ್ ಅವರ ಕುಟುಂಬ ತ್ಯಾಗ ಮಾಡಿದೆ. ದೇಶದ ಐಕ್ಯತೆ, ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದೆ. ವಿದ್ಯಾರ್ಥಿಯಿಂದಲೇ ಸಂಘಟನೆ ಮಾಡಿದ್ದಾರೆ. ನಮ್ಮ ಪಕ್ಷದ ಆಧಾರ ಸ್ತಂಭ. ಅದಕ್ಕಾಗಿ ಬಹಳ ಸಂತೋಷದಿಂದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.
ಬಿಜೆಪಿ, ಜೆಡಿಎಸ್ನವರು ಈ ಹಿಂದೆ ಹೊರಗಿನವರನ್ನು ಕರೆತಂದು ಸ್ಪರ್ಧೆಗಿಳಿಸಿದ್ದರಲ್ಲ ಅದರ ಬಗ್ಗೆ ಅವರನ್ನೇ ಕೇಳಿ ಎಂದರು.
ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯನಾಯಕರ ಸಲಹೆ ಮೇರೆಗೆ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ನಮಗೆ ಗೆಲುವಿಗೆ ಅಗತ್ಯವಿರುವ ಮತಗಳ ಕೊರತೆಯಿದ್ದರೂ ರಾಜ್ಯಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದೇವೆ ಎಂದರು.
ನಮಗೆ ಸಂಖ್ಯಾಬಲದ ಕೊರತೆ ಇರುವುದು ನಿಜ. ಚುನಾವಣೆಯಲ್ಲಿ ಯಾವ ನಿರ್ಧಾರ ಆಗಲಿದೆಯೋ ಕಾದು ನೋಡೋಣ. ಬಿಜೆಪಿಯ ಹೆಚ್ಚುವರಿ ಮತಗಳು ನಮಗೆ ದೊರೆಯಲಿವೆ. ಹೀಗಾಗಿ ಬಿಜೆಪಿ-ಜೆಡಿಎಸ್ ವತಿಯಿಂದ 2ನೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದ್ದೇವೆ ಎಂದರು.




