ಬಡವರ ಅನ್ನ ಮತ್ತು ಆರೋಗ್ಯ ಕಸಿಯುವುದು ಮನುಷ್ಯತ್ವದ ಲಕ್ಷಣವಲ್ಲ.
ಈ ದಿನ ದಿನಪತ್ರಿಕೆಯ ಮುಖಪುಟದ ಮುಖ್ಯ ವರದಿಯಾಗಿ ಪ್ರಕಟವಾಗಿರುವ ಅನಾಥ ಗರ್ಭಿಣಿ ಮತ್ತು ಅವಳಿ ಶಿಶುಗಳ ಸಾವಿನ ವರದಿ ಮನವನ್ನು ಕಲಕಿತು.. ಆ ಮಹಿಳೆಗೆ ಆಧಾರ್ ಕಾರ್ಡ್ ಇಲ್ಲ ಎಂಬ ಏಕೈಕ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ ತುಮಕೂರಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಕಠಿಮ ಕೈಗೊಳ್ಳುವುದು ಸರ್ಕಾರದ ನೈತಿಕ ಕರ್ತವ್ಯವಾಗಿದೆ. ಇಂತಹ ಅವ್ಯವಸ್ಥೆಯಿಂದ ಬಡವರನ್ನು ರಕ್ಷಿಸುವುದು ಜನ ಪ್ರತಿನಿಧಿಗಳ ಕರ್ತವ್ಯ ಕೂಡಾ ಹೌದು.
ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಬಡವರಿಗೆ ಮತ್ತು ನಗರಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಅಂದರೆ ಹತ್ತು ರೂಪಾಯಿ ಗೆ ಅನ್ನ ಸಾಂಬಾರು, ಎರಡು ಇಡ್ಲಿ ಹೀಗೆ ಆಹಾರ ದೊರೆಯುತ್ತಿತ್ತು. ಇದು ಕಾಂಗ್ರೇಸ್ ಸರ್ಕಾರದ ಸ್ಥಾಪನೆ ಎಂಬ ಕಾರಣಕ್ಕಾಗಿ ಈಗಿನ ಬಿ.ಜೆ.ಪಿ. ಸರ್ಕಾರ ಹಣದ ಕೊರತೆ ಇದೆ ಎಂಬನೆಪ ಹೇಳಿ ಬಹುತೇಕ ಎಲ್ಲೆಡೆ ಸ್ಥಗಿತಗೊಳಿಸಲಾಗಿದೆ.
ದೆಹಲಿಯ ಯಾವನೋ ಒಬ್ಬ ನಾಯಕ ಅಥವಾ ಶಾಸಕರ ಸಭೆಗೆ ಬೆಂಗಳೂರಿನ ಹೊರವಲಯದ ಪಂಚತಾರ ರಿಸಾರ್ಟ್ ಗಳಲ್ಲಿ ದಿನವೊಂದಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡುವ ಸರ್ಕಾರಕ್ಕೆ ಬಡವರು ತಿನ್ನುವ ಆಹಾರಕ್ಕೆ ಹಣವಿಲ್ಲ ಎಂದು ಹೇಳುವುದು ಆತ್ಮವಂಚನೆಯ ಮಾತಲ್ಲದೆ ಬೇರೇನೂ ಅಲ್ಲ.
ಇಂದಿರಾಗಾಂಧಿ ಹೆಸರು ಇರುವ ಕಾರಣಕ್ಕೆ ಸಣ್ಣತನ ತೋರಿಸುವುದನ್ನು ಈ ಸರ್ಕಾರ ಮೊದಲು ಬಿಡಬೇಕು. ವಾಜಪೇಯಿ ಹೆಸರಿನಲ್ಲಿ ಅನೇಕ ಯೋಜನೆಗಳಿವೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬಡವರ ಪರವಾಗಿರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಮನುಷ್ಯತ್ವವನ್ನು ಹೊಂದಿರಬೇಕು.
ಚಂದ್ರಶೇಖರ ಐಜೂರ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿರುವ ಬಡವನೊಬ್ಬನ ನೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ಕ್ಯಾಂಟಿನ್ ನಲ್ಲಿ ಒಂದು ಊಟ ಐವತ್ತು ರೂಪಾಯಿ. ನನಗೆ ಹಾಗೂ ರೋಗಿಯಾಗಿರುವ ನನ್ನ ತಾತನಿಗೆ ದಿನ ನಿತ್ಯ ಮುನ್ನೂರು ರೂಪಾಯಿ ಊಟ ತಿಂಡಿಗೆ ಬೇಕು.ಇಂದಿರಾ ಕ್ಯಾಂಟಿನ್ ಇದ್ದಾಗ ಐವತ್ತು ,ಅರವತ್ತು ರೂಪಾಯಿಗಳಲ್ಲಿ ಎಲ್ಲವೂ ಮುಗಿಯುತ್ತಿತ್ತು ಎಂದು ಬಡವನೊಬ್ಬ ನೋವು ಹಂಚಿಕೊಂಡಿದ್ದಾನೆ.
ಈ ರಾಜಕೀಯ ಸಣ್ಣತನವನ್ನು ಬದಿಗಿಟ್ಟು ನಾವು ಬದುಕುತ್ತಿರುವ ವರ್ತಮಾನದ ಜಗತ್ತನ್ನು ಗ್ರಹಿಸುವುದನ್ನು ಈ ರಾಜಕಾರಣಿಗಳು ಮೊದಲು ಕಲಿಯಬೇಕು.ಇಲ್ಲವಾದರೆ ಜನತೆ ಸರ್ಕಾರಕ್ಕೆ ಪಾಠ ಕಲಿಸಬೇಕು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



